ಬುಧವಾರ, ಅಕ್ಟೋಬರ್ 21, 2020
26 °C
ಕೋವಿಡ್‌ ಬಾಧಿತರೇ ಕುಟುಂಬವಾಗಿದ್ದರು– ನರ್ಸ್‌ ರುಕ್ಮಿಣಿ

ಸತತ ಏಳು ತಿಂಗಳಿಂದ ಸೋಂಕಿತರ ಸೇವೆ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸೋಂಕಿತರು ದಾಖಲಾಗುವ ಮುನ್ನವೇ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ದ ನರ್ಸ್‌ ಪಿ.ಎಂ.ರುಕ್ಮಿಣಿ, ಏಳು ತಿಂಗಳಿನಿಂದ ಸತತವಾಗಿ ಇಲ್ಲೇ ಆರೈಕೆಯಲ್ಲಿ ತೊಡಗಿದ್ದಾರೆ. ಇವರ ಕೆಲಸ ಮೆಚ್ಚಿ ದಸರಾ ಉದ್ಘಾಟನೆಗೆ ಆಹ್ವಾನ ನೀಡಿ ಸನ್ಮಾನಿಸಲಾಗುತ್ತಿದೆ.

‘ಮಾರ್ಚ್‌ನಲ್ಲಿ ಹೊಸ ಕಟ್ಟಡದಲ್ಲಿ ಕೋವಿಡ್‌ ಆಸ್ಪತ್ರೆ ಪ್ರಾರಂಭಿಸಿದಾಗ ಒಂದು ಸೂಜಿ ಕೂಡ ಇರಲಿಲ್ಲ. ಕಬ್ಬಿಣದ ಮಂಚ, ಹಾಸಿಗೆ ಜೋಡಣೆಯಿಂದ ಹಿಡಿದು ನಿತ್ರಾಣಗೊಂಡ ಸೋಂಕಿತರ ಬೆನ್ನು ಸವರಿ ಊಟ ಮಾಡಿಸಿ, ಮಾತ್ರೆ ನುಂಗಿಸಿ, ನೀರು ಕುಡಿಸುವ ಕೆಲಸ ಮಾಡಿದ್ದೇನೆ. ಈಗಲೂ ಮಾಡುತ್ತಿದ್ದೇನೆ. ಮನೆಬಿಟ್ಟು ಆತಂಕದಲ್ಲಿ ಬದುಕುತ್ತಿದ್ದ ವೃದ್ಧ ರೋಗಿಗಳ ಬೆನ್ನು ಸವರಿದಾಗ ಅವರಿಗೆ ಏನೋ ಸಮಾಧಾನ. ನಮ್ಮವರು ಸಿಕ್ಕಿದರು ಎಂಬ ಧೈರ್ಯ. ನರ್ಸ್‌ ಕೆಲಸದ ಮೂಲ ಉದ್ದೇಶ ಅದೇ ಅಲ್ಲವೇ?’ ಎನ್ನುತ್ತಾರೆ ಅವರು.

ಆರಂಭದಲ್ಲಿ ಜುಬಿಲೆಂಟ್‌ ಪ್ರಕರಣದಿಂದ ನಿತ್ಯ ಏಳೆಂಟು ಮಂದಿ ಸೋಂಕಿತರು ಆಸ್ಪತ್ರೆಗೆ ಬರಲಾರಂಭಿಸಿದರು. ಇಡೀ ಜಿಲ್ಲಾಡಳಿತ ಗಾಬರಿಗೊಳಗಾಯಿತು. ಸಿಬ್ಬಂದಿ, ಹಾಸಿಗೆಯ ಕೊರತೆಯೂ ಇತ್ತು. ಆ ಸಂದರ್ಭದಲ್ಲಿ ರುಕ್ಮಿಣಿ ಅವರು ‘ಡಿ’ ದರ್ಜೆ ನೌಕರರ ಜೊತೆಗೂಡಿ ಇಡೀ ದಿನ ಕೆಲಸ ಮಾಡಿ, ಕೆಲ ದಿನ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದರು. ಈ ಆಸ್ಪತ್ರೆಯಲ್ಲಿ ಈಗ ಸುಮಾರು 250 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಆರಂಭದ 4 ತಿಂಗಳು ರಜೆಯೇ ಸಿಗಲಿಲ್ಲ. ಬೆಳಿಗ್ಗೆ 8 ಗಂಟೆಗೆ ಆಸ್ಪತ್ರೆಗೆ ಹೋದರೆ ಮನೆಗೆ ಬರುವುದು ರಾತ್ರಿ 9 ಗಂಟೆ ಆಗುತಿತ್ತು. ಕೋವಿಡ್ ಬಾಧಿತರೇ ನನಗೆ ಕುಟುಂಬದವರಾಗಿಬಿಟ್ಟರು. ಮಧ್ಯರಾತ್ರಿಯೂ ಆಸ್ಪತ್ರೆಯಿಂದ ಕರೆ ಬರುತ್ತಿತ್ತು. ಪತಿ, ಮಕ್ಕಳು ಮಲಗಿರುತ್ತಿದ್ದರು. ಸದ್ದಿಲ್ಲದೇ ಎದ್ದು ಹೊರಗಿನಿಂದ ಬೀಗ ಹಾಕಿಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೆ. ಈಚೆಗೆ ವಾರಕ್ಕೊಂದು ರಜೆ ತೆಗೆದುಕೊಳ್ಳುತ್ತಿದ್ದೇನೆ’ ಎಂದರು.

ಕೊಡಗು ಜಿಲ್ಲೆಯ ಇವರು 23 ವರ್ಷಗಳಿಂದ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತಿ ಜನಿಶ್‌ ಕುಮಾರ್‌ ಕಂದಾಯ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

‘13 ವರ್ಷ ಹಾಗೂ 11 ವರ್ಷದ ಪುತ್ರಿಯರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ‍ಎಲ್ಲಾ ಜವಾಬ್ದಾರಿ ಪತಿ ಮೇಲೆ ಬಿದ್ದಿದೆ. ದಸರೆಗೆ ಆಹ್ವಾನಿಸುವ ಮೂಲಕ ಸರ್ಕಾರವು ನನ್ನ ಕೆಲಸ ಗುರುತಿಸಿದೆ. ಅದೇ ನನ್ನ ಶ್ರಮಕ್ಕೆ ಸಿಕ್ಕ ಪ್ರತಿಫಲ. ಅದೇ ಖುಷಿಯಲ್ಲಿ ಕೆಲಸ ಮುಂದುವರಿಸುವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು