ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವತೆತ್ತ ಕೊರೊನಾ ವಾರಿಯರ್‌ಗಳನ್ನು ಹುತಾತ್ಮರೆನ್ನಿ: ಡಾ. ಮಂಜುನಾಥ್

Last Updated 17 ಅಕ್ಟೋಬರ್ 2020, 6:39 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಕೊರೊನಾ ವಾರಿಯರ್‌ಗಳನ್ನು ಹುತಾತ್ಮರೆಂದುಕರೆಯಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ ಶನಿವಾರ ಇಲ್ಲಿ ಹೇಳಿದರು.

ನಾಡಹಬ್ಬ ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ರಕ್ಷಣೆಯ ಕಾರ್ಯದಲ್ಲಿ ಮೃತಪಟ್ಟ ಯೋಧರನ್ನು ಹುತಾತ್ಮ ಯೋಧರೆಂದು ಗೌರವಿಸುವಂತೆ, ಮೃತಪಟ್ಟ ಕೊರೊನಾ ಯೋಧರಿಗೂ ಅಂಥದೇ ಎಲ್ಲ ಗೌರವ ಸಲ್ಲಬೇಕು ಎಂದರು.

ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಹಾಗೂ ಹೋರಾಟದಲ್ಲಿ ನಿರತರಾದವರಿಗೆ ಪ್ರಶಂಸಾ ಪತ್ರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.

ದೇಶದಲ್ಲಿ 550ಕ್ಕೂ ಹೆಚ್ಚು ವೈದ್ಯರು 700 ಕ್ಕೂ ಹೆಚ್ಚು ನರ್ಸ್‌ಗಳು ಮೃತಪಟ್ಟಿದ್ದು, ಅವರೆಲ್ಲರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿಯನ್ನ ದೇವಿ ಚಾಮುಂಡಿ ನೀಡಲೆಂದು ಪ್ರಾರ್ಥಿಸಿದರು.

ದಸರೆಯ ಇತಿಹಾಸದಲ್ಲಿ ವೈದ್ಯರೊಬ್ಬರಿಗೆ ದಸರಾ ಉದ್ಘಾಟನೆಯ ಭಾಗ್ಯ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಅವರು, ಇದು ತಮಗೆ ಸಿಕ್ಕ ಜೀವಿತಾವಧಿಯ ಗೌರವ ಎಂದರು.

ಶೀಘ್ರವೇ ಕೊರೊನಾಕ್ಕೆ ಲಸಿಕೆ ಸಿಗಬೇಕು, ಸೋಂಕಿನಿಂದ ಮುಕ್ತಿ ಸಿಗಬೇಕು ಹಾಗೂ ಜಲಪ್ರಳಯದ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಪ್ರಾರ್ಥಿಸಿದರು.

ಅಧ್ಯಯನವೊಂದರ ಪ್ರಕಾರ ವೈದ್ಯರ ಆಯಸ್ಸು ಹತ್ತು ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಇದಕ್ಕೆ ವೈದ್ಯ ವೃತ್ತಿಯಲ್ಲಿನ ಒತ್ತಡ, ಮಾನಸಿಕ ಹಾಗೂ ದೈಹಿಕ ಒತ್ತಡ ಕಾರಣ ಎಂದರು. ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ, ಆಸ್ಪತ್ರೆ ಆಸ್ತಿ–ಪಾಸ್ತಿ ನಾಶ ಮಾಡುವಂಥ ಘಟನೆಗಳು ಅವರ ಸ್ಥೈರ್ಯವನ್ನು ಕುಂದಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದ್ದು, ಈ ಕಾರಣಕ್ಕಾಗಿಯೇ ಅವರು ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದ ಡಾ. ಮಂಜುನಾಥ್‌, ಸೌಹಾರ್ದಯುತ ವಾತಾವರಣದಲ್ಲಿ ಮಾತ್ರ ವೈದ್ಯರು ನಿರಾತಂಕವಾಗಿ ಕೆಲಸ ಮಾಡಬಹುದು ಎಂದರು.

ಗ್ರಾಮೀಣ ಭಾಗದ ಆಸ್ಪತ್ರೆಗಳನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಿಂದ ಹೊರಗಿಟ್ಟು, ಜಿಲ್ಲಾ ಕೇಂದ್ರದಿಂದ ನಿರ್ವಹಣೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಾಮಾಜಿಕ ಜಾಲತಾಣವು ಸಮಾಜದ ಆರೋಗ್ಯ ಕೆಡಿಸುತ್ತಿರುವುದಾಗಿ ಆತಂಕ ವ್ಯಕ್ತಪಡಿಸಿದ ಡಾ. ಮಂಜುನಾಥ್‌, ಅದು ಸಮಾಜಕ್ಕೆ ಸೇತುವೆಯಾಗಿ ಕೆಲಸ ಮಾಡಬೇಕೇ ಹೊರತು, ಗೋಡೆಯಾಗಿ ಅಲ್ಲ ಎಂದರು.

ಕಾರ್ಯಕ್ರದಲ್ಲಿ ಕೊರೊನಾ ಯೋಧರಾದ, ಮೈಸೂರು ಎಚ್‌ಎಚ್‌ಎಂಬಿಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನವೀನ್‌ ಟಿ.ಆರ್‌, ಜಿಲ್ಲಾ ಆಸ್ಪತ್ರೆಯ ಹಿರಿಯ ಶುಶ್ರೂಷಾಧಿಕಾರಿ ರುಕ್ಮಿಣಿ, ಪೊಲೀಸ್‌ ಕಾನ್‌ಸ್ಟೆಬಲ್‌ ಕುಮಾರ ಪಿ, ಪೌರಕಾರ್ಮಿಕರಾದ ಮರಗಮ್ಮ,ನಂಜನಗೂಡಿನ ಆಶಾ ಕಾರ್ಯಕರ್ತೆ ನೂರ್ ಜಾನ್, ಸಮಾಜ ಸೇವಕ ಅಯೂಬ್‌ ಅಹಮದ್‌ ಅವರನ್ನು ಸನ್ಮಾನಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT