ಶನಿವಾರ, ಫೆಬ್ರವರಿ 27, 2021
27 °C
ಮೇಯರ್‌, ಉಪಮೇಯರ್‌ ನಿಯೋಗದ ಜತೆ ಎಸ್‌.ಟಿ.ಸೋಮಶೇಖರ್‌ ಸಭೆ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವೆ: ಸಚಿವ ಎಸ್.ಟಿ.ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಾನು ಇಲ್ಲಿಗೆ ಬಂದಿರುವುದು ಅಭಿವೃದ್ಧಿಗಾಗಿ ಮಾತ್ರ. ರಾಜಕಾರಣ ಮಾಡಲು ಇದು ನನ್ನ ಕ್ಷೇತ್ರವಲ್ಲ. ಯಾರಿಗೋ ಒಬ್ಬರಿಗೆ ಅನುಕೂಲವಾಗಿ ಕೆಲಸ ಮಾಡುವವ ನಾನಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ’ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ಹಾಗೂ ಉಪ ಮೇಯರ್ ನಿಯೋಗದ ಜತೆ ಶನಿವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಪಾಲಿಕೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವರು ಚರ್ಚೆ ನಡೆಸಿದರು.

ಲಾಕ್‌ಡೌನ್‌ನಿಂದಾಗಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಸದಸ್ಯರು ಸಚಿವರ ಗಮನಕ್ಕೆ ತಂದರು. ಬಡವರು, ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಪಾಲಿಕೆ ವತಿಯಿಂದ ಪಡಿತರ ಒದಗಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್‌.ಟಿ.ಸೋಮಶೇಖರ್, ‘ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಮೇ 7ರಂದು ಜಿಲ್ಲೆಗೆ ಭೇಟಿ ನೀಡಲಿದ್ದು, ಅವರ ಜೊತೆ ಸಭೆ ನಡೆಸಿ ತೀರ್ಮಾನವನ್ನು ತೆಗೆದುಕೊಳ್ಳಲಿದ್ದೇವೆ. ಅವರ ಅಭಿಪ್ರಾಯ ನೋಡಿಕೊಂಡು ಪ್ರತಿ ವಾರ್ಡ್‌ಗೆ ಕಾರ್ಪೋರೇಟರ್‌ಗಳ ನಿಧಿಯಿಂದ ಅನುದಾನ ನೀಡುವ ಬಗ್ಗೆ ತೀರ್ಮಾನಿಸಲಾಗುವುದು’ ಎಂದು ತಿಳಿಸಿದರು.

ಪಡಿತರ ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ, ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ 2 ತಿಂಗಳಿಗೆ ಆಹಾರ ಪದಾರ್ಥ ಕೊಡಬೇಕು. ಬಿಪಿಎಲ್ ಕಾರ್ಡ್‌ಗೆ ಅರ್ಜಿ ಹಾಕಿದವರಿಗೂ ತಲುಪಿಸಬೇಕೆಂದು ಸರ್ಕಾರ ಹೇಳಿದೆ. ಹೀಗಾಗಿ ಅಂತಹವರಿಗೂ ಇನ್ನೆರಡು ತಿಂಗಳು ಪಡಿತರ ವಿತರಣೆ ಮಾಡಲೇಬೇಕು ಎಂದರು.

ಪಾಲಿಕೆ ಬಜೆಟ್‌ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಬಜೆಟ್‌ ಮಂಡಿಸುವುದಾದರೆ ಅಂತರ ಕಾಯ್ದುಕೊಂಡು ಮಂಡಿಸಬೇಕು. ಇಲ್ಲದಿದ್ದರೆ ಬೆಂಗಳೂರಿನಲ್ಲಿ ಬಿಬಿಎಂಪಿ ಮಂಡಿಸಿದ ಬಜೆಟ್ ಮಾದರಿ ಅನುಸರಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕವೂ ಮಂಡಿಸಬಹುದು ಎಂದು ತಿಳಿಸಿದರು.

ಮೇಯರ್‌ ತಸ್ನೀಂ, ಉಪಮೇಯರ್‌ ಶ್ರೀಧರ್‌, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು