ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಬಡ ವಿದ್ಯಾರ್ಥಿ ಸಮೂಹ

ಸಕಾಲಕ್ಕೆ ಸಿಗದ ಸರ್ಕಾರಿ ವಿದ್ಯಾರ್ಥಿನಿಲಯಗಳ ಪ್ರವೇಶಾತಿ: ಕಾಲೇಜಿಗೂ ಗೈರು
Last Updated 13 ಫೆಬ್ರುವರಿ 2021, 3:17 IST
ಅಕ್ಷರ ಗಾತ್ರ

ಮೈಸೂರು: ಪ್ರಥಮ ಪಿಯು, ಪದವಿ, ಸ್ನಾತಕೋತ್ತರ ಪದವಿ ತರಗತಿಗಳು ಫೆ.1ರಿಂದ ಆರಂಭವಾಗಿವೆ. ಇದಕ್ಕೆ ಪೂರಕವಾಗಿ ಸರ್ಕಾರಿ ವಿದ್ಯಾರ್ಥಿನಿಲಯ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‌ಗಳಲ್ಲಿ ಪ್ರಥಮ ವರ್ಷದ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶಾತಿ ದೊರೆಯದಿರುವುದು ಸಮಸ್ಯೆಯಾಗಿ ಕಾಡುತ್ತಿದೆ.

ಕಾಲೇಜು ಆರಂಭವಾಗಿ ಎರಡು ವಾರ ಗತಿಸಿದರೂ ಹಾಸ್ಟೆಲ್‌ಗಳಲ್ಲಿ ಪ್ರವೇಶ ಸಿಗದಿರುವುದರಿಂದ ಅಸಹಾಯಕ, ಬಡ ವಿದ್ಯಾರ್ಥಿಗಳು ಇಂದಿಗೂ ಕಾಲೇಜಿಗೆ ಬಾರದಾಗಿದ್ದಾರೆ. ದೂರದ ಊರಿನಿಂದ ಪ್ರವೇಶ ಸಿಗುವ ಭರವಸೆಯಿಂದ ಮೈಸೂರಿಗೆ ಬಂದು, ನಿರಾಸೆಯಿಂದ ಮರಳಿದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ.

‘ಮೈಸೂರು ವಿಶ್ವವಿದ್ಯಾನಿಲಯದ ಎಂಎ ಪ್ರಥಮ ಸೆಮಿಸ್ಟರ್‌ನ ವಿದ್ಯಾರ್ಥಿ ನಾನು. ಕಾಲೇಜು ಆರಂಭದ ದಿನದಿಂದಲೂ ಬರುತ್ತಿರುವೆ. ನಮ್ಮೂರು ಸಕಲೇಶಪುರ. ನನಗೆ ಹಾಸ್ಟೆಲ್‌ ಸೌಲಭ್ಯ ಸಿಕ್ಕಿಲ್ಲ. ಮೈಸೂರಿನಲ್ಲಿ ಬಂಧುಗಳಿರಲಿ, ಪರಿಚಯದವರೂ ಇಲ್ಲ. ಆದರೆ, ತರಗತಿಯನ್ನು ತಪ್ಪಿಸಬಾರದು ಎಂಬ ಕಾರಣಕ್ಕೆ ಹುಣಸೂರಿನಲ್ಲಿರುವ ನಮ್ಮಣ್ಣನ ಸ್ನೇಹಿತರೊಬ್ಬರ ರೂಮಿನಲ್ಲಿ ಆಶ್ರಯ ಪಡೆದಿರುವೆ.’

‘ನಿತ್ಯವೂ ಹುಣಸೂರಿನಿಂದ ಗಂಗೋತ್ರಿಗೆ ಬಂದು ಹೋಗುವೆ. ಒಂದು ದಿನದ ಬಸ್‌ ಪ್ರಯಾಣ ದರವೇ ₹100 ಇದೆ. ಬೆಳಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ₹60 ಖರ್ಚಾಗುತ್ತಿದೆ. ಊರಿಂದ ತಂದ ದುಡ್ಡು ಖಾಲಿಯಾಗಿದ್ದರಿಂದ ವಿಧಿಯಿಲ್ಲದೇ ಕಾಲೇಜನ್ನು ಬಿಟ್ಟು ಕಾಸು ತರಲಿಕ್ಕಾಗಿ ಊರಿಗೆ ಹೋಗುತ್ತಿರುವೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ವಿದ್ಯಾರ್ಥಿಯೊಬ್ಬ ಶುಕ್ರವಾರ ‘ಪ್ರಜಾವಾಣಿ’ ಬಳಿ ಅಲವತ್ತುಕೊಂಡ.

‘ಚಾಮರಾಜನಗರ ಜಿಲ್ಲೆಯ ಗಡಿಭಾಗ ಹೂಗ್ಯಂ ನನ್ನೂರು. ಹಾಸ್ಟೆಲ್‌ಗೆ ಅರ್ಜಿ ಹಾಕಿರುವೆ. ಇನ್ನೂ ಸೀಟು ಸಿಕ್ಕಿಲ್ಲ. ಊರಿಂದ ನಿತ್ಯವೂ ಓಡಾಡೋದು ಸಾಧ್ಯವೇ ಇಲ್ಲ. ಅನಿವಾರ್ಯವಾಗಿ ಕೊಳ್ಳೇಗಾಲದಲ್ಲಿ ಉಳಿದಿರುವೆ. ನಿತ್ಯವೂ ಮೈಸೂರಿಗೆ ಹೋಗಿ ಬರುವ ಬಸ್‌ ಪ್ರಯಾಣ ದರವೇ ₹140 ಆಗಲಿದೆ. ಊಟ–ಉಪಾಹಾರದ ವೆಚ್ಚವೂ ಸೇರಿದರೆ ಪ್ರತಿ ದಿನ ₹200 ಬೇಕಿದೆ’ ಎಂದು ಮತ್ತೊಬ್ಬ ವಿದ್ಯಾರ್ಥಿ ತಿಳಿಸಿದ.

‘ಇಷ್ಟು ದಿನ ಕಷ್ಟಪಟ್ಟು ಕಾಲೇಜಿಗೆ ಬಂದಿರುವೆ. ಸೋಮವಾರದಿಂದ ಬರೋದೇ ಬೇಡ ಅಂದುಕೊಂಡಿರುವೆ. ಒಂದೆಡೆ ಪಾಠ ತಪ್ಪುವ ಭಯ. ಇನ್ನೊಂದೆಡೆ ನಿತ್ಯದ ಖರ್ಚು ಹೊಂದಿಸಲಾಗದ ಅಸಹಾಯಕ ಸ್ಥಿತಿ. ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಅಳಲು ತೋಡಿಕೊಂಡ.

ಹಾಸ್ಟೆಲ್‌ ಸಿಕ್ಕಿಲ್ಲ; ಕಾಲೇಜಿಗೆ ಹೋಗಿಲ್ಲ

‘ಕಾಲೇಜು ಆರಂಭವಾಗಿ ಎರಡು ವಾರ ಗತಿಸುತ್ತಿದೆ. ಹಾಸ್ಟೆಲ್‌ನಲ್ಲಿ ಪ್ರವೇಶ ಸಿಗದಿರುವುದರಿಂದ ಇದೂವರೆಗೂ ಕಾಲೇಜಿಗೆ ಹೋಗಿಲ್ಲ. ಸೋಮವಾರದಿಂದ ಹೋಗೋಣ ಎಂದುಕೊಂಡಿರುವೆ. ನಿತ್ಯದ ಖರ್ಚು ಹೊಂದಾಣಿಕೆಯಾದರೆ ಮಾತ್ರ, ವಾರದ ಮಟ್ಟಿಗೆ ತರಗತಿಗೆ ಹಾಜರಾಗುವೆ. ಅಷ್ಟರೊಳಗೆ ಹಾಸ್ಟೆಲ್‌ ಪ್ರವೇಶ ದೊರೆತರೆ ಎಲ್ಲವೂ ಅನುಕೂಲವಾಗಲಿದೆ’ ಎಂದು ಹಾಸನದ ವಿದ್ಯಾರ್ಥಿಯೊಬ್ಬ ತಿಳಿಸಿದರು.

‘ಪ್ರಥಮ ಪಿಯುಸಿಗೆ ಮೈಸೂರಿನ ಕಾಲೇಜೊಂದರಲ್ಲಿ ಸೀಟು ಸಿಕ್ಕಿದೆ. ನಮ್ಮ ತಂದೆ–ತಾಯಿ ಊರಲ್ಲಿ ಕೂಲಿ ಮಾಡುತ್ತಾರೆ. ಹೆಣ್ಣು ಮಕ್ಕಳನ್ನು ಓದಿಸಬೇಕು ಎಂಬ ತುಡಿತ ಹೊಂದಿದವರು. ಹಾಸ್ಟೆಲ್‌ ಸಿಗಲಿದೆ ಎಂಬ ವಿಶ್ವಾಸದಿಂದ ಇಲ್ಲಿಗೆ ಬಂದೆವು. ಆದರೆ ಪ್ರವೇಶವೇ ಸಿಗಲಿಲ್ಲ. ಕನ್ನಡ ಮಾಧ್ಯಮದಲ್ಲಿ ಓದಿದವರು ನಾವು. ಇದೀಗ ವಿಜ್ಞಾನ ವಿಭಾಗ ಆಯ್ದುಕೊಂಡಿದ್ದೇವೆ. ಆರಂಭದಲ್ಲೇ ತರಗತಿ ತಪ್ಪಿಸಿಕೊಂಡರೇ ಪಾಠ ಅರ್ಥವಾಗುವುದಾದರೂ ಹೆಂಗೆ?’ ಎಂದು ತಮ್ಮೂರಿಗೆ ಮರಳಿದ ದುರ್ಗದ ವಿದ್ಯಾರ್ಥಿನಿಯರು ಅಸಹಾಯಕತೆ ವ್ಯಕ್ತಪಡಿಸಿದರು.

ದೂರದ ಊರುಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಪ್ರವೇಶಾತಿಯ ಸಮಸ್ಯೆ ಎದುರಾಗಿರುವುದಕ್ಕೆ ಸಂಬಂಧಿಸಿದಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಿದರೂ, ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT