ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮನ್ನು ಬದುಕಲು ಬಿಡಿ’– ರೈತರ ಒಕ್ಕೊರಲ ದನಿ

ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಬಗೆಬಗೆ ಸಮಸ್ಯೆಗಳನ್ನು ತೆರೆದಿಟ್ಟ ರೈತ ಮುಖಂಡರು
Last Updated 15 ಜುಲೈ 2019, 19:39 IST
ಅಕ್ಷರ ಗಾತ್ರ

ಮೈಸೂರು: ‘ಒಂದು ಕಡೆ ಸಾಲ ಕೊಟ್ಟವರ ಕಿರುಕುಳ, ಇನ್ನೊಂದೆಡೆ ಭೀಕರವಾದ ಬರ, ಮತ್ತೊಂದೆಡೆ ಕಾಡುಪ್ರಾಣಿಗಳ ಹಾವಳಿ, ನ್ಯಾಯ ಕೇಳಿದರೆ ಪ್ರಕರಣಗಳನ್ನು ದಾಖಲಿಸುವುದು. ಇವುಗಳ ಮಧ್ಯೆ ಅನ್ನಕೊಡುವ ನಾವು ಬದುಕುವುದಾದರೂ ಹೇಗೆ? ಕೈ ಮುಗಿಯುತ್ತೇವೆ ನಮ್ಮನ್ನು ಬದುಕಲು ಬಿಡಿ’ ಎಂದು ನಂಜನಗೂಡು ತಾಲ್ಲೂಕಿನ ದೇವರಾಯಶೆಟ್ಟಿಪುರದ ರೈತ ಮಹದೇವಸ್ವಾಮಿ ಕೈಮುಗಿದರು.

ಇದಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರೈತರು ದನಿಗೂಡಿಸಿ, ಬೆಂಬಲ ವ್ಯಕ್ತಪಡಿಸಿದರು.

ಇಂತಹದ್ದೊಂದು ಸನ್ನಿವೇಶಕ್ಕೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರು ಸೋಮವಾರ ಕರೆದಿದ್ದ ಸಭೆಯಲ್ಲಿ ಕಂಡು ಬಂತು.

‘ಓಂಕಾರ ವಲಯದಲ್ಲಿ ರೈಲು ಹಳಿ ತಡೆಗೋಡೆಯನ್ನು ದಾಟಿ ಆನೆಗಳು ದಾಳಿ ಇಡುತ್ತಿವೆ. ಬರದ ಮಧ್ಯೆಯೂ ಬೆಳೆದ ಅಷ್ಟಿಷ್ಟು ಫಸಲನ್ನು ತಿಂದು ಹೋಗುತ್ತಿವೆ. ರಾತ್ರಿ ಹೊಲಕ್ಕೆ ಹೋದರೆ ಮರಳಿ ಬರುತ್ತೇವೆ ಎಂಬ ಗ್ಯಾರಂಟಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಆನೆ ಸತ್ತರೆ ರೈತ ಜೈಲಿಗೆ. ಇಲ್ಲವೇ ಅವನು ಇಡೀ ಊರನ್ನೇ ಬಿಡಬೇಕು. ಅದೇ ಆನೆಯಿಂದ ರೈತರ ಸತ್ತರೆ ಆನೆಗೇನು ಮಾಡುತ್ತೀರಿ. ನಿಮ್ಮ ಆನೆಯನ್ನು ಸರಿಯಾಗಿ ನೋಡಿಕೊಳ್ಳಲು ಆಗುವುದಿಲ್ಲವೇ’ ಎಂದು ಶಿರಮಹಳ್ಳಿ ರೈತ ಸಿದ್ದಪ್ಪ ಪ್ರಶ್ನಿಸಿದರು.

ಚಿರತೆ ಸೆರೆಗೆ ಬೋನು ಇಟ್ಟು, ಅದನ್ನು ಕಾಯಿರಿ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಾರೆ. ರೈತ ತನ್ನ ಕೆಲಸ ಬಿಟ್ಟು, ಜೀವವನ್ನು ಕೈಲಿಡಿದು ಬೋನನ್ನು ಕಾಯಬೇಕೇ ಎಂದು ರೈತರೊಬ್ಬರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ರಕ್ಷಿತಾರಣ್ಯದ ನಿರ್ದೇಶಕ ಬಾಲಚಂದ್ರ, ‘ರೈಲು ಹಳಿ ತಡೆಗೋಡೆಯಲ್ಲಿ ಕೆಲವೊಂದು ಕಡೆ ದಿಣ್ಣೆಗಳಿರುವ ಕಡೆ ಆನೆಗಳು ನುಸುಳುತ್ತವೆ. ಇವುಗಳನ್ನು ಸರಿಪಡಿಸಲಾಗುವುದು. ಅಪೂರ್ಣಗೊಂಡಿರುವ ಭಾಗಗಳಲ್ಲಿ ಈ ವರ್ಷ ರೈಲು ಹಳಿ ತಡಗೋಡೆ ಹಾಗೂ ಕಂದಕಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT