ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಕಾ, ಕಾರ್ತಿಕ್ ಹೇಳಿಕೆಗೆ ಖಂಡನೆ: ಪ್ರತಿಭಟನೆ

ನಂಜನಗೂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಶುಲ್ಕ ವಸೂಲಿ ನಿರ್ಧಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ
Last Updated 7 ಡಿಸೆಂಬರ್ 2019, 13:21 IST
ಅಕ್ಷರ ಗಾತ್ರ

ಮೈಸೂರು: ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡಿದ ಪೊಲೀಸರ ವಿರುದ್ಧ ಮಾತನಾಡಿರುವ ಸಂಸದೆ ಮೇನಕಾ ಗಾಂಧಿ ಹಾಗೂ ಕಾರ್ತಿಕ್ ಚಿದಂಬರಂ ಹೇಳಿಕೆ ಖಂಡಿಸಿ, ಮೈಸೂರು ಕನ್ನಡ ವೇದಿಕೆ ಸದಸ್ಯರು ಶನಿವಾರ ಪ್ರತಿಭಟಿಸಿದರು.

ನಗರದ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಇಬ್ಬರ ವಿರುದ್ಧವೂ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ತೆಲಂಗಾಣ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡರು.

ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣ ದೇಶದಲ್ಲಿ ತಲ್ಲಣ ಸೃಷ್ಟಿಸಿತ್ತು. ಇಡೀ ದೇಶವೇ ಕೃತ್ಯವನ್ನು ಖಂಡಿಸಿತ್ತು. ತೆಲಂಗಾಣ ಪೊಲೀಸರು ತೆಗೆದುಕೊಂಡ ದೃಢ ನಿರ್ಧಾರ, ಪಾತಕಿಗಳಿಗೆ ಕಠಿಣ ಎಚ್ಚರಿಕೆ ನೀಡಿದಂತಾಗಿದೆ. ಎಲ್ಲೆಡೆ ಶ್ಲಾಘನೆ ದೊರಕಿದೆ. ಆದರೆ ಕೆಲವು ರಾಜಕಾರಣಿಗಳು, ಇದರ ಬಗ್ಗೆ ಅಪಸ್ವರ ಎತ್ತಿರುವುದು ಖಂಡನೀಯ ಎಂದು ಪ್ರತಿಭಟನಕಾರರು ದೂರಿದರು.

ವೇದಿಕೆ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ, ‘ಈಗಾಗಲೇ ಆರ್ಥಿಕ ಅಪರಾಧದಲ್ಲಿ ಸಿಲುಕಿ ಆರೋಪಿಯಾಗಿ ತನಿಖೆ ಎದುರಿಸುತ್ತಿರುವ ಕಾರ್ತಿಕ್ ಚಿದಂಬರಂ ಹಾಗೂ ಸಂಸದೆ ಮೇನಕಾ ಗಾಂಧಿ ತಮ್ಮ ಹೇಳಿಕೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರಚಾರಕ್ಕಾಗಿಯೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಅನುಮಾನ ಇದರಿಂದ ಬರುತ್ತಿದೆ’ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡು, ಇಂತಹ ಅಮಾನವೀಯ ಪ್ರಕರಣಗಳನ್ನು ಶೀಘ್ರವಾಗಿ ನ್ಯಾಯಾಲಯಕ್ಕೆ ವರ್ಗಾಯಿಸಿ, ಗರಿಷ್ಠ ಶಿಕ್ಷೆ ಪ್ರಕಟವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ವೇದಿಕೆ ಪದಾಧಿಕಾರಿಗಳಾದ ನಾಲಾ ಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗುರುಬಸಪ್ಪ, ಗೋಪಿ, ಮಹದೇವಸ್ವಾಮಿ, ಬೀಡಾ ಬಾಬು, ಕಾವೇರಮ್ಮ, ಮಾಲಿನಿ, ಎಳನೀರು ಕುಮಾರ್, ಅರವಿಂದ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಟೋಲ್ ಶುಲ್ಕ; ಪ್ರತಿಭಟನೆ:

ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಶುಲ್ಕ ವಸೂಲಿಗೆ ಮುಂದಾಗಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಮೈಸೂರು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉಪ ವಿಭಾಗೀಯ ಕಚೇರಿ ಎದುರು ಜಮಾಯಿಸಿದ ವೇದಿಕೆ ಕಾರ್ಯಕರ್ತರು, ಅವೈಜ್ಞಾನಿಕ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್‍ಕುಮಾರ್ ಮಾತನಾಡಿ, ‘ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹೀಗಿರುವಾಗ ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್ ಶುಲ್ಕ ಸಂಗ್ರಹಿಸಲು ಮುಂದಾಗಿರುವುದು ಖಂಡನೀಯ’ ಎಂದು ಕಿಡಿಕಾರಿದರು.

‘ಈ ರಸ್ತೆಯ ಕಾಮಗಾರಿ ಕಳಪೆಯಾಗಿದೆ. ಬಹುತೇಕ ಕಡೆ ರಸ್ತೆ ಹಾಳಾಗಿದೆ. ನಂಜನಗೂಡಿನ ತಾಲ್ಲೂಕು ಕಚೇರಿ ಮುಂಭಾಗ, ಹುಲ್ಲಹಳ್ಳಿ ವೃತ್ತದ ಬಳಿ ಮತ್ತು ಕಡಕೊಳದಿಂದ ಮಂಡಕಳ್ಳಿವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಂಜನಗೂಡಿನ ಸೇತುವೆ ಮೇಲೆ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಪರ್ಯಾಯ ರಸ್ತೆ, ಸರ್ವೀಸ್ ರಸ್ತೆ ನಿರ್ಮಾಣವಾಗಿಲ್ಲ. ಇಷ್ಟೆಲ್ಲಾ ನ್ಯೂನತೆಗಳಿದ್ದರೂ; ಯಾವ ಮಾನದಂಡದ ಮೇಲೆ ಟೋಲ್ ಸಂಗ್ರಹಿಸಲು ಅನುಮತಿ ನೀಡಲಾಗಿದೆ’ ಎಂದು ಪ್ರಶ್ನಿಸಿದರು.

ಸಂಘಟನೆಯ ರಾಕೇಶ್ ಕುಮಾರ್, ರಕ್ಷಿತ್, ಲೋಕೇಶ್, ವೈಭವ್, ಪ್ರಸಾದ್, ಶ್ರೀನಿವಾಸ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪಿಂಚಣಿ ಏರಿಕೆಗಾಗಿ ನಿವೃತ್ತರ ಪ್ರತಿಭಟನೆ

ನಿವೃತ್ತ ನೌಕರರ ಪಿಂಚಣಿ ಏರಿಕೆ ಮಾಡುವಂತೆ ಆಗ್ರಹಿಸಿ ರಾಜ್ಯ ನಿವೃತ್ತ ನೌಕರರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.

ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶನಿವಾರ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡು ಬೇಡಿಕೆ ಈಡೇರಿಕೆಗಾಗಿ ವಿವಿಧ ಘೋಷಣೆ ಮೊಳಗಿಸಿದರು.

ರಾಷ್ಟ್ರದಾದ್ಯಂತ ಲಕ್ಷ, ಲಕ್ಷ ಸಂಖ್ಯೆಯ ನಿವೃತ್ತ ನೌಕರರು ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ಅನಾರೋಗ್ಯ ಪೀಡಿತರಾಗಿ ದಿನ ಕಳೆಯುತ್ತಿದ್ದಾರೆ. ಹಲ ವರ್ಷಗಳಿಂದಲೂ ಕೇಂದ್ರ ಸರ್ಕಾರಕ್ಕೆ ಕನಿಷ್ಠ ಜೀವನ ನಡೆಸುವಷ್ಟು ಪಿಂಚಣಿ ನೀಡಿ ಎಂದು ಒತ್ತಾಯಿಸುತ್ತಿದ್ದಾರೆ.

ಆದರೆ, ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ. ಇಪಿಎಫ್‍ನ 5 ಕೋಟಿ ಕಾರ್ಮಿಕರು ಪಿಎಫ್ ಫಂಡ್‍ಗೆ ಮಾಸಿಕ ಸಹಸ್ರಾರು ಕೋಟಿ ವಂತಿಗೆ ಕಟ್ಟುತ್ತಿದ್ದಾರೆ. ಭವಿಷ್ಯನಿಧಿಯಲ್ಲಿ ₹ 10 ಲಕ್ಷ ಕೋಟಿ ಹಣವಿದ್ದರೂ, ಪಿಂಚಣಿ ಏರಿಕೆ ಮಾಡುತ್ತಿಲ್ಲ ಎಂದು ಪ್ರತಿಭಟನಕಾರರು ಕಿಡಿಕಾರಿದರು.

ನಾವು ದುಡಿದ ನಮ್ಮ ಸಂಬಳದ ಹಣವನ್ನು ಕಡಿತಗೊಳಿಸಿದರೂ ಸಹ, ನಮಗೆ ಸರಿಯಾದ ಪಿಂಚಣಿ ನೀಡುತ್ತಿಲ್ಲ. ಕೇವಲ ₹ 500ರಿಂದ ₹ 3000ದವರೆಗೆ ಪಿಂಚಣಿ ನೀಡುತ್ತಿದ್ದಾರೆ. ಆದರೆ, ಇಂದಿನ ಬೆಲೆ ಏರಿಕೆಯಲ್ಲಿ ಇದು ಒಂದು ಹೊತ್ತಿನ ಊಟಕ್ಕೂ ಸಾಲುತ್ತಿಲ್ಲ. 60 ವರ್ಷ ಮೀರಿರುವ ಶೇ.90ರಷ್ಟು ಪಿಂಚಣಿದಾರರು ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಔಷಧೋಪಚಾರಗಳಿಗೂ ಪಿಂಚಣಿಯ ಈ ಹಣ ಸಾಲುವುದಿಲ್ಲ ಎಂದು ಅಳಲು ತೋಡಿಕೊಂಡರು.

ಕೇಂದ್ರ ಸರ್ಕಾರ ಕನಿಷ್ಠ ₹ 7500 ಪಿಂಚಣಿ ನೀಡಬೇಕು. ನಿವೃತ್ತ ನೌಕರರಿಗೂ ತುಟ್ಟಿ ಭತ್ಯೆ ನೀಡಬೇಕು. ಎಲ್ಲಾ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು. ಪತಿ ಅಥವಾ ಪತ್ನಿ ಮೃತರಾದರೆ ಈಗ ನೀಡುತ್ತಿರುವ ಶೇ.50ರಷ್ಟು ನಿವೃತ್ತಿ ವೇತನವನ್ನು ಶೇ.100ಕ್ಕೆ ಏರಿಸಬೇಕು. ಅವೈಜ್ಞಾನಿಕವಾಗಿ ಕಡಿತಗೊಳಿಸುತ್ತಿರುವ ಸಂಚಿತ ಪಿಂಚಿಣಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ಎಸ್.ಪಿ.ನಿಂಗೇಗೌಡ, ಪ್ರಧಾನ ಕಾಯದರ್ಶಿ ಆರ್.ಜಿ.ಮೋಹನ್‌ಕೃಷ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT