ಮಂಗಳವಾರ, ಸೆಪ್ಟೆಂಬರ್ 29, 2020
23 °C
₹ 25 ಕೋಟಿ ಅನುದಾನಕ್ಕೆ ಮನವಿ ಮಾಡಲಾಗುವುದು–ತಸ್ನೀಂ

‘ಮೈಸೂರು ಹಬ್ಬ’ಕ್ಕೆ ಪಾಲಿಕೆ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್‌–19 ಕಾರಣ ಈ ಬಾರಿ ಸರಳವಾಗಿ ದಸರೆ ಆಚರಿಸಿದರೆ, ಮುಂದಿನ ಮಾರ್ಚ್‌ನಲ್ಲಿ ‘ಮೈಸೂರು ಹಬ್ಬ’ ಆಚರಿಸಲು ಯೋಜನೆ ರೂಪಿಸಲಾಗುವುದು ಎಂದು ಮೇಯರ್‌ ತಸ್ನೀಂ ಹೇಳಿದರು.

ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಅವರು ಮಾತನಾಡಿದರು.

ದಸರಾ ಆಚರಣೆ ಸಂಬಂಧ ನಡೆದ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು, ವಿವಿಧ ಪಕ್ಷಗಳ ನಾಯಕರು ಹಾಗೂ ಅಧಿಕಾರಿಗಳ ಸಭೆಯಲ್ಲಿ, ‘ಕೋವಿಡ್ ಸಂಕಷ್ಟದ ಕಾಲದಲ್ಲಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಯಿತು.

‘ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ಆಗುವುದಿಲ್ಲ. ಜನರು ಸಹ ಭಾಗಿಯಾಗಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಚಾಮುಂಡಿಬೆಟ್ಟದಲ್ಲಿ ದಸರೆಯನ್ನು ಸರಳವಾಗಿ ಉದ್ಘಾಟಿಸಿ, ಅರಮನೆ ಆವರಣಕ್ಕೆ ಸೀಮಿತವಾಗುವಂತೆ ಜಂಬೂಸವಾರಿ ನಡೆಸಬೇಕು’ ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು.

‘ಕೋವಿಡ್‌ ಲಸಿಕೆ ಬಂದ ನಂತರ ಆಚರಿಸುವ ಮೈಸೂರು ಹಬ್ಬದಲ್ಲಿ ದಸರೆಯಲ್ಲಿ ಜರುಗುವ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ, ವಿಜೃಂಭಣೆಯಿಂದ ನೆರವೇರಲು ಕೈಜೋಡಿಸಲಾಗುವುದು. ಆಗಲೂ  ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಹಾಗೂ ಇನ್ನಿತರ ವ್ಯಾಪಾರ ವಹಿವಾಟುಗಳಿಗೆ ಅನುಕೂಲವಾಗುವಂತೆ ಸರ್ಕಾರದ ಸಹಾಯ ಪಡೆಯಲು ಮನವಿ ಮಾಡಬಹುದು’ ಎಂದು ಸಭೆಯಲ್ಲಿ ಭಾಗಿಯಾಗಿದ್ದವರು ಹೇಳಿದರು.

‘ಈ ಬಾರಿ ದಸರೆಗೆ ₹ 25 ಕೋಟಿ ಅನುದಾನ ಕೊಡಬೇಕೆಂದು ದಸರಾ ಉನ್ನತಮಟ್ಟದ ಸಭೆಯಲ್ಲಿ ಮನವಿ ಮಾಡಲಾಗುವುದು. ಕೋವಿಡ್‌ ಕಾರಣ ಪಾಲಿಕೆ ಹಣಕಾಸು ಸ್ಥಿತಿ ಹದಗೆಟ್ಟಿದೆ. ಕನಿಷ್ಠ ₹ 20 ಕೋಟಿಯಾದರೂ ಬೇಕು. ಕಳೆದ ವರ್ಷದ ಅನುದಾನವೇ ಇನ್ನೂ ಬಿಡುಗಡೆಯಾಗಿಲ್ಲ’ ಎಂದು ತಸ್ನೀಂ ಹೇಳಿದರು.

ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ರಾಜಕೀಯ ಪಕ್ಷಗಳ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು