ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್‌ಗಿಲ್ಲ ಬೆಂಬಲ: ಪ್ರತಿಭಟನೆಗಷ್ಟೇ ಸೀಮಿತ

ಮರಾಠ ಅಭಿವೃದ್ಧಿ ನಿಗಮ ರದ್ದು ಪಡಿಸುವಂತೆ ಆಗ್ರಹ: ಜನಜೀವನ, ವ್ಯಾಪಾರ–ವಹಿವಾಟು ಸಹಜ
Last Updated 5 ಡಿಸೆಂಬರ್ 2020, 15:54 IST
ಅಕ್ಷರ ಗಾತ್ರ

ಮೈಸೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದನ್ನು ವಿರೋಧಿಸಿ, ರಚನೆಗೊಂಡ ನಿಗಮವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಶನಿವಾರದ ‘ಕರ್ನಾಟಕ ಬಂದ್‌’ಗೆ ನಗರವೂ ಸೇರಿದಂತೆ ಜಿಲ್ಲೆಯ ಎಲ್ಲಿಯೂ ಬೆಂಬಲ ವ್ಯಕ್ತವಾಗಲಿಲ್ಲ. ಪ್ರತಿಭಟನೆಗಳು, ಭಾಷಣಕ್ಕಷ್ಟೇ ಬಂದ್ ಸೀಮಿತವಾಯಿತು.

ಮೈಸೂರು ನಗರವೂ ಸೇರಿದಂತೆ ಜಿಲ್ಲೆಯ ನಗರ/ಪಟ್ಟಣ/ಗ್ರಾಮೀಣ ಪ್ರದೇಶದಲ್ಲಿ ಜನಜೀವನ ಎಂದಿನಂತೆಯೇ ಸಹಜವಾಗಿತ್ತು. ವ್ಯಾಪಾರ–ವಹಿವಾಟು ನಿರಾತಂಕವಾಗಿ ನಡೆದವು. ಬಸ್‌/ಆಟೊ/ಟ್ಯಾಕ್ಸಿ/ಖಾಸಗಿ ವಾಹನ ಸಂಚಾರದ ದಟ್ಟಣೆಯೂ ಮಾಮೂಲಿಯಾಗಿತ್ತು.

ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ಹೋಟೆಲ್‌ಗಳು ಸೇರಿದಂತೆ ಶಾಪಿಂಗ್ ಮಾಲ್‌ಗಳು, ಅಂಗಡಿ, ವಿವಿಧೆಡೆಯಲ್ಲಿನ ಮಾರುಕಟ್ಟೆಗಳಲ್ಲೂ ಸಹ ಎಂದಿನಂತೆ ವಹಿವಾಟು ಸುಸೂತ್ರವಾಗಿ ನಡೆಯಿತು. ಬಂದ್‌ನ ಪರಿವೆಯೇ ಇಲ್ಲದೇ ನವ ಜೋಡಿಯೊಂದು ಮೈಸೂರಿನ ಪ್ರವಾಸಿ ತಾಣ, ಪ್ರಮುಖ ಸ್ಥಳಗಳಲ್ಲಿ ಪ್ರಿ ವೆಡ್ಡಿಂಗ್‌ ಫೋಟೊ ಶೂಟ್‌ನಲ್ಲಿ ಭಾಗಿಯಾಗಿದ್ದು ಗಮನ ಸೆಳೆಯಿತು. ಪ್ರೇಕ್ಷಣೀಯ ತಾಣಗಳಲ್ಲೂ ಜನದಟ್ಟಣೆ ಗೋಚರಿಸಿತು.

ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ವೃತ್ತಗಳಲ್ಲಿ ಪೊಲೀಸ್‌ ಪಹರೆ ನಿಯೋಜಿಸಿದ್ದರು. ಮೈಸೂರಿನ ಹೃದಯ ಭಾಗ ಕೆ.ಆರ್‌.ಸರ್ಕಲ್‌ಗೆ ಕನ್ನಡಪರ ಸಂಘಟನೆಗಳ ಚಳವಳಿಗಾರರು ಮುನ್ನುಗ್ಗಲು ಯತ್ನಿಸಿದಾಗ, ನಗರ ಬಸ್‌ ನಿಲ್ದಾಣದ ಬಳಿ ವಶಕ್ಕೆ ಪಡೆದರು. ನಗರ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಎರಡು ಗಂಟೆ ಬಂಧನದಲ್ಲಿಟ್ಟಿದ್ದರು.

ವಿವಿಧೆಡೆ ಪ್ರತಿಭಟನೆ

‘ಕರ್ನಾಟಕ ಬಂದ್’ ಬೆಂಬಲಿಸಿ ಕನ್ನಡ ಪರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಮೈಸೂರಿನ ವಿವಿಧೆಡೆ ಪ್ರತಿಭಟಿಸಿದವು.

ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ಕನ್ನಡ ಚಳವಳಿ ಮುಖಂಡ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ತೆರೆದಿದ್ದ ಅಂಗಡಿಗಳ ಬಾಗಿಲು ಮುಚ್ಚಿಸಲು ಮುಂದಾದರು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಅವಕಾಶ ನೀಡಲಿಲ್ಲ. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕ, ಕರ್ನಾಟಕ ಜನಪರ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿ, ರಾಜ್ಯ ಸರ್ಕಾರ ಹಾಗೂ ಮರಾಠ ಅಭಿವೃದ್ಧಿ ನಿಗಮ ಬೆಂಬಲಿಸುತ್ತಿರುವ ಶಾಸಕರ ವಿರುದ್ಧ ಹರಿಹಾಯ್ದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‌ಕುಮಾರ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪುರಭವನದ ಬಳಿಯ ಗಾಂಧಿ ಸ್ಕ್ವೇರ್‌ನಲ್ಲಿ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ, ಸಂಘದ ಪದಾಧಿಕಾರಿಗಳು ಪ್ರತಿಭಟಿಸಿದರು. ಕರ್ನಾಟಕ ನ್ಯಾಯಪರ ವೇದಿಕೆಯ ಕಾರ್ಯಕರ್ತರು ಸಹ ಇಲ್ಲಿಯೇ ಪ್ರತಿಭಟಿಸಿ, ಸರ್ಕಾರದ ನಿಲುವಿನ ವಿರುದ್ಧ ಹರಿಹಾಯ್ದರು.

ಉಪಮುಖ್ಯಮಂತ್ರಿ ವಿರುದ್ಧ ಆಕ್ರೋಶ

ಪುರಭವನದ ಬಳಿಯ ಗಾಂಧಿಚೌಕ್‌ನಲ್ಲಿ ಪೊರಕೆ ಚಳವಳಿ ನಡೆಸಿದ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರು ಉಪಮುಖ್ಯಮಂತ್ರಿ ಅಶ್ವಥನಾರಾಯಣ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್‌ ಪವಾರ್ ವಿರುದ್ಧ ಕಿಡಿಕಾರಿದರು.

‘ತಮಿಳು ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ‘ಅಶ್ವಥನಾಯಿರಾಣ’ ಹೇಳಿದ್ದಾರೆ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವ ಯತ್ನಾಳ ರೋಲ್‌ಕಾಲ್‌ ಗಿರಾಕಿ’ ಎಂದು ಸಂಘಟನೆಯ ಅಧ್ಯಕ್ಷ ಶಿವಶಂಕರ್ ಹರಿಹಾಯ್ದರು. ತಮ್ಮ ಕೈಗಳಲ್ಲಿ ಹಿಡಿದಿದ್ದ ಪಾದರಕ್ಷೆಗಳಿಗೆ ಅಜಿತ್‌ ಪವಾರ್‌, ಯತ್ನಾಳ ಭಾವಚಿತ್ರ ಅಂಟಿಸಿದ್ದರು.

ಸಂಘಟನೆಯ ಪದಾಧಿಕಾರಿಗಳು ಪೊರಕೆ ಪ್ರದರ್ಶಿಸಿ ಸರ್ಕಾರದ ನಿರ್ಧಾರ ಖಂಡಿಸಿದರು. ನಿಗಮ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT