ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಟಿಎಂ ಶಾಲೆ ಒಡೆಯುವುದಿಲ್ಲ– ಸಿಎಂ ಭರವಸೆ

Last Updated 25 ನವೆಂಬರ್ 2020, 3:31 IST
ಅಕ್ಷರ ಗಾತ್ರ

ಮೈಸೂರು: ಮಹಾರಾಣಿ ಮಾದರಿ ಶಾಲೆ ಉಳಿಸಿ ಹೋರಾಟ ಸಮಿತಿಯ ಮುಖಂಡರು ನೀಡಿದ ಮನವಿಯನ್ನು ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಯಾವುದೇ ಕಾರಣಕ್ಕೂ ಶಾಲೆ ಒಡೆಯಲು ಬಿಡುವುದಿಲ್ಲ’ ಎಂದು ಭರವಸೆ ನೀಡಿದರು.

ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಯಡಿಯೂರಪ್ಪ ಅವರನ್ನು ಸಮಿತಿಯ ಪರವಾಗಿ ಸ‌.ರ.ಸುದರ್ಶನ್, ನಂಜರಾಜ ಅರಸ್, ಹೊಸಕೋಟೆ ಬಸವರಾಜು, ಬಿ.ಕರುಣಾಕರನ್ ಹಾಗೂ ಇತರರು ಭೇಟಿ ಮಾಡಿ ‘ಐತಿಹಾಸಿಕ ಶಾಲೆ ಉಳಿಸಿ ವಿವೇಕ ಸ್ಮಾರಕ ನಿರ್ಮಿಸಿ’ ಎಂಬ ಮನವಿ ಸಲ್ಲಿಸಿದರು.

ಸಹಿಯೇ ಇಲ್ಲದ ಮನವಿ ಪತ್ರ ಆಧರಿಸಿ ಶಿಕ್ಷಣ ಇಲಾಖೆಯ ಆಯುಕ್ತರು ಶಾಲೆ ಹಸ್ತಾಂತರಿಸಲು ನ. 19ರಂದು ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ. ಇದು ಜಾರಿಗೆ ಬಂದರೆ ಸಂವಿಧಾನದ 21 ಎ ಹಾಗೂ ಅದನ್ನು ಆಧರಿಸಿದ ಸುಪ್ರೀಂಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ಜೊತೆಗೆ ಮುಖ್ಯಮಂತ್ರಿಗೆ ನ್ಯಾಯಾಂಗ ನಿಂದನೆಯ ಕಳಂಕ ತಟ್ಟುತ್ತದೆ. ಈಗಲೂ ಈ ಸಂಬಂಧ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಅವರು ಹೇಳಿದರು.

ಕೂಡಲೇ ಆದೇಶವನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಸತ್ಯಾಗ್ರಹ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದರು.

ಇದೇ ಶಾಲೆಯಲ್ಲಿ 2020–21ನೇ ಸಾಲಿನಲ್ಲಿ 61 ಮಕ್ಕಳು ಅಧಿಕೃತವಾಗಿ ದಾಖಲಾಗಿದ್ದಾರೆ. ಜತೆಗೆ,14 ಮಕ್ಕಳು ಬೇರೆ ಶಾಲೆಯಿಂದ ಇಲ್ಲಿಗೆ ಬರಲು ಮುಖ್ಯ ಶಿಕ್ಷಕರಿಗೆ ವರ್ಗಾವಣೆ ಪತ್ರ ಕೋರಿ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಇಲ್ಲಿರುವ ಮಕ್ಕಳ ಸಂಖ್ಯೆ 75 ಮುಟ್ಟಿದೆ ಎಂದು ಅವರು ಮಾಹಿತಿ ನೀಡಿದರು.

‘ನಾವು ಐತಿಹಾಸಿಕ ಪಾರಂಪರಿಕ ಮಹಾರಾಣಿ ಎನ್.ಟಿ.ಎಂ ಶಾಲೆಯನ್ನು ಉಳಿಸಿ ಎಂದು ಹೋರಾಡುತ್ತಿರುವವರೇ ವಿನಹಾ ವಿವೇಕಾನಂದ ಸ್ಮಾರಕಕ್ಕೆ ವಿರೋಧಿಗಳಲ್ಲ. ವಿವೇಕ ಸ್ಮಾರಕ ಶಾಲೆ ಬಿಟ್ಟು ಬೇರೆ ಜಾಗದಲ್ಲಿ ನಿರ್ಮಾಣವಾಗಲಿ’ ಎಂದು ಅವರು ಹೇಳಿದರು.

ಇದೇ ವೇಳೆ ನಂಜರಾಜಅರಸ್ ಅವರೂ ಶಾಲೆ ಉಳಿಸಲು ಕೋರಿ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಈ ಸಂದರ್ಭದಲ್ಲಿ ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT