ಭಾನುವಾರ, ಜನವರಿ 19, 2020
29 °C
ಮಿಲಾದ್ ಬಾಗ್ ಮತ್ತು ಕಮಿಷನರ್ ಕಚೇರಿ ಮುಂದೆ ಆಕ್ರೋಶ

ನಿಷೇಧಾಜ್ಞೆಗೆ ಬಗ್ಗದ ಪ್ರತಿಭಟನಾಕಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪೌರತ್ವ ತಿದ್ದಪಡಿ ಕಾಯ್ದೆ ವಿರುದ್ಧ ನಡೆಯುವ ಪ್ರತಿಭಟನೆಗಳನ್ನು ನಿಷೇಧಿಸಿ, ಪೊಲೀಸರು ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗುರುವಾರ ಹಲವೆಡೆ ಪ್ರತಿಭಟನೆಗಳು ನಡೆದವು. ಎಲ್ಲ ಕಡೆ ಶಾಂತ ರೀತಿಯಿಂದಲೇ ವರ್ತಿಸಿದ ಪೊಲೀಸರು ಪ್ರತಿಭಟನಾನಿರತರ ಮನವೊಲಿಸುವಲ್ಲಿ ಸಫಲರಾದರು.

ಇಲ್ಲಿನ ಮಿಲಾದ್ ಬಾಗ್‌ನಲ್ಲಿ ಸೇರಿದ ಸುಮಾರು 500ಕ್ಕೂ ಹೆಚ್ಚಿನ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಂಜನಗೂಡು, ಗರ್ಗೇಶ್ವರಿ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿಭಟನಾನಿರತರನ್ನು ನಿಯಂತ್ರಿಸುವುದೇ ಪೊಲೀಸರಿಗೆ ದೊಡ್ಡ ಸವಾಲಾಯಿತು.

ಸುಮಾರು 2 ಗಂಟೆ ಕಳೆದರೂ ಪ್ರತಿಭಟನಾನಿರತರು ಕದಲದೇ ಇದ್ದುದ್ದನ್ನು ಗಮನಿಸಿದ ಡಿಸಿಪಿ ಪ್ರಕಾಶ್‌ಗೌಡ ಸ್ಥಳಕ್ಕೆ ಬಂದು ಮನವೊಲಿಸಲು ಯತ್ನಿಸಿದರು. ಇದಕ್ಕೆ ಪ್ರತಿರೋಧ ಒಡ್ಡಿದ ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ಸ್ಥಳಕ್ಕೆ ಬಂದ ಕರ್ನಾಟಕ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಎಲ್ಲರನ್ನೂ ಬಲವಂತವಾಗಿ ತೆರವುಗೊಳಿಸಲಾರಂಭಿಸಿದರು.

ಉದ್ಯಾನದಿಂದ ಹೊರಕ್ಕೆ ಬಂದವರ ಪೈಕಿ ಒಂದು ಗುಂಪು ಪ್ರತಿಭಟನಾ ರ‍್ಯಾಲಿ ನಡೆಸಲಾರಂಭಿಸಿತು. ಸೇಂಟ್ ಪಿಲೊಮಿನಾ ಚರ್ಚ್‌ ಬಳಿ ಪೊಲೀಸರು ರ‍್ಯಾಲಿಯನ್ನು ತಡೆದು, ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಮತ್ತೊಂದು ಗುಂಪು ಮಿಲಾದ್ ಬಾಗ್‌ನ ಸುತ್ತಮುತ್ತಲ ರಸ್ತೆಗಳಲ್ಲಿರುವ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲು ಆರಂಭಿಸಿತು. ಇದರಿಂದ ಕೆರಳಿದ ಪೊಲೀಸರು ಧ್ವನಿವರ್ಧಕದ ಮೂಲಕ ಬಂಧಿಸುವ ಎಚ್ಚರಿಕೆ ನೀಡಿದರು. ‘ಸ್ಥಳದಿಂದ ತೆರಳದೇ ಹೋದರೆ ಲಾಠಿಪ್ರಹಾರ ನಡೆಸದೇ ಬೇರೆ ವಿಧಿ ಇಲ್ಲ. ಪ್ರತಿಭಟನೆಗೆ ಅವಕಾಶ ನೀಡಿದ್ದಾಯಿತು, ಈಗ ಶಾಂತಿಭಂಗದಂತಹ ಕೃತ್ಯಕ್ಕೆ ಕೈ ಹಾಕಿದರೆ ಸುಮ್ಮನಿರುವುದಿಲ್ಲ’ ಎಂದು ಖಡಕ್ ಎಚ್ಚರಿಕೆ ನೀಡಿದರು. ನಂತರ, ಗುಂಪು ಚದುರಿತು.

ಪ್ರತಿಭಟನೆಯಿಂದ ಎರಡರಿಂದ ಮೂರು ಗಂಟೆಗಳಷ್ಟು ಕಾಲ ಸಂಚಾರ ದಟ್ಟಣೆ ಉಂಟಾಯಿತು. ಅಶೋಕ ರಸ್ತೆ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸವಾರರು ಪರದಾಡಿದರು.

ಪ್ರತಿಭಟನೆಗೆ ಈ ಮೊದಲು ಅನುಮತಿ ನೀಡಿದ್ದ ಪುರಭವನಕ್ಕೆ ಬಿಗಿ ಭದ್ರತೆ ಒದಗಿಸಲಾಗಿತ್ತು. ರಸ್ತೆಯಲ್ಲಿ ಸಂಚರಿಸುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದರು. ಮಾತ್ರವಲ್ಲ, ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸಿ ಕಳುಹಿಸುತ್ತಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು