ಶುಕ್ರವಾರ, ಏಪ್ರಿಲ್ 3, 2020
19 °C

ಜಿಲ್ಲೆಯ 8 ಮಂದಿಗೆ ಪೊಲೀಸರಿಗೆ ಗೌರವ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ರಾಜ್ಯ ಸರ್ಕಾರದಿಂದ ಕೊಡ ಮಾಡುವ 2018ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಜಿಲ್ಲೆಯ 8 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ. ರಾಜ್ಯದ ಒಟ್ಟು 122 ಮಂದಿ ಪೊಲೀಸರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.‌

ಸಂಚಾರ ಪೊಲೀಸ್ ವಿಭಾಗದ ಎಸಿಪಿ ಸಂದೇಶ್‌ಕುಮಾರ್, ನಗರ ಅಪರಾಧ ಪತ್ತೆ ವಿಭಾಗದ ಇನ್‌ಸ್ಪೆಕ್ಟರ್‌ ಸಿ.ಕಿರಣ್‌ಕುಮಾರ್, ಸ್ಪೆಷಲ್ ಬ್ರಾಂಚ್ ಇನ್‌ಸ್ಪೆಕ್ಟರ್ ಎಂ.ಷಣ್ಮುಗಂ, ಕರ್ನಾಟಕ ಪೊಲೀಸ್ ಅಕಾಡೆಮಿಯ ಸಹಾಯಕ ಹೆಡ್‌ಕಾನ್‌ಸ್ಟೆಬಲ್ ಲಿಂಗರಾಜು, ನಗರ ಸಶಸ್ತ್ರ ವಿಭಾಗ ಎಸಿಪಿ ವಿ.ಶ್ರೀನಿವಾಸ್, ಪಿರಿಯಾಪಟ್ಟಣ ಸಿಪಿಐ ಬಿ.ಆರ್.ಪ್ರದೀಪ್, ತಾಂತ್ರಿಕ ವಿಭಾಗದ ಕಾನ್‌ಸ್ಟೆಬಲ್ ಎಸ್.ವಸಂತಕುಮಾರ್, ಎಸ್‌ಬಿಟಿಆರ್‌ಸಿ ಕಾನ್‌ಸ್ಟೆಬಲ್ ವಿದ್ಯಾರಾಣಿ ಆಯ್ಕೆಯಾಗಿದ್ದಾರೆ.

ಇವರಲ್ಲಿ ಎಸಿಪಿ ಸಂದೇಶ್‌ಕುಮಾರ್ ಇದುವರೆಗೂ ತನಿಖೆ ನಡೆಸಿದ ಎಲ್ಲ ಕೊಲೆ ಪ್ರಕರಣಗಳಲ್ಲೂ ಆರೋಪಿಗಳಿಗೆ ಶಿಕ್ಷೆಯಾಗಿದೆ. ಸುಭಾಷ್‌ಚಂದ್ರಬೋಸ್ ಅವರ ಜತೆ ಜರ್ಮನಿಯಲ್ಲಿ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದ ಯರನ್‌ಗೌಡರ್‌ ಅವರ ಪುತ್ರ ಕೊಚ್ಚಾನಿ ಹಾಗೂ ಇವರ ಮೊಮ್ಮಗ ಅಚ್ಯುತಾನಂದ ಅವರನ್ನು ಕುಶಲನಗರದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಿದ್ದು ಭಾರಿ ಪ್ರಶಂಸೆಗೆ ಪಾತ್ರವಾಗಿತ್ತು. ಇವರು ಬಂಧಿಸಿದ ಆರೋಪಿಗಳ ಪೈಕಿ 11 ಮಂದಿಗೆ ಜೀವಾವಧಿ ಶಿಕ್ಷೆಯಾಗಿದ್ದರೆ, ಮೂವರಿಗೆ ಗಲ್ಲು ಶಿಕ್ಷೆಯಾಗಿದೆ.

ನಗರ ಅಪರಾಧ ವಿಭಾಗದ ಇನ್‌ಸ್ಪೆಕ್ಟರ್ ಸಿ.ಕಿರಣ್‌ಕುಮಾರ್ ಅವರು ಮಧ್ಯಪ್ರದೇಶಕ್ಕೆ ತೆರಳಿ ದಕ್ಷಿಣ ಭಾರತದಲ್ಲಿ ಮನೆ ಕಳ್ಳತನ ನಡೆಸುತ್ತಿದ್ದ ಕಳ್ಳರನ್ನು ಬಂಧಿಸಿ, 28 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದರು. ಇವರು ‘ಸೆಸ್ಕ್‌’ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸುಮಾರು ₹ 1.5 ಕೋಟಿಯಷ್ಟು ದಂಡವನ್ನು ವಿದ್ಯುತ್ ಕಳ್ಳತನದಾರರಿಂದ ವಸೂಲು ಮಾಡಿದ್ದರು. ಜತೆಗೆ, ಇವರು ತನಿಖೆ ನಡೆಸಿದ 15ಕ್ಕೂ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ.

ಪಿರಿಯಾಪಟ್ಟಣದ ಸಿಪಿಐ ಪ್ರದೀಪ್ ಅವರು ತನಿಖೆ ನಡೆಸಿದ 7 ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದರೆ, ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯಲ್ಲಿ ಇವರ ಸೇವೆಯನ್ನು ಪರಿಗಣಿಸಿ ಈ ಪದಕ ನೀಡಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು