ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡುತ್ತಿದ್ದ ಬೆಳೆಗೆ ಜೀವಕಳೆ ತುಂಬಿದ ಮಳೆ

ಕೊನೆ ದಿನ ಆರ್ಭಟಿಸಿದ ಆರಿದ್ರಾ; ಆರಂಭದಂದೇ ಪುನರ್ವಸು ಕೃಪೆ
Last Updated 7 ಜುಲೈ 2021, 7:22 IST
ಅಕ್ಷರ ಗಾತ್ರ

ಮೈಸೂರು: ವರುಣನ ಕೃಪೆಯಿಲ್ಲದೆ ಬಾಡುತ್ತಿದ್ದ ಮುಂಗಾರು ಹಂಗಾಮಿನ ಬೆಳೆಗೆ ಭಾನುವಾರ, ಸೋಮವಾರ ಸುರಿದ ಭಾರಿ ವರ್ಷಧಾರೆ ಜೀವಕಳೆ ತುಂಬಿದೆ.

ಬಿಸಿಲ ಝಳಕ್ಕೆ ಒಣಗಿ ಕೆಂಪಾಗುತ್ತಿದ್ದ ಬೆಳೆ, ಒಂದೇ ಒಂದು ಹದ ಮಳೆಗೆ ಮತ್ತೆ ಹಸಿರು ತುಂಬಿಕೊಳ್ಳುತ್ತಿದೆ. ಅಲಸಂದೆ, ಹತ್ತಿ, ತಂಬಾಕು, ಮುಸುಕಿನ ಜೋಳದ ಬೆಳೆಗೆ ಇದೀಗ ಸುರಿದ ವರ್ಷಧಾರೆ ವರವಾಗಿದೆ.

ಬಿರುಸಾದ ಮಳೆಗೆ ಕೆಲವೊಂದು ಕೆರೆ–ಕಟ್ಟೆ ತುಂಬಿ ಕೋಡಿ ಹರಿದಿವೆ. ಮಳೆಯಿಲ್ಲದಿದ್ದರಿಂದ ಕಂಗಾಲಾಗಿದ್ದ ಕೃಷಿಕರು ಇದೀಗ ಕೊಂಚ ನಿರಾಳರಾಗಿದ್ದಾರೆ.

ಅಂತರ್ಜಲ ಕೊರತೆಯಿಂದ ನೀರಿನ ಸೆಲೆ ಕಡಿಮೆಯಾಗಿದ್ದ ಕೊಳವೆಬಾವಿಗಳಲ್ಲಿ ಇದೀಗ ಎಂದಿನ ನೀರು ಬರುತ್ತಿದೆ. 15–20 ದಿನದಿಂದ ಸ್ಥಗಿತಗೊಂಡಿದ್ದ ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ.

ಪೂರ್ವ ಮುಂಗಾರಿನಲ್ಲಿ ಬಿತ್ತಿದ್ದ ಹೆಸರು, ಉದ್ದು, ಅಲಸಂದೆ ಫಸಲು ಪಡೆದ ರೈತರು; ಇದೀಗ ಬಿದ್ದ ಮಳೆಗೆ ಮತ್ತೆ ಅದೇ ಜಮೀನುಗಳಲ್ಲಿ ಉಳುಮೆ ನಡೆಸಿದ್ದಾರೆ. ರಾಗಿ ಬಿತ್ತಲು ಸಿದ್ಧತೆ ಕೈಗೊಂಡಿದ್ದಾರೆ.

‘ಆರಿದ್ರಾ ಮಳೆ ಆರಂಭದಿಂದಲೂ ಒಂದು ಹನಿ ಬಿದ್ದಿರಲಿಲ್ಲ. ಇದರಿಂದ ಕೃಷಿಕ ಸಮೂಹ ಕಂಗೆಟ್ಟಿತ್ತು. ಈ ವರ್ಷದ ಆರಂಭ ಕೈಕೊಟ್ಟಂತೆ ಎಂದೇ ಭಾವಿಸಿತ್ತು. ಕೊನೆಯ ದಿನ ಜಿಲ್ಲೆಯಾದ್ಯಂತ ಭರ್ಜರಿಯಾಗಿ ಸುರಿಯಿತು. ಪುನರ್ವಸು ಮಳೆ ಸಹ ಆರಂಭದ ದಿನವೇ ಬಿರುಸಾಗಿ ಸುರಿದಿದ್ದರಿಂದ ಬೇಸಾಯದ ಬದುಕು ಬಿರುಸುಗೊಂಡಿದೆ’ ಎನ್ನುತ್ತಾರೆ ಕೃಷಿಕ ಪರಮೇಶ್‌.

‘ಜಿಲ್ಲೆಯಾದ್ಯಂತ 15ರಿಂದ 20 ದಿನದ ಅವಧಿಯಲ್ಲಿ ಮಳೆಯಾಗಿರಲಿಲ್ಲ. ಬೆಳೆ ಬಾಡುತ್ತಿದ್ದವು. ಇದು ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಇದೀಗ ಸುರಿದ ಮಳೆ ಕೃಷಿ ಚಿತ್ರಣವನ್ನೇ ಬದಲಿಸಿದೆ’ ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಎಂ.ಮಹಾಂತೇಶಪ್ಪ.

‘ತಂಬಾಕಿನಲ್ಲಿ ಮಳೆ ಕೊರತೆಯಿಂದ ಕಾಣಿಸಿಕೊಂಡಿದ್ದ ರೋಗ ದೂರವಾಗಲಿದೆ. ಎಲೆಗಳು ಅಗಲವಾಗಿ ಬರಲಿವೆ. ಬೆಳವಣಿಗೆ, ಇಳುವರಿ ಹಿಂದಿನಂತೆಯೇ ಸಿಗಲಿದೆ. ಹೂವಿನ ಹಂತದಲ್ಲಿರುವ ಹಾಗೂ ಬೆಳವಣಿಗೆ ಹಂತದಲ್ಲಿರುವ ಮುಸುಕಿನ ಜೋಳದ ಬೆಳೆಗೂ ಈ ಮಳೆ ವರವಾಗಿದೆ’ ಎಂದು ಹುಣಸೂರು ಉಪ ವಿಭಾಗದ ಕೃಷಿ ಇಲಾಖೆಯ ಉಪ ನಿರ್ದೇಶಕ ಧನಂಜಯ್ ತಿಳಿಸಿದರು.

ಜಿಲ್ಲೆಯಲ್ಲಿ ಶೇ 52ರಷ್ಟು ಬಿತ್ತನೆ

ಹದಿನೈದು ದಿನದಿಂದ ಮಳೆಯಾಗದಿದ್ದಕ್ಕೆ ಮುಂಗಾರು ಹಂಗಾಮಿನ ಬಿತ್ತನೆಗೆ ಭಾರಿ ಹಿನ್ನಡೆಯಾಗಿತ್ತು. ಜುಲೈ 5ರವರೆಗೂ ಶೇ 52ರಷ್ಟು ಮಾತ್ರ ಬಿತ್ತನೆಯಾಗಿದೆ. ಭಾನುವಾರ, ಸೋಮವಾರ ಮಳೆ ಸುರಿದಿದೆ. ಬಾಡುತ್ತಿದ್ದ ಬೆಳೆಗೆ ಹಾಗೂ ರಾಗಿ ಬಿತ್ತನೆಗೆ ಇದು ಪೂರಕವಾಗಿದೆ. ಇನ್ಮುಂದೆ ಬಿತ್ತನೆ ಚಟುವಟಿಕೆ ಚುರುಕಾಗಲಿವೆ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಂಬಾಕು, ಮುಸುಕಿನ ಜೋಳ, ಅಲಸಂದೆ, ಜೋಳ, ಉದ್ದು, ಹೆಸರು, ಸೂರ್ಯಕಾಂತಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿವೆ. ಕೆಲವೊಂದು ಬೆಳೆ ಗುರಿ ಮೀರಿದ ಬಿತ್ತನೆಯೂ ಆಗಿವೆ. ಸಕಾಲಕ್ಕೆ ಮಳೆ ಸುರಿಯದಿದ್ದರಿಂದ ಹತ್ತಿಯ ಬಿತ್ತನೆಗೆ ಹಿನ್ನಡೆಯಾಗಿದೆ. ಎಳ್ಳಿನ ಬಿತ್ತನೆ ಸಹ ನಿಗದಿತ ಗುರಿ ತಲುಪಿಲ್ಲ ಎಂದು ತಾಂತ್ರಿಕ ಅಧಿಕಾರಿ ಗೌರಮ್ಮ ಅಗಸಿಬಾಗಿಲ ಮಾಹಿತಿ ನೀಡಿದರು.

ಶೇ 22ರಷ್ಟು ಮಳೆ ಕೊರತೆ

ಮೈಸೂರು ಜಿಲ್ಲೆಯಲ್ಲಿ ಜನವರಿಯಿಂದ ಜುಲೈ 5ರವರೆಗೂ 32 ಸೆಂ.ಮೀ ವಾಡಿಕೆ ಮಳೆ ಸುರಿಯಬೇಕಿದೆ. ಈ ಅವಧಿಯಲ್ಲಿ 25 ಸೆಂ.ಮೀ ವರ್ಷಧಾರೆಯಾಗಿದ್ದು, ಶೇ 22ರಷ್ಟು (7 ಸೆಂ.ಮೀ) ಮಳೆ ಕೊರತೆಯಾಗಿದೆ ಎಂಬುದನ್ನು ಕೃಷಿ ಇಲಾಖೆಯ ಅಂಕಿ–ಅಂಶಗಳು ಸ್ಪಷ್ಟಪಡಿಸಿವೆ.

ತಿ.ನರಸೀಪುರ ತಾಲ್ಲೂಕು ಹೊರತುಪಡಿಸಿ ಜಿಲ್ಲೆಯ ಇನ್ನುಳಿದ ತಾಲ್ಲೂಕುಗಳಲ್ಲಿ ಮಳೆ ಕೊರತೆಯಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 30.15 ಸೆಂ.ಮೀ ಮಳೆ ಸುರಿದಿತ್ತು.

ಗ್ರಾಫಿಕ್ಸ್‌ಗೆ...

ಮಳೆ ಕೊರತೆಯ ವಿವರ (ಸೆಂ.ಮೀ.ಗಳಲ್ಲಿ)

ತಿಂಗಳು;ವಾಡಿಕೆ ಮಳೆ;ಬಿದ್ದ ಮಳೆ;ಶೇಕಡಾವಾರು ಕೊರತೆ

ಏಪ್ರಿಲ್;6.19;3.59;45

ಮೇ;12.80;7.25;37.8

ಜೂನ್;9.12;6.33;31

*****

ತಾಲ್ಲೂಕು;ಮಳೆ ಕೊರತೆ;ಬಿತ್ತನೆ ಪ್ರಮಾಣ (ಶೇಕಡಾವಾರಿನಲ್ಲಿ ಜುಲೈ 5ರವರೆಗೂ)

ಎಚ್‌.ಡಿ.ಕೋಟೆ;23;73

ಹುಣಸೂರು;21;53

ಕೆ.ಆರ್.ನಗರ;22;37

ಮೈಸೂರು;17;43

ನಂಜನಗೂಡು;20;48

ಪಿರಿಯಾಪಟ್ಟಣ;18;69

ತಿ.ನರಸೀಪುರ;+2;22

ಒಟ್ಟು;22;52

ಆಧಾರ: ಜಿಲ್ಲಾ ಕೃಷಿ ಇಲಾಖೆ

****

ಅಂಕಿ–ಅಂಶ

3,95,774 ಹೆಕ್ಟೇರ್‌ನಲ್ಲಿ

ಮುಂಗಾರು ಬಿತ್ತನೆ ಗುರಿ

2,04,564 ಹೆಕ್ಟೇರ್‌ನಲ್ಲಿ‌

ಮುಂಗಾರು ಬಿತ್ತನೆ

ಮುಖ್ಯಾಂಶ

ಮಳೆಗೆ ತುಂಬಿದ ಕೆಲವು ಕೆರೆ–ಕಟ್ಟೆ

ವರ್ಷಧಾರೆಗೆ ರೈತ ಸಮೂಹ ಖುಷಿ

ತಿ.ನರಸೀಪುರ ತಾಲ್ಲೂಕಿನಲ್ಲಿ ಹೆಚ್ಚು ಮಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT