ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆ: ಮೈಸೂರಿನಲ್ಲಿ ಬಾಳೆ ಮೌಲ್ಯವರ್ಧನೆ

ಹೊಸ ಹೊಳಹುಗೆ ಕೆಂಪುಹಾಸು
Last Updated 10 ಫೆಬ್ರುವರಿ 2021, 1:09 IST
ಅಕ್ಷರ ಗಾತ್ರ

ಮೈಸೂರು: ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯನ್ನು ಕೃಷಿ ಇಲಾಖೆ ಜಾರಿಗೊಳಿಸಿದೆ. ಇದರಡಿ ಮೈಸೂರು ಜಿಲ್ಲೆಯ ಉತ್ಪನ್ನವಾಗಿ ಬಾಳೆ ಬೆಳೆ ಆಯ್ಕೆಗೊಂಡಿದೆ.

ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ಬಾಳೆ ಬೆಳೆಯಿದೆ. 12,500 ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಸಹಸ್ರಾರು ರೈತರು ಬಾಳೆ ಬೆಳೆಯುತ್ತಿದ್ದಾರೆ. ಜಿಲ್ಲೆಗೆ ಸಾಕಾಗುವಷ್ಟು ಹಾಗೂ ನೆರೆ ಹೊರೆ ಜಿಲ್ಲೆಯ ಬೇಡಿಕೆಯನ್ನು ಪೂರೈಸುವಷ್ಟು ಉತ್ಪನ್ನ ಲಭ್ಯವಿರುವುದ
ರಿಂದ, ಕೃಷಿ ಇಲಾಖೆ ತನ್ನ ಯೋಜನೆಯಡಿ ಬಾಳೆಯ ಮೌಲ್ಯವರ್ಧನೆಗೆ ಮುಂದಾಗಿದೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್‌ಟಿಆರ್‌ಐ) ಸಹ ಈ ಯೋಜನೆಗೆ ಸಾಥ್‌ ನೀಡಿವೆ.

ಜಿಲ್ಲೆಯಲ್ಲಿ ಬಾಳೆಯ ಮೌಲ್ಯವರ್ಧನೆ ಆರಂಭಗೊಂಡರೆ, ಬೇಡಿಕೆಯೂ ಸಾಕಷ್ಟು ಹೆಚ್ಚಲಿದೆ. ಇದು ಬೆಳೆಗಾರರಿಗೆ ವರದಾನವಾಗುವ ಜೊತೆ, ಕಿರು ಉದ್ಯಮಗಳ ಬೆಳವಣಿಗೆ, ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ ಎನ್ನುತ್ತಾರೆ ಯೋಜನೆ ಅನುಷ್ಠಾನದ ಮೇಲುಸ್ತುವಾರಿ ಹೊತ್ತಿರುವ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಸ್.ಸುಹಾಸಿನಿ.

ಉತ್ತೇಜನ: ‘ಐದು ವರ್ಷದ ಯೋಜನೆಯಿದು. ಈಗಾಗಲೇ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಬಾಳೆ ಬೆಳೆಯ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿದ್ದೇವೆ. ಕಿರು ಉದ್ದಿಮೆ ಸ್ಥಾಪಿಸಬೇಕು ಎಂಬ ಕನಸು, ಹಂಬಲ ಹೊಂದಿರುವ ವ್ಯಕ್ತಿಗಳ ಜೊತೆಗೂ ಸಭೆ ನಡೆದಿದೆ. ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಬಗ್ಗೆ ತರಬೇತಿ ನೀಡಲು ಸಿಎಫ್‌ಟಿಆರ್‌ಐ ಮುಂದಾಗಿದೆ. ಈಗಾಗಲೇ ಮೂರು ತರಬೇತಿ ಕಾರ್ಯಾಗಾರ ಪೂರ್ಣಗೊಂಡಿವೆ’ ಎಂದು ಸುಹಾಸಿನಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ರಾ ಬನಾನಾ ಪೌಡರ್‌, ಬಾಳೆ ಹಣ್ಣಿನ ಬಾರ್‌, ಬಾಳೆ ದಿಂಡಿನ ನಾರು–ಸಿಪ್ಪೆಯಿಂದ ಬ್ಯಾಗ್‌ ತಯಾರಿಕೆ, ಚಾಪೆ ತಯಾರಿಕೆ, ಬಾಳೆ ದಿಂಡಿನ ಜ್ಯೂಸ್‌ ತಯಾರಿಕೆ ಸೇರಿದಂತೆ ಔಷಧೀಯ ಗುಣಗಳನ್ನೊಂದಿದ ಉತ್ಪನ್ನಗಳನ್ನು ತಯಾರಿಸುವ ಹೊಸ ಹೊಳಹಿನ ಯೋಜನೆಯ ಪ್ರಸ್ತಾವ ಈಗಾಗಲೇ ಇಲಾಖೆಗೆ ಬಂದಿವೆ. ಮೈಸೂರಿನ ಮಹದೇವಪ್ರಸಾದ್‌, ಪ್ರದ್ಯುಮ್ನ, ಹುಣಸೂರಿನ ನವೀನ್‌ಕುಮಾರ್‌ ಸೇರಿದಂತೆ ಮತ್ತೊಂದಷ್ಟು ಜನರು ಸಿಎಫ್‌ಟಿಆರ್‌ಐನಿಂದ ತರಬೇತಿಯನ್ನೂ ಪಡೆದಿದ್ದಾರೆ’ ಎಂದು ಹೇಳಿದರು.

ಶೇ 35ರಷ್ಟು ಸಹಾಯಧನ

‘ಬಾಳೆಯ ಮೌಲ್ಯವರ್ಧನೆ, ಸಂಸ್ಕರಣೆಯಲ್ಲಿ ಕಿರು ಉದ್ದಿಮೆ ಸ್ಥಾಪಿಸುವ ಕನಸಿನೊಂದಿಗೆ, ತಮ್ಮ ಯೋಜನೆಯ ಡಿಪಿಆರ್‌ ತಯಾರಿಸಿಕೊಂಡು, ಅಗತ್ಯ ಸಿದ್ಧತೆ ಮಾಡಿಕೊಂಡಿರುವ ಉತ್ಸಾಹಿ ನವೋದ್ಯಮಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಫಲಾನುಭವಿಗಳ ಆಯ್ಕೆಗೆ ಯಾವುದೇ ಮಿತಿಯಿಲ್ಲ’ ಎಂದುಸುಹಾಸಿನಿ ತಿಳಿಸಿದರು.

‘ಕಿರು ಉದ್ದಿಮೆಯ ಸಾಕಾರಕ್ಕಾಗಿ ಬ್ಯಾಂಕ್‌ಗಳಿಂದ ಗರಿಷ್ಠ ಮಿತಿ ₹ 10 ಲಕ್ಷ ಸಾಲ ಕೊಡಿಸಲಾಗುವುದು. ಈ ಸಾಲದ ಮೊತ್ತದಲ್ಲಿ ಶೇ 35ರಷ್ಟು ಸಹಾಯಧನವನ್ನು ಇಲಾಖೆಯೇ ನೀಡಲಿದೆ. ಶೇ 10ರಷ್ಟು ವೆಚ್ಚವನ್ನು ಉತ್ಸಾಹಿಗಳೇ ಭರಿಸಬೇಕಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT