ಶನಿವಾರ, ಫೆಬ್ರವರಿ 22, 2020
19 °C
ಮೈಸೂರು ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019

ಕನ್ನಡಾಭಿಮಾನ ಬೆಳೆಸಿಕೊಳ್ಳಿ; ಚಾರುಕೀರ್ತಿ ಭಟ್ಟಾರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಆಂಗ್ಲ ಭಾಷಾ ಸಾಮ್ರಾಜ್ಯದ ಬೆಳವಣಿಗೆಯ ಭರಾಟೆಯಲ್ಲಿ ಕನ್ನಡ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ’ ಎಂದು ಶ್ರವಣಬೆಳಗೊಳ ಜೈನಮಠದ ಚಾರುಕೀರ್ತಿ ಭಟ್ಟಾರಕರು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸೆನೆಟ್‌ ಸಭಾಂಗಣದಲ್ಲಿ ಗುರುವಾರ ಮುಸ್ಸಂಜೆ ಆರಂಭಗೊಂಡ ಎರಡು ದಿನದ ಅಂತರರಾಷ್ಟ್ರೀಯ ಪ್ರಾಕೃತ ಸಮಾವೇಶ–2019ರಲ್ಲಿ ಮಾತನಾಡಿದ ಸ್ವಾಮೀಜಿ, ‘ಕನ್ನಡದಲ್ಲಿ ಮಾತನಾಡುವಾಗ ಆಂಗ್ಲ ಭಾಷೆ ಬಳಸುವುದನ್ನು ನಿಯಂತ್ರಿಸಬೇಕು’ ಎಂದು ಮನವಿ ಮಾಡಿದರು.

‘ಪ್ರಾಕೃತ 2300 ವರ್ಷಗಳ ಹಿಂದೆಯೇ ಶ್ರವಣಬೆಳಗೊಳಕ್ಕೆ ಬಂದಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಸಂಸ್ಕೃತ ಭಾಷೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆದುರಿಗಿದೆ. ಈ ಎರಡೂ ಭಾಷೆಗಳ ಜತೆ, ನೆಲದ ಭಾಷೆಯಾದ ಕನ್ನಡವನ್ನು ಕಾಪಾಡಬೇಕಿದೆ. ಇದಕ್ಕಾಗಿ ಫ್ರೆಂಚರು, ಜರ್ಮನ್ನರಂತೆ ತಾಯ್ನುಡಿಯ ಅಭಿಮಾನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ’ ಎಂದು ಭಟ್ಟಾರಕರು ತಿಳಿಸಿದರು.

‘ಜ್ಞಾನದ ಬೆಳಕು ನಿರಂತರವಾದುದು. ಜ್ಞಾನ ಪ್ರಸಾರಕ್ಕೆ ಯಾವುದೇ ಅಡೆತಡೆಯಿಲ್ಲ. ಸೂರ್ಯ ಜಗತ್ತಿನಲ್ಲಿ ಹೇಗೆ ಅಸ್ತಂಗತನಾಗದೆ ಬೆಳಗುತ್ತಾನೆ, ಅದೇ ರೀತಿ ಜ್ಞಾನಕ್ಕೂ ಅಸ್ತಂಗತ ಎಂಬುದಿಲ್ಲ. ಜ್ಞಾನೋಪಾಸನೆಗೆ ಭೇದ–ಭಾವವಿಲ್ಲ. ಪ್ರತಿಯೊಬ್ಬರೂ ಜ್ಞಾನೋಪಾಸಕರಾಗುವ ಜತೆಯಲ್ಲೇ ಸತ್ಯದ ಸಂಶೋಧನೆ ಅರಿಯಲು ಮುಂದಾಗಬೇಕು’ ಎಂಬ ಕಿವಿಮಾತುಗಳನ್ನು ಹೇಳಿದರು.

‘ಸರ್ವ ಜನಾಂಗದ ಜತೆ ಆತ್ಮೀಯ ಒಡನಾಟ, ಸಂಬಂಧ ಹೊಂದಿರುವವರು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕರು. ಶ್ರೀಗಳ ಪೀಠಾರೋಹಣದ ಸುವರ್ಣ ಸಮಾರಂಭದಲ್ಲಿ ಭಾಗಿಯಾಗಿರುವುದು ಸಂತಸ ಕೊಟ್ಟಿದೆ’ ಎಂದು ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

‘ಸಹಿಷ್ಣುತೆ, ಅಹಿಂಸೆಯನ್ನು ಜಗತ್ತಿಗೆ ಬೋಧಿಸಿದ್ದು ಜೈನ ಧರ್ಮ. ಈ ಧರ್ಮದ ಸಾಹಿತ್ಯ ಪ್ರಾಕೃತ ಭಾಷೆಯಲ್ಲಿದೆ. ದವಳ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡಿದ ತಪಸ್ವಿ ಭಟ್ಟಾರಕರು. ಇದನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕು’ ಎಂದು ಹೇಳಿದರು.

‘ಕನ್ನಡ ಸಾಹಿತ್ಯದ ಮೇಲೆ ಪ್ರಾಕೃತ ವಿಶೇಷ ಪ್ರಭಾವ ಬೀರಿದೆ. ಇದನ್ನು ಜನ ಭಾಷೆಯನ್ನಾಗಿಸುವ ದೊಡ್ಡ ಸೇವಾ ಕಾರ್ಯವನ್ನು ಚಾರುಕೀರ್ತಿ ಭಟ್ಟಾರಕರು ಕೈಗೊಂಡಿದ್ದಾರೆ. ಹಿಡಿದ ಕೆಲಸ ಪೂರೈಸುವ ತಪಸ್ವಿ ಅವರು’ ಎಂದು ಸುತ್ತೂರು ಸ್ವಾಮೀಜಿ ಪ್ರಶಂಸಿಸಿದರು.

ಕನಕಗಿರಿಯ ಭುವನಕೀರ್ತಿ ಭಟ್ಟಾರಕರು, ಕುಲಸಚಿವ ಪ್ರೊ.ಆರ್.ಶಿವಪ್ಪ, ಡಾ.ಜಯಕುಮಾರ ಉಪಾಧ್ಯೆ ಉಪಸ್ಥಿತರಿದ್ದರು.

ಪದ್ಮಶ್ರೀ ಪುರಸ್ಕೃತ ರಮಾಕಾಂತ್ ಶುಕ್ಲಾ ಚಾರುಕೀರ್ತಿ ಭಟ್ಟಾರಕರಿಗೆ ಪದ್ಯಾಂಜಲಿ ಅರ್ಪಿಸಿದರು. ಡಾ.ಹಂ.ಪ.ನಾಗರಾಜಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ನೀಲಗಿರಿ ಎಂ.ತಳವಾರ ಸ್ವಾಗತಿಸಿದರು. ಪ್ರೊ.ಸಿ.ನಾಗಣ್ಣ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು