ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯುತ್ತಮ ನಿರ್ವಹಣೆಯ ನಿಲ್ದಾಣ

ಮೈಸೂರು ರೈಲ್ವೆ ನಿಲ್ದಾಣಕ್ಕೆ ಮತ್ತೆ ಗೌರವ
Last Updated 14 ಅಕ್ಟೋಬರ್ 2020, 2:43 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ರೈಲ್ವೆ ನಿಲ್ದಾಣವು ನೈರುತ್ಯ ರೈಲ್ವೆಯ ‘ಪ್ರಮುಖ’ ನಿಲ್ದಾಣಗಳ ವಿಭಾಗದಲ್ಲಿ 2019–20 ನೇ ಸಾಲಿನ ‘ಅತ್ಯುತ್ತಮ ನಿರ್ವಹಣೆಯ’ ನಿಲ್ದಾಣ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಸತತ ನಾಲ್ಕನೇ ಬಾರಿ ಈ ಗೌರವ ಒಲಿದಿದೆ.

ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ 65ನೇ ರೈಲ್ವೆ ಸಪ್ತಾಹ ಸಮಾರಂಭದಲ್ಲಿ ಪ್ರಶಸ್ತಿ ಪ್ರಕಟ ಮಾಡಲಾಯಿತು.

2019-20ರ ಸಾಲಿನಲ್ಲಿ ಮೈಸೂರು ರೈಲ್ವೆ ನಿಲ್ದಾಣವನ್ನು ಸಮಗ್ರ ‍ಪುನರಾಭಿವೃದ್ಧಿ ಯೋಜನೆಯಡಿ ನವೀಕರಣ ಮಾಡಲಾಗಿತ್ತು. ಪಾರಂಪರಿಕ ಶೈಲಿಗೆ ಧಕ್ಕೆಯಾಗದಂತೆ ರೈಲ್ವೆ ನಿಲ್ದಾಣದ ಕಟ್ಟಡದ ಅಭಿವೃದ್ಧಿ ಕೆಲಸ ನಡೆದಿತ್ತು. ಜತೆಗೆ ಪ್ರಯಾಣಿಕ ಸ್ನೇಹಿಯಾಗಿಸಲು ಹಲವು ಸೌಲಭ್ಯಗಳನ್ನು ಅಳವಡಿಸಲಾಗಿತ್ತು. ಇದರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಇತರ ಕೆಲವು ವಿಭಾಗಗಳಲ್ಲೂ ಮೈಸೂರು ನಿಲ್ದಾಣಕ್ಕೆ ಪ್ರಶಸ್ತಿ ಒಲಿದಿದೆ. ಸಿಗ್ನಲ್‌ ಅಂಡ್‌ ಟೆಲಿಕಮ್ಯುನಿಕೇಷನ್‌ (ಎಸ್‌ ಅಂಡ್‌ ಟಿ) ವಿಭಾಗವು ‘ದಕ್ಷತಾ ಪ್ರಶಸ್ತಿ’ಯನ್ನು ತನ್ನದಾಗಿಸಿಕೊಂಡಿದೆ.

ಎಸ್‌ ಅಂಡ್‌ ಟಿ ವಿಭಾಗವು ಸಕಲೇಶಪುರ– ಸುಬ್ರಮಣ್ಯ ಮಾರ್ಗದಲ್ಲಿ ಸುಧಾರಿತ ಸಿಗ್ನಲ್‌ ವ್ಯವಸ್ಥೆಯನ್ನು ಅಳವಡಿಸಿತ್ತು. ಇದರಿಂದ ಈ ಮಾರ್ಗದಲ್ಲಿ ಸುರಕ್ಷಿತ ಪ್ರಯಾಣದ ಜತೆಗೆ ಹೆಚ್ಚುವರಿ ಪ್ರಯಾಣಿಕ ರೈಲುಗಳನ್ನು ಓಡಿಸುವ ಅವಕಾಶವೂ ಇಲಾಖೆಗೆ ಲಭಿಸಿದೆ.

ಮೈಸೂರು ರೈಲ್ವೆ ನಿಲ್ದಾಣದ ಭದ್ರತಾ ವಿಭಾಗ ಕೂಡಾ ಈ ಬಾರಿಯ ದಕ್ಷತಾ ಪ್ರಶಸ್ತಿ ಗೆದ್ದುಕೊಂಡಿದೆ.

ಮೈಸೂರು ಮತ್ತು ನಿಜಾಮುದ್ದೀನ್ (ನವದೆಹಲಿ) ನಡುವೆ ಸಂಚರಿಸುವ ಸ್ವರ್ಣಜಯಂತಿ ಸೂಪರ್‌ಫಾಸ್ಟ್ ರೈಲು 2019-20ನೇ ಸಾಲಿನಲ್ಲಿ ನೈರುತ್ಯ ರೈಲ್ವೆಯಲ್ಲಿ ‘ಅತ್ಯುತ್ತಮವಾಗಿ ನಿರ್ವಹಿಸಿದ ರೇಕ್‌’ ಎಂಬ ಗೌರವ ತನ್ನದಾಗಿಸಿಕೊಂಡಿದೆ.

ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗರ್ಗ್ ಅವರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

2019–20ರ ಸಾಲಿನಲ್ಲಿ ಮೈಸೂರು ನಿಲ್ದಾಣವು ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವಲ್ಲಿ ಸಹಕರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಪರ್ಣಾ ಗರ್ಗ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT