ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ದಶಪಥ ರಸ್ತೆ ನಿರ್ಮಾಣ ಕುರಿತ ಸಂವಾದಕ್ಕೆ ಬಾರದ ಸಂಸದ: ಟೀಕೆ

‘ಪ್ರತಾಪಸಿಂಹ ಒಬ್ಬ ಹೇಡಿ’ ಎಂದ ಕೆಪಿಸಿಸಿ ವಕ್ತಾರ ಲಕ್ಷ್ಮಣ
Last Updated 5 ಸೆಪ್ಟೆಂಬರ್ 2021, 9:31 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು– ಮೈಸೂರು ದಶಪಥದ ರಸ್ತೆ ನಿರ್ಮಾಣದ ಸತ್ಯಾಸತ್ಯತೆಯ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಸಂಸದ ಪ್ರತಾಪಸಿಂಹ ಅವರ ಜತೆ ಭಾನುವಾರ ನಿಗದಿ ಮಾಡಿದ್ದ ಸಂವಾದಕ್ಕೆ ಪ್ರತಾಪಸಿಂಹ ಗೈರಾಗಿದ್ದು, ‘ಪ್ರತಾಪಸಿಂಹ ಒಬ್ಬ ಹೇಡಿ’ ಎಂದು ಲಕ್ಷ್ಮಣ ಅವರು ಟೀಕಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮದ ವೇದಿಕೆಯ ಒಂದು ಆಸನಕ್ಕೆ ಪ್ರತಾಪಸಿಂಹ ಸಂಸದರು ಎಂದು ಬರೆದಿದ್ದ ಚೀಟಿ ಅಂಟಿಸಿ ಅದನ್ನು ಖಾಲಿ ಬಿಡಲಾಗಿತ್ತು. ಪ್ರತಾಪ ಸಿಂಹ ಅವರು ಬಾರದೆ ಇರುವುದರಿಂದ ಲೋಕೋಪಯೋಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೂ ಬಂದಿಲ್ಲ ಎಂದು ಲಕ್ಷ್ಮಣ ಅವರು ಸ್ಪಷ್ಟಪಡಿಸಿದರು.

ಸಂವಾದಕ್ಕೆ ಬರುವಂತೆ ಮೂರು ಪತ್ರ ಬರೆದು ಪ್ರತಾಪಸಿಂಹ ಅವರನ್ನು ಆಹ್ವಾನಿಸಲಾಗಿತ್ತು. ಸಾರ್ವಜನಿಕರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಅವರು ಬರಬೇಕಿತ್ತು. ದಶಪಥ ಕಾಮಗಾರಿಗೆ ಸಂಬಂಧಿಸಿ ಅವರು ಸುಳ್ಳು ಹೇಳುತ್ತಿದ್ದು, ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಅವರು ಪತ್ರ ಬರೆದು ಪಲಾಯನ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇನ್ನುಮುಂದೆ ಅವರು ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದರು.

‘ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆಮಾಡಿದ್ದೇವೆ. ಮುಂದಿನ ಶನಿವಾರ ಅವರ ಕಚೇರಿ ಮುಂದೆ ದಾಖಲೆ ಪ್ರದರ್ಶಿಸಲಾಗುವುದು. ಮುಂದೆ ಅವರ ಪಕ್ಷದ ಕಚೇರಿ ಮುಂದೆಯೂ ದಾಖಲೆ ಪ್ರದರ್ಶಿಸಲಾಗುವುದು. ನೀವು ಒಪ್ಪುವವರೆಗೆ ನಾವು ಬಿಡುವುದಿಲ್ಲ. ಮುಂದೆ ನೀವೇ ದಿನಾಂಕ ನಿಗದಿಪಡಿಸಿ ನಾವು ಬರುತ್ತೇವೆ’ ಎಂದು ಸವಾಲೆಸೆದರು.

ಪತ್ರದ ಮೂಲಕವೇ ಹತ್ತು ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಒತ್ತಾಯಿಸಿದರು. 2017ರಲ್ಲಿ ಉದ್ಘಾಟಿಸುವುದಾಗಿ ಹೇಳಿದ್ದ ನಾಗನಹಳ್ಳಿಯ ರೈಲ್ವೆ ಟರ್ಮಿನಲ್‌ನ ಪ್ರಗತಿ ಯಾವ ಹಂತದಲ್ಲಿದೆ? ಎಂಬುದನ್ನು ಜನರಿಗೆ ತಿಳಿಸಬೇಕು. ಕಡಕೊಳದ ಎಕ್ಸ್‌ಪೋರ್ಟ್‌ ಕಂಟೆನರ್‌ ಅನ್ನು ಪೂರ್ಣಗೊಳಿಸಿದ್ದೀರಾ ಎಂಬುದರ ಮಾಹಿತಿ ನೀಡಬೇಕು. ನಂಜನಗೂಡಿನ ಜವಳಿ ಪಾರ್ಕ್‌ಗೆ ಐದು ರೂಪಾಯಿ ತೆಗೆದುಕೊಂಡು ಬಂದಿದ್ದೀರಾ?, ಮೈಸೂರು– ಕುಶಾಲನಗರದ ರೈಲು ಯೋಜನೆ ಯಾವ ಹಂತದಲ್ಲಿದೆ? ಮೈಸೂರಿಗೆ ಸ್ಮಾರ್ಟ್‌ ಸಿಟಿ ಯೋಜನೆಯನ್ನು ತಪ್ಪಿಸಿದ್ದು ಯಾರು? ನರ್ಮ್‌ ಯೋಜನೆಯನ್ನು ಮೊಟಕುಗೊಳಿಸಿದ್ದು ಯಾರು? ಮೈಸೂರನ್ನು ಪ್ಯಾರಿಸ್‌ ಮಾಡುವ ಯೋಜನೆಗೆ ನೀಲ ನಕ್ಷೆ ತಯಾರಾಗಿದೆಯೇ? ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಮೈಸೂರನ್ನು ಟೂರಿಸ್ಟ್‌ ಹಬ್‌ ಮಾಡುವ ಯೋಜನೆ, ಮೈಸೂರಿನ ವಿಮಾನನಿಲ್ದಾಣವನ್ನು ಅಂತರರಾಷ್ಟ್ರೀಯ ದರ್ಜೆಗೇರಿಸುವ ಯೋಜನೆ, ರನ್‌ವೇ ವಿಸ್ತರಣೆ ಏನಾಯಿತು? 7 ವರ್ಷದಲ್ಲಿ ನೀವು ₹ 7 ಕೋಟಿ ರೂಪಾಯಿಯನ್ನು ಮೈಸೂರಿಗೆ ತಂದಿದ್ದೀರಾ? ನಿಮ್ಮ ಮೂಲಕ ಯಾವ ಕಾರ್ಯಕ್ರಮಗಳನ್ನು ಮೈಸೂರಿಗೆ ನೀಡಿದ್ದೀರಿ ಎಂಬುದನ್ನು ತಿಳಿಸಬೇಕು ಎಂದರು.

ತಂಬಾಕು ಬೆಳೆಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಹೇಳಿದ್ದೀರಿ, ಅದು ಏನಾಯಿತು? ಮೈಸೂರಿನಲ್ಲಿ ಸಂಸತ್‌ ಮಾದರಿ ಗ್ರಾಮದ ಪ್ರಗತಿ ಹೇಗಿದೆ? ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಗ್ರಾಮಗಳು ಮಾದರಿಯಾಗಿವೆ ಎಂಬುದನ್ನು ತಿಳಿಸಬೇಕು. ಈ ಯೋಜನೆಗೆ ನೀವು ನಯಾಪೈಸೆ ಹಣ ನೀಡಿಲ್ಲ ಎಂದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗ ದಶಪಥ ಯೋಜನೆ ಮಂಜೂರಾಗಿದೆ. ಅದು ನಿರಂತರ ಯೋಜನೆಯಾಗಿರುವುದರಿಂದ ಬಿಜೆಪಿ ಅದನ್ನು ಮುಂದುವರಿಸಿದೆ. ಇದು ಎರಡೂ ಸರ್ಕಾರಗಳ ಯೋಜನೆ. ನಾವೆಂದೂ ಇದು ನಮ್ಮದೇ ಯೋಜನೆ ಎಂದು ನಿಮ್ಮಂತೆ ಸುಳ್ಳು ಹೇಳುತ್ತಿಲ್ಲ ಎಂದು ಹೇಳಿದರು.

ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮಾತನಾಡಿ, ಒಳ್ಳೆಯ ಬರಹಗಾರರಾಗಿರುವ ಪ್ರತಾಪಸಿಂಹ ಅವರು ಮಹಾನ್‌ ಸುಳ್ಳುಗಾರ. ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವ ಅವರಿಗೆ ಪ್ರಬುದ್ಧತೆ ಇಲ್ಲ ಎಂದು ಟೀಕಿಸಿದರು.

ಲಕ್ಷ್ಮಣ ಅವರು ಮಾತು ಮುಗಿಸಿದ ಬಳಿಕ ಪ್ರತಾಪಸಿಂಹ ಅವರಿಗೆ ನಿಗದಿಮಾಡಿದ್ದ ಆಸನಕ್ಕೆ ನಮಿಸಿ ಧನ್ಯವಾದಗಳು ಪ್ರತಾಪಸಿಂಹ ಅವರೇ ಎಂದರು.

ಕಾಂಗ್ರೆಸ್‌ನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಮೂರ್ತಿ, ಮುಖಂಡರಾದ ಶಿವಣ್ಣ, ಗಿರೀಶ್‌, ರಾಮಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT