ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್‌ ತಿನ್ಕೊಂಡಿದ್ದೋರಿಗೆ ಅನ್ನ ಸಿಕ್ತು: ಖಾಸಗಿ ವಾಹನ ಚಾಲಕರ ಮನದಾಳ

ಖಾಸಗಿ ವಾಹನ ಚಾಲಕರ ಮನದಾಳ: ನಾಲ್ಕೈದು ದಿನದ ಸಂಪಾದನೆ ನಿರಾಳ
Last Updated 12 ಏಪ್ರಿಲ್ 2021, 5:21 IST
ಅಕ್ಷರ ಗಾತ್ರ

ಮೈಸೂರು: ‘ದಿನಾಲೂ ಟೀ–ಬನ್‌ ತಿನ್ಕೊಂಡು ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದವರಿಗೆ, ನಾಲ್ಕೈದು ದಿನದ ಸಂಪಾದನೆಯಿಂದ ಅನ್ನ ತಿನ್ನೋಂಗಾಯ್ತು. ಮನೆಗೂ ಏನಾದರೂ ಕೊಂಡೊಯ್ದ್ವು. ಇದೀಗ ಕೆಎಸ್‌ಆರ್‌ಟಿಸಿ ಬಸ್‌ಗಳೇ ಹಂತ ಹಂತವಾಗಿ ರಸ್ತೆಗಿಳಿಯುತ್ತಿದ್ದಾವೆ. ನಮ್ಮದು ಮತ್ತದೇ ಹೊಟ್ಟೆಪಾಡಿನ ಹಣೆಬರಹ...’

ನಗರ ಬಸ್‌ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರ ಆರಂಭಗೊಂಡ ದಿನದಿಂದಲೂ; ಮೈಸೂರು ನಗರದ ವಿವಿಧೆಡೆಗೆ ಸಂಚಾರ ಸೇವೆ ಒದಗಿಸಿದ ಖಾಸಗಿ ವಾಹನ ಚಾಲಕರು–ಮಾಲೀಕರು ಭಾನುವಾರ ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ತಮ್ಮ ಮನದಾಳದ ಮಾತುಗಳಿವು.

‘ನಾಲ್ಕೈದು ದಿನ ಪೊಲೀಸರು, ಆರ್‌ಟಿಒ, ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಕಿರಿಕಿರಿಯೇ ಇರಲಿಲ್ಲ. ನಗರ ಬಸ್‌ ನಿಲ್ದಾಣದೊಳಕ್ಕೆ ಬಂದು ಸಾರಿಗೆ ಬಸ್‌ಗಳು ಸಂಚರಿಸಿದಂತೆ ಆಯಾ ರೂಟ್‌ ನಂಬರ್‌ ಹಾಕಿಕೊಂಡು ಸೇವೆ ಮಾಡಿದೆವು. ಜನರಿಗೂ ಅನುಕೂಲ
ವಾಯ್ತು. ನಮ್ಮ ಕೈಗೂ ಕಾಸು ಸಿಗ್ತು. ಭಾನುವಾರ ಬೆಳಿಗ್ಗೆಯಿಂದಲೇ ಸಾಕಷ್ಟು ಬಸ್‌ಗಳು ಸಂಚರಿಸುತ್ತಿವೆ. ನಾವು ಯಥಾಪ್ರಕಾರ ನಮ್ಮ ನಮ್ಮ ರೂಟ್‌ಗೆ ಮರಳುತ್ತಿದ್ದೇವೆ’ ಎಂದು ಖಾಸಗಿ ವಾಹನ ಚಾಲಕರು ಹೇಳಿದರು.

‘ಸರ್ಕಾರಿ ಸಾರಿಗೆ ಸೇವೆಗೆ ನಮ್ಮನ್ನು ಭಾಗಿದಾರರನ್ನಾಗಿಸಿಕೊಳ್ಳಲಿ. ಸರ್ಕಾರ ನಿಗದಿ ಪಡಿಸಿದ ಪ್ರಯಾಣ ದರ, ಮಾರ್ಗದಲ್ಲೇ ನಮ್ಮ ವಾಹನ ಓಡಿಸುತ್ತೇವೆ. ಬೇಕಾದರೆ ಒಂದೊಂದು ಲಕ್ಷ ರೂಪಾಯಿಯನ್ನು ಪ್ರತಿ ವಾಹನಕ್ಕೂ ಡಿಪಾಸಿಟ್‌ ಮಾಡುತ್ತೇವೆ. 33 ಸೀಟಿನ ಬಸ್‌ಗಳನ್ನೇ ಓಡಿಸುತ್ತೇವೆ. ಎರಡು ವರ್ಷ ಅವಕಾಶ ಕೊಡಲಿ. ನಮ್ಮ ಸೇವೆ ನೋಡಿ ಮುಂದುವರಿಸಲಿ’ ಎಂದು ಖಾಸಗಿ ವಾಹನದ ಚಾಲಕ ಕಂ ಮಾಲೀಕ ಕೌಶಿಕ್‌ ತಿಳಿಸಿದರು.

‘ಕೋವಿಡ್‌ ಶುರುವಾದಾಗಿನಿಂದ ವಾಹನಕ್ಕಾಗಿ ಮಾಡಿದ ಸಾಲದ ಕಂತನ್ನು ಸರಿಯಾಗಿ ಕಟ್ಟಲಾಗಿಲ್ಲ. ಸರ್ಕಾ
ರಕ್ಕೆ ಕಟ್ಟಬೇಕಿದ್ದ ತೆರಿಗೆಯನ್ನೂ ಕಟ್ಟಿಲ್ಲ. ಸಾಲ ತೀರಿಸುವಂತೆ ಫೈನಾನ್ಸ್‌ನವರು ನೀಡುವ ಕಾಟ ತಡೆದುಕೊಳ್ಳಲಾಗಲ್ಲ. ನಮ್ಮ ಬದುಕು ನಿಂತಿತ್ತು. ನಾಲ್ಕೈದು ದಿನದ ದುಡಿಮೆ ಕೊಂಚ ನಿರಾಳ ಕೊಟ್ಟಿತು. ಇನ್ಮುಂದೆ ಮತ್ತದೇ ಹಿಂದಿನ ಹಣೆಬರಹ ತಪ್ಪದು. ನಿತ್ಯವೂ ಹೆಣ
ಗಾಡುವುದು ನಿಲ್ಲದು’ ಎಂದು ಖಾಸಗಿ ವಾಹನವೊಂದರ ಚಾಲಕ ರಮೇಶ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಸಣ್ಣ ವಾಹನಗಳಿಗಷ್ಟೇ ಅನುಕೂಲ

‘ಸ್ಥಳೀಯವಾಗಿಯೇ ನಮ್ಮ ಬಸ್‌ ಓಡಿಸುತ್ತಿದ್ದೆವು. ಸಾರಿಗೆ ನೌಕರರು ಮುಷ್ಕರ ಆರಂಭಿಸಿದ ಬೆನ್ನಿಗೆ ದಿನಕ್ಕೊಮ್ಮೆ ಮಳವಳ್ಳಿ–ಮೈಸೂರು ನಡುವೆ ಸಂಚರಿಸಿದೆವು. ಸಂಪಾದನೆ ಪರವಾಗಿಲ್ಲ. ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗಿದ್ದರೆ, ಮತ್ತೊಂದಿಷ್ಟು ದುಡಿದುಕೊಳ್ಳಬಹುದಿತ್ತು. ನಮಗಿಂತಲೂ ಸಣ್ಣ ವಾಹನದವರು ಒಳ್ಳೆಯ ದುಡಿಮೆ ಮಾಡಿಕೊಂಡರು’ ಎಂದು ಮಳವಳ್ಳಿಯ ಮಲ್ಲೇಶ್‌ ತಿಳಿಸಿದರು.

‘ನಂಜನಗೂಡು–ಮೈಸೂರಿನ ನಡುವೆ ನಿತ್ಯವೂ ಹಲವು ಟ್ರಿಪ್‌ ನಮ್ಮ ಟೆಂಪೋ ಓಡಿಸಿದೆವು. ದುಡಿಮೆ ಚೆನ್ನಾಗಿ ಆಯಿತು. ಭಾನುವಾರದಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟವೂ ಹೆಚ್ಚಿದೆ. ತಮಿಳುನಾಡು–ಕೇರಳದಿಂದ ಬರುವ ಸಾರಿಗೆ ಸಂಸ್ಥೆಗಳ ವಾಹನ ಸಂಖ್ಯೆಯೂ ಹೆಚ್ಚಿದೆ. ಇನ್ನೂ ಎರಡ್ಮೂರು ದಿನ ಸಂಪಾದನೆಗೆ ಮೋಸವಾಗಲ್ಲ’ ಎಂದು ನಂಜನಗೂಡಿನ ಗುರು ಹೇಳಿದರು.

‘ನಾಲ್ಕು ದಿನ ನಮ್ಮಿಂದ ದುಡಿಸಿಕೊಂಡರು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಆರಂಭವಾಗುತ್ತಿದ್ದಂತೆ ಮತ್ತದೇ ರಾಗ ಹಾಡುತ್ತಿದ್ದಾರೆ. ಬಸ್‌ ನಿಲ್ದಾಣದಿಂದಲೇ ಬಸ್‌ ಓಡಿಸಲು ಅನುಮತಿ ಕೊಟ್ಟಿದ್ದು, ರೂಟ್‌ ನಿಗದಿಪಡಿಸಿದ್ದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ಆರ್‌ಟಿಒ. ಜನರಿಗೆ ತೊಂದರೆಯಾಗುವುದು ಬೇಡ ಎಂದು ನಾವು ಸೇವೆಗೆ ಬಂದರೆ; ಇದೀಗ ನಮಗೆ ಕಿರಿಕಿರಿ ಮಾಡುತ್ತಿದ್ದಾರೆ’ ಎಂದು ನಗರದ ಸಬರ್‌ಬನ್‌ ಬಸ್‌ ನಿಲ್ದಾಣದಲ್ಲಿ ತಮ್ಮ ಬಸ್‌ ನಿಲ್ಲಿಸಿಕೊಂಡಿದ್ದ ಮಹದೇಶ್ವರ ಟ್ರಾನ್ಸ್‌ಪೋರ್ಟ್‌ನ ಮಾದೇಶ ‘ಪ್ರಜಾವಾಣಿ’ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT