ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡಿ ವಿಹಾರದಲ್ಲಿ ಸಿಂಧು ಹವಾ

ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಬ್ಯಾಡ್ಮಿಂಟನ್‌ ಆಟಗಾರ್ತಿ
Last Updated 2 ಅಕ್ಟೋಬರ್ 2019, 5:26 IST
ಅಕ್ಷರ ಗಾತ್ರ

ಮೈಸೂರು: ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ನೆರೆದಿದ್ದ ಕ್ರೀಡಾಪಟುಗಳಲ್ಲಿ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು ಅವರದ್ದೇ ಧ್ಯಾನ. ಕಾರ್ಯಕ್ರಮದ ನಿರೂಪಕರು, ಗಣ್ಯರು ಸಿಂಧು ಹೆಸರು ಹೇಳುತ್ತಿದ್ದಂತೆಯೇ ಜೋರು ಕರತಾಡನ ಕೇಳಿಬಂತು.

ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಸಿಂಧು ಅವರು ಎಲ್ಲರ ಕೇಂದ್ರಬಿಂದುವಾಗಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಹೈದರಾಬಾದ್‌ನ ಆಟಗಾರ್ತಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

‘ದಸರಾ ಕ್ರೀಡಾಕೂಟದ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳು ಇಲ್ಲಿದ್ದಾರೆ. ಎಲ್ಲರಿಗೂ ಶುಭವಾಗಲಿ’ ಎಂದು ಸಿಂಧು ಹೇಳಿದರು.

‘ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಖಂಡಿತ. ಹೆತ್ತವರ ಪ್ರೋತ್ಸಾಹದಿಂದ ನನಗೆ ಇಷ್ಟು ಸಾಧನೆ ಮಾಡಲು ಆಗಿದೆ. ಅದೇ ರೀತಿ ಪೋಷಕರು ತಮ್ಮ ಮಕ್ಕಳಿಗೆ ಉತ್ತೇಜನ ನೀಡಬೇಕು. ನೀವು ತೋರಿರುವ ಪ್ರೀತಿಗೆ ನನ್ನ ಮನಸ್ಸು ತುಂಬಿ ಬಂದಿದೆ’ ಎಂದರು.

ಸಿಂಧು ಅವರು ಮಾತನಾಡುತ್ತಿದ್ದಾಗ ಮಳೆ ಸುರಿಯಲು ಆರಂಭಿಸಿತು. ಇದರಿಂದ ಅವರು ಬೇಗನೇ ಮಾತು ಮುಗಿಸಿದರು. ಯಡಿಯೂರಪ್ಪ ಅವರು ಕ್ರೀಡಾಪಟುಗಳಿಗೆ ಶುಭಹಾರೈಸಿದರು.

ಪಥ ಸಂಚಲನ: ಕಾರ್ಯಕ್ರಮದ ಆರಂಭದಲ್ಲಿ ಕ್ರೀಡಾಪಟುಗಳ ಆಕರ್ಷಕ ಪಥಸಂಚಲನ ನಡೆಯಿತು. ಮೈಸೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳ ಸ್ಪರ್ಧಿಗಳಲ್ಲದೆ, ಮೈಸೂರು ಕ್ರೀಡಾ ವಸತಿ ನಿಲಯದ ಕ್ರೀಡಾಪಟುಗಳು ಪಥ ಸಂಚಲನದಲ್ಲಿ ಪಾಲ್ಗೊಂಡರು. ಚೈತ್ರಾ ದೇವಾಡಿಗ, ಉಜ್ವಲ್‌ ನಾಯ್ಡು, ಎನ್‌.ಕಿರಣ್, ಮಮತಾ ಕೆಲೋಜಿ, ಅರವಿಂದ್ ಮಾಳಗೆ ಅವರು ಕ್ರಮಗಾಗಿ ಐದು ವಿಭಾಗಗಳ ತಂಡಗಳನ್ನು ಮುನ್ನಡೆಸಿದರು.

ಕ್ರೀಡಾಜ್ಯೋತಿ ಹಸ್ತಾಂತರ: ಸೆ.29 ರಂದು ದಸರಾ ಚಾಮುಂಡಿಬೆಟ್ಟದಲ್ಲಿ ದಸರಾ ಉದ್ಘಾಟನೆ ವೇಳೆ ಕ್ರೀಡಾಜ್ಯೋತಿ ಬೆಳಗಿಸಲಾಗಿತ್ತು. ಮೂರು ದಿನ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಸಂಚರಿಸಿದ ಜ್ಯೋತಿಯನ್ನು ಸಂಜೆ 4 ಕ್ಕೆ ಕ್ರೀಡಾಂಗಣಕ್ಕೆ ತರಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾಪಟುಗಳಾದ ಚೈತ್ರಾ ದೇವಾಡಿಗ, ಕೆ.ಡಿ.ದೇವಶ್ರೀ, ಮಲಪ್ರಭಾ ಜಾಧವ್, ಸಯೀದಾ ಇಫ್ತಿಕಾರ್‌ ಬಾನು ಅವರು ಕ್ರೀಡಾಜ್ಯೋತಿಯನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಿದರು. ಉಜ್ವಲ್‌ ನಾಯ್ಡು ಅವರು ಕ್ರೀಡಾಪಟುಗಳ ಪರವಾಗಿ ಪ್ರಮಾಣವಚನ ಸ್ವೀಕರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಆಯುಕ್ತ ಕೆ.ಶ್ರೀನಿವಾಸ್, ಮೇಯರ್‌ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿಲ್ಲಾಧಿಕಾರಿ ಆಭಿರಾಂ ಜಿ.ಶಂಕರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಸುರೇಶ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT