ಗುರುವಾರ , ಅಕ್ಟೋಬರ್ 22, 2020
25 °C
ಎಸ್‌ಡಿಪಿಐ, ರಾಜ್ಯ ದಲಿತ ಹೋರಾಟ ಸಮಿತಿ ಪ್ರತಿಭಟನೆ

ಹಾಥರಸ್‌ ಅತ್ಯಾಚಾರ ಘಟನೆ ಖಂಡಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಖಂಡಿಸಿ ಎಸ್‌ಡಿಪಿಐ ಹಾಗೂ ರಾಜ್ಯ ದಲಿತ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಪುರಭವನದ ಬಳಿ ಸೇರಿದ ಎಸ್‌ಡಿಪಿಐ ಕಾರ್ಯಕರ್ತರು ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರಿಗೆ ಅಲ್ಲಿ ಗೌರವಯುತವಾಗಿ ಜೀವನ ಸಾಗಿಸಲು ಆಗುತ್ತಿಲ್ಲ ಎಂದು ಖಂಡಿಸಿದರು.

‘ಜಂಗಲ್ ರಾಜ್’ ಎಂಬ ಪದ ಉತ್ತರ ಪ್ರದೇಶಕ್ಕೆ ಹೆಚ್ಚು ಸೂಕ್ತವೆನಿಸುತ್ತದೆ. ಯಾವುದೇ ನೈತಿಕತೆ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳು, ಮಾನವೀಯತೆಗೆ ಅಲ್ಲಿ ಗೌರವವಿಲ್ಲದಂತಾಗಿದೆ. ಅತ್ಯಾಚಾರಿಗಳು ಮತ್ತು ಅಪರಾಧಿಗಳು ಅಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.

ಜಿಲ್ಲಾಧ್ಯಕ್ಷ ಅಮ್ಜದ್ ಖಾನ್, ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ಮುಖಂಡರಾದ ತಬ್ರೇಜ್‌ ಸೇಠ್, ಮೌಲಾನಾ ಇಸ್ಮಾಯಿಲ್‌ ಪಾಲ್ಗೊಂಡಿದ್ದರು.

ರಾಜ್ಯ ದಲಿತ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿರುವ ಉತ್ತರ ಪ್ರದೇಶ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಎಂ.ಪರಮೇಶ, ಎಂ.ರಾಜಣ್ಣ, ನಂಜಪ್ಪ, ಚಂದ್ರು, ಮಹದೇವಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.