ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಜಾನ್‌: ಪುಣ್ಯ ಗಳಿಕೆಯ ಮಾಸ, ಉಪವಾಸ ಆಚರಣೆ- ವಿಶೇಷ ನಮಾಜ್‌

ನಗರದ ಮಸೀದಿಗಳಲ್ಲಿ ಭಕ್ತರ ದಂಡು
Last Updated 17 ಏಪ್ರಿಲ್ 2022, 2:17 IST
ಅಕ್ಷರ ಗಾತ್ರ

ಮೈಸೂರು: ಉಪವಾಸ, ಪ್ರಾರ್ಥನೆ, ವಿಶೇಷ ನಮಾಜ್‌ಗೆ ಒತ್ತು ನೀಡುವ ರಂಜಾನ್‌ ಮಾಸ ಅರ್ಧ ಹಾದಿ ಕ್ರಮಿಸಿದ್ದು, ಮುಸ್ಲಿಮರು ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇಸ್ಲಾಮೀ ಕ್ಯಾಲೆಂಡರಿನ 9ನೇ ತಿಂಗಳು ರಂಜಾನ್‌ ಆಗಿದ್ದು, ಈ ಬಾರಿ ಏಪ್ರಿಲ್‌ 3 ರಿಂದ ಆರಂಭವಾಗಿದೆ. ರಂಜಾನ್‌ ತಿಂಗಳಿಡೀ ಮುಸ್ಲಿಮರು ಉಪವಾಸ ಆಚರಿಸುವರು. ಈ ಮಾಸ ಮುಸ್ಲಿಮರ ದಿನಚರಿಯನ್ನೇ ಬದಲಿಸಿಬಿಡುತ್ತದೆ.

ಸೂರ್ಯೋದಯಕ್ಕೆ ಮುನ್ನ ಆಹಾರಸೇವನೆ (ಸಹ್ರಿ) ಮಾಡಿ ಸೂರ್ಯಾಸ್ತದವರೆಗೆ ಅನ್ನ, ನೀರು ಹಾಗೂ ಎಲ್ಲ ರೀತಿಯ ಸುಖಗಳನ್ನು ತ್ಯಜಿಸುವುದು ಇಸ್ಲಾಮಿನ ಉಪವಾಸದ ವಿಧಾನ. ಇಫ್ತಾರ್‌ನೊಂದಿಗೆ ಉಪವಾಸ ಕೊನೆಗೊಳ್ಳುತ್ತದೆ.

ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಕರಿನೆರಳಿನಲ್ಲೇ ರಂಜಾನ್‌ ಬಂದಿತ್ತು. ಈ ಬಾರಿ ಕೊರೊನಾ ಆತಂಕ ಇಲ್ಲದೇ ಇರುವುದರಿಂದ ನೆಮ್ಮದಿಯಿಂದ ಆರಾಧನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ದೊರೆತಿದೆ.

ದೇವನ ಪ್ರೀತಿ ಗಳಿಸುವ ಗುರಿ: ಇಸ್ಲಾಮಿನಲ್ಲಿ ಉಪವಾಸ ವ್ರತ ಎಂದರೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಬಯಕೆಯೊಂದಿಗೆ ಆಹಾರ, ಪಾನೀಯ ಸೇವನೆ ತ್ಯಜಿಸುವುದು ಮತ್ತು ಎಲ್ಲ ರೀತಿಯ ಮನರಂಜನೆಗಳಿಂದ ದೂರವಿರುವುದು ಎಂದು ಅರ್ಥ.

ಉಪವಾಸ ಆಚರಣೆಯ ಮತ್ತೊಂದು ಉದ್ದೇಶ ಬಡವರ ಹಸಿವನ್ನು ಅರಿಯುವುದು. ನಿತ್ಯ ಮೂರು ಹೊತ್ತು ತಿಂದರೆ ಹಸಿವಿನ ಅನುಭವ ಆಗದು. ಉಪವಾಸ ಆಚರಿಸಿದರೆ ಹಸಿದವನ ಕಷ್ಟವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ದೇಹಕ್ಕೆ ಹೆಚ್ಚಿನ ಶ್ರಮ ನೀಡುವ ಕೆಲಸ ಮಾಡುವವರೂ ಉಪವಾಸ ಆಚರಿಸುವರು.

ಗಂಭೀರ ಕಾಯಿಲೆ, ಅನಾರೋಗ್ಯ ದಿಂದ ಬಳಲುತ್ತಿರುವವರು, ದೂರದ ಊರಿಗೆ ಪ್ರಯಾಣಿಸುವವರು, ಗರ್ಭಿಣಿಯರು, ಬಾಣಂತಿಯರಿಗೆ ಉಪವಾಸದಿಂದ ವಿನಾಯಿತಿ ಇದೆ. ಚಿಕ್ಕಮಕ್ಕಳು, ವಯೋವೃದ್ಧರು ಉಪವಾಸ ಆಚರಿಸಬೇಕಿಲ್ಲ.

‘ತರಾವೀಹ್‌’ ನಮಾಜ್: ಐದು ಹೊತ್ತಿನ ನಮಾಜ್‌ ಅಲ್ಲದೆ, ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ನಿರ್ವಹಿಸಲಾಗುತ್ತದೆ. ಅದಕ್ಕೆ ‘ತರಾವೀಹ್‌’ ಎನ್ನುವರು. ಈ ತಿಂಗಳಲ್ಲಿ ದಾನ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ.

‘ರಂಜಾನ್‌ ಅವಧಿಯಲ್ಲಿ ನಮಾಜ್‌, ಪ್ರಾರ್ಥನೆಗೆ ಮಹತ್ವ ಕಲ್ಪಿಸಲಾಗುತ್ತದೆ. ಕಳೆದ ಎರಡು ವರ್ಷ ಕೋವಿಡ್‌ ಕಾರಣ ಮಸೀದಿಗಳಲ್ಲಿ ನಮಾಜ್‌ಗೆ ಅವಕಾಶ ಇರಲಿಲ್ಲ. ಇದರಿಂದ ಏನನ್ನೋ ಕಳೆದುಕೊಂಡಿದ್ದೇವೆ ಎಂಬ ಭಾವ ಉಂಟಾಗುತ್ತಿತ್ತು. ಲಾಕ್‌ಡೌನ್‌ ನಡುವೆಯೇ ರಂಜಾನ್‌ ಬಂದಿತ್ತು. ಈ ಬಾರಿ ನೆಮ್ಮದಿಯಿಂದ ಉಪವಾಸ ಆಚರಣೆ ಸಾಧ್ಯವಾಗಿದೆ’ ಎಂದು ಸಿದ್ದೀಕ್‌ ನಗರದ ನಿವಾಸಿ ಅಜ್ಮಲ್‌ ಹೇಳಿದರು.

‘ದೇವನ ಪ್ರೀತಿ ಗಳಿಸಲು ಕೆಲವೊಂದು ತ್ಯಾಗಗಳನ್ನು ಮಾಡಬೇಕಾಗುತ್ತದೆ. ರಂಜಾನ್‌ ತಿಂಗಳು ಪುಣ್ಯ ಸಂಪಾದಿಸುವ ಮಾಸ. ದೈನಂದಿನ ಕೆಲಸಗಳ ನಡುವೆ ಪ್ರಾರ್ಥನೆಗೂ ಸಮಯ ಕಂಡುಕೊಳ್ಳುತ್ತೇವೆ’ ಎನ್ನುವರು.

ಈಗಾಗಲೇ 14 ಉಪವಾಸಗಳು ಕೊನೆಗೊಂಡಿವೆ. ಇನ್ನುಳಿದ 16 ದಿನಗಳಲ್ಲಿ ಇನ್ನಷ್ಟು ನಮಾಜ್‌, ಪ್ರಾರ್ಥನೆ, ಕುರಾನ್‌ ಪಠಣ, ದಾನಧರ್ಮಗಳನ್ನು ಮಾಡಿ ಪುಣ್ಯ ಗಳಿಸುವತ್ತ ಮುಸ್ಲಿಮರು ಚಿತ್ತ ನೆಟ್ಟಿದ್ದಾರೆ.

ಸೌಹಾರ್ದ ಮೆರೆಯುವ ಇಫ್ತಾರ್ ಕೂಟ: ರಂಜಾನ್‌ ತಿಂಗಳಲ್ಲಿ ಇಫ್ತಾರ್‌ ಕೂಟಗಳನ್ನು ಆಯೋಜಿಸಲಾಗುತ್ತದೆ. ಬಹುತೇಕ ಮಸೀದಿಗಳಲ್ಲಿ 30 ದಿನವೂ ಇಫ್ತಾರ್ ಕೂಟಗಳು ಇರುತ್ತವೆ. ಮಸೀದಿ ಕಮಿಟಿಯವರು ದಾನಿಗಳ ನೆರವಿನಿಂದ ಇದನ್ನು ಅಯೋಜಿಸುವರು.

ಇದರ ಜತೆಯಲ್ಲೇ ಕೆಲವು ಸಂಘ ಸಂಸ್ಥೆಗಳು ಸಮಾಜದಲ್ಲಿ ಸೌಹಾರ್ದ ಭಾವ ಮೂಡಿಸಲು ಇಫ್ತಾರ್‌ ಕೂಟಗಳಿಗೆ ಇತರ ಧರ್ಮೀಯರನ್ನೂ ಆಹ್ವಾನಿಸುವರು. ಮೈಸೂರಿನ ಹಲವೆಡೆ ಸೌಹಾರ್ದ ಇಫ್ತಾರ್‌ ಕೂಟಗಳು ನಡೆಯುತ್ತವೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿವರ್ಷವೂ ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳುವರು. ಪ್ರೆಸ್ಟೀಜ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಭಾನುವಾರ (ಏ.17) ನಡೆಯಲಿರುವ ಕೂಟದಲ್ಲಿ ಅವರು ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT