ಸೋಮವಾರ, ಆಗಸ್ಟ್ 15, 2022
21 °C
ಪೊಲೀಸ್ ಬೆಂಗಾವಲು ವಾಹನದ ರಕ್ಷಣೆಯೊಂದಿಗೆ ರಸ್ತೆಗಿಳಿದ 6 ಬಸ್‌ಗಳು

ಬಸ್‌ಗಳಿಲ್ಲದೇ ಹೈರಣಾದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸತತ 2ನೇ ದಿನವಾದ ಶನಿವಾರವೂ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರ ಮುಂದುವರೆದಿದ್ದು, ಬಸ್‌ಗಳಿಲ್ಲದೇ ಜನರು ಹೈರಣಾಗಿದ್ದಾರೆ. ಬೇರೆ ಬೇರೆ ಊರಿಗೆ ಹೋಗಬೇಕಾದ ಜನರು ಪರಿತಪಿಸಿದರು. ಸಿಕ್ಕಿದ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಹಲವು ಖಾಸಗಿ ವಾಹನಗಳು ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆದು ಸಂಚಾರ ಸೌಲಭ್ಯ ನೀಡುತ್ತಿವೆ.

ರಕ್ಷಣೆ ಒದಗಿಸಿದರೆ ಕೆಲಸಕ್ಕೆ ಬರಲು ಸಿದ್ಧ ಎಂದು ಕೆಲವು ಮಂದಿ ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿದ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪೊಲೀಸರ ರಕ್ಷಣೆ ಕೋರಿದರು. ಪೊಲೀಸ್ ಬೆಂಗಾವಲು ವಾಹನದ ರಕ್ಷಣೆಯೊಂದಿಗೆ 6 ಬಸ್‌ಗಳು ಇಲ್ಲಿನ ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್‌ನಿಲ್ದಾಣದಿಂದ ಬೆಂಗಳೂರಿಗೆ ಸಂಚಾರ ಆರಂಭಿಸಿದವು. ರಾತ್ರಿಯವರೆಗೆ ತಲಾ 2 ಸಾಮಾನ್ಯ ಸಾರಿಗೆ, ರಾಜಹಂಸ ಹಾಗೂ ವೋಲ್ವೊ ಬಸ್‌ಗಳು ಸಂಚಾರ ನಡೆಸಿವೆ.

‘ಪ್ರತಿ ಬಸ್‌ನಲ್ಲಿ ಒಬ್ಬ ಕಾನ್‌ಸ್ಟೆಬಲ್‌ ಇದ್ದು, ಬೆಂಗಾವಲು ವಾಹನ ಜತೆಯಲ್ಲಿರುತ್ತದೆ. ಶುಕ್ರವಾರ ಸಾಕಷ್ಟು ಬಸ್‌ಗಳಿಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿ ಮಾಡಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. ಶನಿವಾರ ಸಂಚಾರ ಆರಂಭಿಸಿದ ಎಲ್ಲ ಬಸ್‌ಗಳಿಗೂ ಪೊಲೀಸ್ ಭದ್ರತೆ ಒದಗಿಸಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು. ನಗರ ಸಾರಿಗೆ ಬಸ್‌ಗಳು ಶನಿವಾರ ರಸ್ತೆಗಿಳಿಯಲಿಲ್ಲ.

ಖಾಸಗಿ ವಾಹನಗಳಿಂದ ಹೆಚ್ಚುವರಿ ದರ ವಸೂಲು– ಆರೋಪ

ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳುತ್ತಿರುವ ಕೆಲವು ಖಾಸಗಿ ವಾಹನಗಳು ಪ್ರಯಾಣಿಕರಿಂದ ಹೆಚ್ಚುವರಿ ದರ ಪಡೆಯುತ್ತಿವೆ. ಹೆಚ್ಚಿನ ದರ ಕೊಟ್ಟರಷ್ಟೇ ಹತ್ತಿಸಿಕೊಳ್ಳುವುದಾಗಿ ಮೊದಲೆ ತಿಳಿಸುತ್ತಿದ್ದಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ.

ಪ್ರಯಾಣಿಕರಾದ ರಾಣಿ ಪ್ರತಿಕ್ರಿಯಿಸಿ, ‘ಬೆಂಗಳೂರಿಗೆ ಸಾಮಾನ್ಯದರ ₹ 120 ಇದೆ. ಆದರೆ, ಖಾಸಗಿ ವಾಹನದಲ್ಲಿ ಏಕರೂಪದ ದರ ಇಲ್ಲ. ಒಂದೊಂದು ವಾಹನದವರು ಒಂದೊಂದು ದರ ಕೇಳುತ್ತಿದ್ದಾರೆ. ಅನಿವಾರ್ಯ ಎನಿಸಿದವರು ಕೇಳಿದ್ದಷ್ಟು ದರ ನೀಡಿ ಹೋಗುತ್ತಿದ್ದಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.