ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಷ ದಸರಾಗೆ ತಡೆ: ಜಂಬೂಸವಾರಿಯವರೆಗೆ ನಿರಂತರ ಹೋರಾಟ ನಡೆಸಲು ನಿರ್ಧಾರ

Last Updated 30 ಸೆಪ್ಟೆಂಬರ್ 2019, 9:49 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಿತ್ಯ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಿಷ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ತಿಳಿಸಿದರು.

‘ಸ್ಥಳೀಯರ ವಿರೋಧ ಇದೆ ಎಂಬ ಕಾರಣಕ್ಕೆ ಮಹಿಷ ದಸರಾವನ್ನು ನಿಲ್ಲಿಸಲಾಯಿತು. ಇದೇ ಮಾನದಂಡದ ಆಧಾರದ ಮೇಲೆ ಮೈಸೂರು ದಸರಾ ನಿಲ್ಲಿಸಬೇಕು. ನಾವೂ ಸಾವಿರಾರು ಸಂಖ್ಯೆಯಲ್ಲಿ ದಸರಾ ನಿಲ್ಲಿಸಬೇಕು ಎಂದು ಪತ್ರ ಬರೆಯುತ್ತೇವೆ’ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಒಂದು ವೇಳೆ ದಸರಾ ನಿಲ್ಲಿಸದಿದ್ದರೆ, ನಮ್ಮನ್ನು ಚರ್ಚೆಗೆ ಕರೆಯದಿದ್ದರೆ ನಿತ್ಯ ಪ್ರತಿಭಟನೆ ನಡೆಸಲಾಗುವುದು. ಜಂಬೂ ಸವಾರಿಯ ದಿನವೂ ಪ್ರತಿಭಟನೆ ರೂಪಿಸಲಾಗುವುದು, ಮೈಸೂರಿನಲ್ಲಿ ಅಸ್ಪೃಶ್ಯತೆ ನಡೆಯುತ್ತಿದೆ ಎಂದು ವಿದೇಶಿ ಪ್ರವಾಸಿಗರಿಗೆ ಇಂಗ್ಲಿಷ್ ಕರಪತ್ರ ವಿತರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ದಸರಾ ಉದ್ಘಾಟನೆಯ ದಿನ ಸಮಾರಂಭ ವೀಕ್ಷಿಸಲು ಬಂದಿದ್ದವರನ್ನು ವಿನಾಕಾರಣ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಇದು ಸರಿಯಲ್ಲ ಎಂದು ಖಂಡಿಸಿದರು.

ಸಚಿವ ವಿ.ಸೋಮಣ್ಣ ಅವರೊಂದಿಗೆ ಚರ್ಚೆ ಮಾಡಬೇಕು ಎಂದರೆ, ಅವರು ‘ನಿಮ್ಮ ಜತೆ ಚರ್ಚೆ ನಡೆಸಲು ಆಗಲ್ಲ’ ಎಂದು ಹೇಳಿದ್ದಾರೆ. ನಾವೇನೂ ಅವರೊಂದಿಗೆ ಹರಟೆ ಹೊಡೆಯಲು ಕೇಳಿಲ್ಲ’ ಎಂದು ಹರಿಹಾಯ್ದರು.

‘ಸಚಿವ ಸಿ.ಟಿ.ರವಿ ಅವರು ನಮ್ಮನ್ನು ಮಾನಸಿಕ ಅಸ್ವಸ್ಥರು ಎಂದು ಕರೆದಿದ್ದಾರೆ. ನಿಜವಾದ ಮಾನಸಿಕ ಅಸ್ವಸ್ಥರು ಅವರೇ. ಅವರಿಗೆ ನಮ್ಮ ವತಿಯಿಂದಲೇ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದು ಲೇವಡಿ ಮಾಡಿದರು.

ಯಾರನ್ನು ಅವಾಚ್ಯ ಶಬ್ದಗಳಿಂದ ಸಂಸದ ಪ್ರತಾಪಸಿಂಹ ನಿಂದಿಸಿದರೋ ಅವರನ್ನೇ ತನ್ನ ರಕ್ಷಣೆಗೆ ಇಟ್ಟುಕೊಂಡು ದಸರಾವನ್ನು ಉದ್ಘಾಟಿಸಿದ್ದಾರೆ ಎಂದು ಕಿಡಿಕಾರಿದರು.

ದಲಿತ ವೆಲ್‌ಫೇರ್ ಟ್ರಸ್ಟ್‌ ಅಧ್ಯಕ್ಷ ಶಾಂತರಾಜು ಮಾತನಾಡಿ, ‘ಮಹಿಷನ ಪೂಜೆಗೆ ಅನುಮತಿ ನೀಡಿದರೆ ಮುಂದೆ ನಕ್ಸಲರನ್ನೂ ಪೂಜಿಸುತ್ತಾರೆ ಎಂದಿದ್ದಾರೆ. ಆದರೆ, ಶೂದ್ರರಾಗಿರುವ ಸಿ.ಟಿ.ರವಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಇದೇ ನಕ್ಸಲರು, ಪ್ರಗತಿಪರರು ಕಾರಣ’ ಎಂದು ಹೇಳಿದರು.

ಮುಖಂಡರಾದ ಸೋಸಲೆ ಸಿದ್ದರಾಜು, ಪುನೀತ್, ಅಶೋಕ, ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT