ಶನಿವಾರ, ಮೇ 21, 2022
28 °C
ಕೇರಳ ವರ್ತಕರಿಂದ ಹೆಚ್ಚಿನ ಬೇಡಿಕೆ ಸೃಷ್ಟಿ

ಈರುಳ್ಳಿ ದರಕ್ಕೆ ಬೀಳದ ಕಡಿವಾಣ; ಮೈಸೂರು ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹145

– ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಈರುಳ್ಳಿ ದರದ ನಾಗಾಲೋಟ ನಗರದಲ್ಲಿ ಮುಂದುವರಿದಿದೆ. ಕೆ.ಜಿಗೆ ಈರುಳ್ಳಿಯ ಚಿಲ್ಲರೆ ದರ ₹ 150ನ್ನು ದಾಟಿದೆ. ಅತ್ಯುತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ ₹ 200ರ ಸನಿಹ ಇದೆ. ಹಾಪ್‌ಕಾಮ್ಸ್‌ನಲ್ಲೇ ಇದರ ದರ ₹ 145 ಇದೆ.

ಇದು ಚಿಲ್ಲರೆ ಮಾರುಕಟ್ಟೆಯ ಸ್ಥಿತಿಯಾದರೆ, ಸಗಟು ಮಾರುಕಟ್ಟೆಯ ಪರಿಸ್ಥಿತಿಯೇ ಬೇರೆ ಇದೆ. ಈ ತಿಂಗಳ ಆರಂಭದಿಂದಲೂ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿಯ ಪೂರೈಕೆ ಮತ್ತು ಬೆಲೆ ಎರಡೂ ಹೆಚ್ಚಾಗುತ್ತಿದೆ. ಪೂರೈಕೆ ಹೆಚ್ಚಾದರೆ ಬೆಲೆ ಕಡಿಮೆಯಾಗಬೇಕು ಎಂಬ ನಿಯಮ ಈರುಳ್ಳಿ ವಿಚಾರದಲ್ಲಿ ಸುಳ್ಳಾಗಿದೆ.

ಡಿಸೆಂಬರ್ 1ರಂದು 1,212 ಕ್ವಿಂಟಲ್‌ನಷ್ಟು ಈರುಳ್ಳಿ ಮಾರುಕಟ್ಟೆಗೆ ಬಂದಿತ್ತು. ಆಗ ಇದರ ಸಗಟು ದರ ಕೆ.ಜಿಗೆ ₹ 60 ಇತ್ತು. ನಂತರ, ಪೂರೈಕೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತಲೇ ಸಾಗಿದೆ. ಇದಕ್ಕೆ ತಕ್ಕಂತೆ ಬೆಲೆಯೂ ಅಧಿಕಗೊಳ್ಳುತ್ತಿದೆ. ಸೋಮವಾರ 1,620 ಕ್ವಿಂಟಲ್‌ನಷ್ಟು ಈರುಳ್ಳಿ ಬಂದಿತ್ತು. ದರ ₹ 100 ಇದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ದಿನವೊಂದಕ್ಕೆ 1,675 ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗಿತ್ತು. ದರ ಕೆ.ಜಿಗೆ ₹ 10 ಮಾತ್ರ ಇತ್ತು. ಈಗ ಸರಿಸುಮಾರು ಇಷ್ಟೇ ಪ್ರಮಾಣದ ಈರುಳ್ಳಿ ಮಾರುಕಟ್ಟೆಗೆ ಬಂದಾಗ್ಯೂ ದರ ಮಾತ್ರ ಹತ್ತು ಪಟ್ಟು ಹೆಚ್ಚಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

‘ಹೆಚ್ಚಿನ ದರದಿಂದಾಗಿ ಬೇಡಿಕೆ ಹಿಂದಿನಷ್ಟು ಇಲ್ಲ. ಆದರೆ, ದರ ಮಾತ್ರ ಏರುತ್ತಲೇ ಇದೆ. ಇದರ ಹಿಂದೆ ಮಧ್ಯವರ್ತಿಗಳ ಕೈವಾಡ ಇರಬಹುದು’ ಎಂಬ ಸಂಶಯವನ್ನು ಈರುಳ್ಳಿ ವ್ಯಾಪಾರಿ ಮಹದೇವಸ್ವಾಮಿ ವ್ಯಕ್ತಪಡಿಸುತ್ತಾರೆ.

ಆದರೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಜಂಟಿ ನಿರ್ದೇಶಕ ಸಿ.ಶಿವಣ್ಣ ಈ ಆರೋಪವನ್ನು ಅಲ್ಲಗಳೆಯುತ್ತಾರೆ. ಜಿಲ್ಲೆಯಲ್ಲಿ ಎಲ್ಲಿಯೂ ಈರುಳ್ಳಿಯ ಅಕ್ರಮ ದಾಸ್ತಾನು ಕಂಡು ಬಂದಿಲ್ಲ. ಇಲ್ಲಿಗೆ ಬಂದ ಈರುಳ್ಳಿಗೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬೇಡಿಕೆ ಇರುವುದರಿಂದ ಬೆಲೆಗೆ ಕಡಿವಾಣ ಬಿದ್ದಿಲ್ಲ ಎಂದು ಅವರು ಹೇಳುತ್ತಾರೆ.

ಹೈರಣಾದ ಆಮ್ಲೆಟ್‌ ವ್ಯಾಪಾರಿಗಳು

ಒಂದು ಕಡೆ ಈರುಳ್ಳಿ ದರದ ಏರಿಕೆ ಹಾಗೂ ಮತ್ತೊಂದು ಕಡೆ ಕೋಳಿಮೊಟ್ಟೆಯ ದರ ಏರಿಕೆ. ಇವೆರಡರ ನಡುವೆ ಸಿಲುಕಿರುವ ಆಮ್ಲೆಟ್ ವ್ಯಾಪಾರಿಗಳು ಹೈರಣಾಗಿದ್ದಾರೆ. ಕೆಲವೆಡೆ ದರ ಹೆಚ್ಚಿಸಿ ಆಮ್ಲೆಟ್ ಮಾರಾಟ ಮಾಡುತ್ತಿದ್ದರೂ ಲಾಭ ದಕ್ಕುತ್ತಿಲ್ಲ. ಕೆಲವು ವ್ಯಾಪಾರಿಗಳು ದರ ಇಳಿಯುವ ತನಕ ಆಮ್ಲೆಟ್ ಗೊಡವೆಯೇ ಬೇಡ ಎಂದು ಬೇರೆ ಬಗೆಯ ವ್ಯಾಪಾರದತ್ತ ತಮ್ಮ ಗಮನ ಹರಿಸಿದ್ದಾರೆ.

ನುಗ್ಗೆ ಬರ; ದರ ದುಬಾರಿ

ನುಗ್ಗೆಕಾಯಿಯನ್ನು ಎಲ್ಲೇ ಹುಡುಕಿದರೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಡಿ. 3ರಂದು ಮಾತ್ರ 3 ಕ್ವಿಂಟಲ್‌ನಷ್ಟು ನುಗ್ಗೆ ಬಂದಿತ್ತು. ಹಾಪ್‌ಕಾಮ್ಸ್‌ನಲ್ಲೂ ಇದು ಸಿಗುತ್ತಿಲ್ಲ. ಫೆಬ್ರುವರಿ ಹೊತ್ತಿಗೆ ಇಳುವರಿ ಬರುವ ನಿರೀಕ್ಷೆ ಇದೆ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರುದ್ರೇಶ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬದನೆ ಬೆಲೆ ನಿಯಂತ್ರಣಕ್ಕೆ

ಕೆ.ಜಿಗೆ ಸಗಟು ಧಾರಣೆ ₹ 30ನ್ನು ದಾಟಿದ್ದ ಬದನೆ ಬೆಲೆಯು ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಬದನೆ ಪೂರೈಕೆಯಾಗುತ್ತಿದೆ. ಸದ್ಯ, ಸಗಟು ಬೆಲೆ ₹ 22 ಇದೆ.

ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ
ತರಕಾರಿಗಳುಕಳೆದ ವಾರದ ಧಾರಣೆಈಗಿನ ಧಾರಣೆ
ಟೊಮೆಟೊ1317
ಬೀನ್ಸ್1825
ಕ್ಯಾರೆಟ್4245
ಎಲೆಕೋಸು1714
ದಪ್ಪಮೆಣಸಿನಕಾಯಿ2322
ಬದನೆ 3022
ನುಗ್ಗೆಕಾಯಿ 2434
ಹಸಿಮೆಣಸಿನಕಾಯಿ 2223
ಈರುಳ್ಳಿ70100

 

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು