ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ; ಎಂದೆಂದೂ ನಮ್ಮೂರು ಮೈಸೂರು...ವಾಸು ದೀಕ್ಷಿತ್‌ ಹಾಡಿದ ‘ಮೈಸೂರು’

ವಾಸು ದೀಕ್ಷಿತ್‌ ಹಾಡಿದ ‘ಮೈಸೂರು’
Last Updated 11 ಅಕ್ಟೋಬರ್ 2021, 8:33 IST
ಅಕ್ಷರ ಗಾತ್ರ

ಮೈಸೂರು: ಬೆರೆತರೂ ನಮ್ಮೂರು.. ಮರೆತರೂ ನಮ್ಮೂರು.. ಎಂದೆಂದೂ ನಮ್ಮೂರು ಮೈಸೂರು...

ಮೈಸೂರ ಸೊಬಗನ್ನು ಕಟ್ಟಿಕೊಡುವ, ‘ವಾಸು ದೀಕ್ಷಿತ್‌’ ಅವರ ಈ ವೀಡಿಯೋ ಹಾಡು ಮೈಸೂರನ್ನು ತಾಯಂತೆ ಪ್ರೀತಿಸುವವರಲ್ಲಿ ಸಂತಸವನ್ನು ಉಕ್ಕಿಸುತ್ತದೆ. 2018ರ ದಸರೆಯಲ್ಲಿ ಬಿಡುಗಡೆಯಾದ ಹಾಡು ಪ್ರತಿ ದಸರಾದಲ್ಲೂ ಮೈಸೂರಿಗರಿಗೆ ಮುದ ನೀಡುತ್ತದೆ.

ಸುಗಮ ಸಂಗೀತ, ಶಾಸ್ತ್ರೀಯ, ಜಾನಪದದ ಹೂರಣವುಳ್ಳ ಹಾಡಿಗಾಗಿ ಮ್ಯಾಂಡಲಿನ್‌, ಸ್ಯಾಕ್ಸೋಫೋನ್‌, ಹಾರ್ಮೋನಿಯಂ ಜೊತೆಗೂಡಿದೆ. ಅರಮನೆ ಬ್ಯಾಂಡ್‌ನ ಮರುಸೃಷ್ಟಿಯಂತೆ ಪ್ಯೂಷನ್‌ ನಾದವೂ ಹೃದ್ಯವಾಗುತ್ತದೆ.

‘ಕಾವೇರಿ ತಾಯಿ ತಂಪು ಒಡಲಲ್ಲಿ, ಚಾಮುಂಡಿ ಒಲುಮೆ ನೆತ್ತಿಲಿ. ಅರಮನೆಯ ಬೆಳಕು ಜನಮನದ ಸೊಬಗು ನಿನ್ನಲ್ಲೇ...’ ಎನ್ನುತ್ತಲೇ, ‘ಬೆಳೆದರೂ ಬಾಗದಿರೂ ಅರಳಿಯೂ ಬಾಡದಿರು ನೀ ಎಂದೆಂದೂ. ಬಿರುಕದಿರು, ಬದಲಾಗದಿರು, ಮರೆಯಾಗದಿರು ಮೈಸೂರು.’ ಎಂದು ಬಿನ್ನವಿಸಿಕೊಳ್ಳುವ ಸಾಲುಗಳು, ಬದಲಾಗುತ್ತಿರುವ ಊರಿನ ಕುರಿತ ಅಹವಾಲನ್ನು ಮಂಡಿಸುತ್ತವೆ.

ಮೈಸೂರಿನವರೇ ಆದ ವಾಸು ದೀಕ್ಷಿತ್‌ 2002ರಲ್ಲಿ ಹುಟ್ಟುಹಾಕಿದ ‘ಸ್ವರಾತ್ಮ’, ‘ವಾಸು ದೀಕ್ಷಿತ್‌ ಕಲೆಕ್ಟಿವ್ಸ್‌ (ವಿಡಿಸಿ)’ ಬ್ಯಾಂಡ್‌ಗಳು ನೂರಾರು ಹಾಡುಗಳನ್ನು ಸಂಯೋಜಿಸಿವೆ. ಹತ್ತಾರು ಕಲಾವಿದರು, ವಾದ್ಯಸಂಗೀತಗಾರರನ್ನು ಬ್ಯಾಂಡ್‌ ಮೂಲಕ ಅಂತರರಾಷ್ಟ್ರೀಯ ಮಟ್ಟಕ್ಕೆ ಕರೆದೊಯ್ದಿದ್ದಾರೆ. ‘ಮೈಸೂರು’ ಕುರಿತ ಹಾಡೆಂದರೆ ಅವರಿಗೆ ವಿಶೇಷ ಪ್ರೀತಿ.

‘ಮೈಸೂರು ಸೃಜನತ್ವದ ಅಂಗಳ. ಮಗುವಿನ ಕಲಿಕೆಗಾಗಿ ತಾಯಿಯೇ ಮಗುವಾಗುವಂತೆ ಮೈಸೂರು. ಇದು ನನ್ನ ಜೀವನವನ್ನು ರೂಪಿಸಿದೆ. ಹುಟ್ಟಿದೂರಿನ ಭಾವುಕತೆ ಇದ್ದರೂ, ಅದನ್ನು ಉಳಿಸುವ ಕಾಳಜಿಯೇ ಹಾಡಾಗಿದೆ’ ಎಂದು ವಾಸು ದೀಕ್ಷಿತ್‌ ‘ಪ್ರಜಾವಾಣಿ’ ಹಾಡು ಹುಟ್ಟಿದ ಬಗೆಯನ್ನು ವಿವರಿಸಿದರು.

‘ಬೆಂಗಳೂರಿನಲ್ಲಿ ನೆಲೆಸಿರುವ ನನಗೆ ಸಂಗೀತ ಅಥವಾ ಸೃಜನತ್ವ ಬಾರದೇ ಇದ್ದಾಗ ಮೈಸೂರಿಗೆ ಬಂದು ಬಿಡುತ್ತೇನೆ. ನನ್ನ ತಾಯಿಯ ಊರಿದು. ಇಲ್ಲಿ ನಡೆದಾಡಿದ ಗಲ್ಲಿಗಳು, ಆಟವಾಡಿದ ರಸ್ತೆಗಳು, ಮೈದಾನಗಳು ಬಾಲ್ಯವನ್ನು ನೆನಪಿಗೆ ತರುತ್ತವೆ. ನೆಮ್ಮದಿ ಸಿಗುತ್ತದೆ. ನೆನೆಪುಗಳನ್ನು ಹೊದ್ದ ನಂತರ ಕನಸುಗಳು ಹೊಸತನ್ನು ಸೃಷ್ಟಿಸುತ್ತವೆ. ಆ ಮಾಯಾ ಮೋಡಿ ನನ್ನೂರಲ್ಲಿದೆ’ ಎಂದರು.

‘ವಿಡಿಸಿ’ ಬ್ಯಾಂಡ್‌ನಲ್ಲಿ 15 ವಾದ್ಯ ಸಂಗೀತಗಾರರಿದ್ದಾರೆ. ಹಾಡನ್ನು ಸಂಯೋಜಿಸುವಾಗ ವಾಸು ದೀಕ್ಷಿತ್‌ ಅವರೊಂದಿಗೆ ಅಭಿಲಾಷ್‌ ಲಾಕ್ರಾ (ಸಿಂಥ್‌ ಬೇಸ್‌), ಅರ್ಜಿತ್‌ ದಾಸ್‌ (ಗಿಟಾರ್‌), ತ್ಯಾಗರಾಜ್‌ ರಂಗ(ಸ್ಯಾಕ್ಸೋಫೋನ್‌), ನಂದಕಿಶೋರ್‌ ಸೇಸಾಯಿ (ಹಾರ್ಮೋನಿಯಂ), ಸಾಯಿ ಸಿಂಧೂಜಾ ನಂದೂರಿ (ವಯಲಿನ್‌), ಶ್ರೀಕಂಠಸ್ವಾಮಿ (ಡ್ರಮ್ಸ್) ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT