ಗುರುವಾರ , ನವೆಂಬರ್ 26, 2020
22 °C
ಮೈಸೂರು ಅರಮನೆ ಆವರಣದಲ್ಲಿ ಗಜಪಡೆ, ಅಶ್ವಪಡೆ: ಫಿರಂಗಿಗಳಿಂದ ಕುಶಾಲ ತೋಪು ಸಿಡಿಸುವಿಕೆ

ಶನಿವಾರ ಜಂಬೂ ಸವಾರಿ ಅಂತಿಮ ತಾಲೀಮು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಗೆ ಎರಡು ದಿನವಷ್ಟೇ ಬಾಕಿಯಿದೆ.

ದಸರಾ ಮಹೋತ್ಸವದಲ್ಲಿ ಜಂಬೂ ಸವಾರಿ ತನ್ನದೇ ಆದ ಖ್ಯಾತಿ, ಜನಾಕರ್ಷಣೆಯನ್ನು ಹೊಂದಿದೆ.

ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದೊಳಗೆ ನಡೆಯಲಿರುವ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿದೆ.

ಇದಕ್ಕೆ ಪೂರಕವಾದ ತಾಲೀಮು ಹಲವು ದಿನಗಳಿಂದ ನಡೆದಿದೆ. ಗುರುವಾರ ಜಂಬೂ ಸವಾರಿಗೆ ಪುಷ್ಪಾರ್ಚನೆಯ ತಾಲೀಮು ನಡೆದಿತ್ತು.

ಶುಕ್ರವಾರ ಬೆಳಿಗ್ಗೆ 8ರಿಂದ 9 ಗಂಟೆಯವರೆಗೂ ಅಭಿಮನ್ಯು ನೇತೃತ್ವದ ಗಜಪಡೆ, ಅಶ್ವರೋಹಿ ಪಡೆ ತಾಲೀಮಿನಲ್ಲಿ ಪಾಲ್ಗೊಂಡಿತ್ತು. ಪುಷ್ಪಾರ್ಚನೆ, ಗೌರವ ವಂದನೆ ಸೇರಿದಂತೆ ವಿಜಯದಶಮಿಯಂದು ನಡೆಯಲಿರುವ ಜಂಬೂಸವಾರಿಯ ಬಹುತೇಕ ಸಂಪ್ರದಾಯಗಳು ಪಾಲನೆಯಾದವು.

ಪೊಲೀಸ್‌ ವಾದ್ಯ ವೃಂದ ಸಹ ತಾಲೀಮಿನಲ್ಲಿ ಭಾಗಿಯಾಗಿತ್ತು. ಫಿರಂಗಿಗಳಿಂದ ಕುಶಾಲ ತೋಪು ಹಾರಿಸುವಿಕೆಯೂ ನಡೆಯಿತು. ಸಿಡಿಮದ್ದಿನ ಸದ್ದಿಗೆ ಯಾವೊಂದು ಗಜ, ಅಶ್ವ ಕೊಂಚವೂ ಬೆದರಿಲಿಲ್ಲ. ನಿಂತಲ್ಲಿಂದ ಕದಲಲಿಲ್ಲ.

ಅಂತಿಮ ತಾಲೀಮು ಶನಿವಾರ

ಶನಿವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಅರಮನೆಯ ಆವರಣದಲ್ಲಿ ಜಂಬೂ ಸವಾರಿಯ ಅಂತಿಮ ತಾಲೀಮು ನಡೆಯಲಿದೆ ಎಂಬುದನ್ನು ಮೂಲಗಳು ಖಚಿತ ಪಡಿಸಿವೆ.

ಈ ಅಂತಿಮ ತಾಲೀಮು ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಯ ಪ್ರತಿರೂಪದಂತೆ ಇರಲಿದೆ ಎನ್ನಲಾಗಿದೆ.

ಕಲಾ ತಂಡಗಳು, ಸ್ತಬ್ಧಚಿತ್ರಗಳು, ಪೊಲೀಸ್ ವಾದ್ಯವೃಂದ, ಫಿರಂಗಿಗಳಿಂದ 21 ಕುಶಾಲ ತೋಪು ಸಿಡಿಸುವಿಕೆ ಸೇರಿದಂತೆ ಜಂಬೂ ಸವಾರಿಯ ಸಕಲ ಸಂಪ್ರದಾಯ ಪಾಲನೆಯಾಗಲಿದೆ ಎಂಬುದು ಗೊತ್ತಾಗಿದೆ.

ಜಿಲ್ಲಾಡಳಿತದ ಉನ್ನತ ಅಧಿಕಾರಿ ವರ್ಗ, ಪೊಲೀಸ್ ಇಲಾಖೆಯ ಮುಖ್ಯಸ್ಥರು, ಅರಣ್ಯ ಇಲಾಖೆಯ ಅಧಿಕಾರಿ ವರ್ಗ ಈ ಸಂದರ್ಭ ಉಪಸ್ಥಿತರಿರಲಿದೆ ಎಂಬುದು ತಿಳಿದು ಬಂದಿದೆ.

ಸರಳ, ಸಾಂಪ್ರದಾಯಿಕ ದಸರಾ ಮಹೋತ್ಸವದ ಜಂಬೂಸವಾರಿಯನ್ನು ಅರಮನೆ ಆವರಣದೊಳಗಿನ 300 ಮೀಟರ್ ದೂರಕ್ಕಷ್ಟೇ ಸೀಮಿತಗೊಳಿಸಬೇಕು ಎಂಬ ಚರ್ಚೆ ಅಧಿಕಾರಿ ವಲಯದಲ್ಲಿ ನಡೆದಿದೆ. ಇನ್ನೂ ಅಂತಿಮಗೊಂಡಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಭಾನುವಾರ ತಾಲೀಮಿಲ್ಲ

ಭಾನುವಾರ ಮಹಾನವಮಿ. ಆಯುಧಪೂಜೆ. ಗಜಪಡೆ, ಅಶ್ವಪಡೆ ಯಾವ ತಾಲೀಮಿನಲ್ಲೂ ಭಾಗಿಯಾಗಲ್ಲ. ಅರಮನೆಯ ಪೂಜೆಯಲ್ಲಷ್ಟೇ ಪಾಲ್ಗೊಳ್ಳಲಿವೆ ಎಂದು ಅರಣ್ಯ ಇಲಾಖೆಯ ಪಶು ವೈದ್ಯ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜವಂಶಸ್ಥರಿಂದ ಕಾಳರಾತ್ರಿ ಪೂಜೆ

ನವರಾತ್ರಿಯ ಏಳನೇ ದಿನವಾದ ಶುಕ್ರವಾರ ರಾತ್ರಿ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅರಮನೆಯಲ್ಲಿ ಕಾಳರಾತ್ರಿ ಪೂಜೆ ನೆರವೇರಿಸಿದರು.

ಯದು ವಂಶಸ್ಥರು ನವರಾತ್ರಿಯ ಸಪ್ತಮಿ ದಿನದಂದು ಶಕ್ತಿ ದೇವತೆಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಸಂಪ್ರದಾಯದಂತೆಯೇ ಯದುವೀರ್ ಕಾಳರಾತ್ರಿ ಪೂಜೆ ನಡೆಸಿದರು.

ರಾಜರ ಆಳ್ವಿಕೆಯ ಕಾಲಘಟ್ಟದಲ್ಲಿ ಕಾಳರಾತ್ರಿ ಪೂಜೆಯ ಸಂದರ್ಭ ಪ್ರಾಣಿಬಲಿ ಕೊಡಲಾಗುತ್ತಿತ್ತು. ಇದೀಗ ಪ್ರಾಣಿಯ ಬೊಂಬೆಯನ್ನು ಬಲಿಯನ್ನಾಗಿ ದೇವಿಗೆ ಅರ್ಪಿಸಲಾಗುತ್ತಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು