ಗುರುವಾರ , ಜನವರಿ 28, 2021
15 °C
ವಿವೇಕಾನಂದರ ಜನ್ಮದಿನಾಚರಣೆ * ಸ್ವಾಮಿ ಶಾಂತಿವ್ರತಾನಂದಜಿ ಅಭಿಮತ

ಶಿಸ್ತಿನ ಜೀವನದಿಂದ ಸಾಧನೆ: ಶಾಂತಿವ್ರತಾನಂದಜಿ ಮಹಾರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶಿಸ್ತುಬದ್ಧ ಜೀವನವನ್ನು ರೂಢಿಸಿಕೊಂಡರೆ ಏನು ಬೇಕಾದರೂ ಸಾಧಿಸಬಹುದು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜಿ ಮಹಾರಾಜ್‌ ಹೇಳಿದರು.

ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ’ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸ್ವಾತಂತ್ರ್ಯ ಎನ್ನುವುದು ಜವಾಬ್ದಾರಿ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ನಿಮ್ಮ ಜೀವನಕ್ಕೆ, ಕನಸು– ಆಶೋತ್ತರಗಳಿಗೆ ಜವಾಬ್ದಾರರಾಗಿದ್ದೀರಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು. ಇತರರಿಗಾಗಿ ಬದುಕುವುದರಿಂದ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.

ಪಶ್ಚಿಮ ಬಂಗಾಳದಲ್ಲಿ ಬಾಲಕ ಬಾಬರ್‌ ಅಲೀ ಎಂಬಾತ ವಿವೇಕಾನಂದರ ತತ್ವಗಳಿಂದ ಸ್ಫೂರ್ತಿಗೊಂಡು ಮೇಲ್ಸೇತುವೆ ಕೆಳಗೆ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದ. ಆತ ಇಂದು ಸ್ನಾತಕೋತ್ತರ ಪದವಿ ಓದುತ್ತಿದ್ದು, ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾನೆ. 800–900 ಮಕ್ಕಳಿಗೆ ಶಿಕ್ಷಣ ಕೊಡಿಸಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಎಸ್‌.ಮಂಜುನಾಥಸ್ವಾಮಿ ಮಾತನಾಡಿ, ‘ವ್ಯಕ್ತಿ ಶಕ್ತಿಯಾಗಿ ಬೆಳೆದು ದೇವರ ಸ್ಥಾನಕ್ಕೆ ತಲುಪಿದವರು ವಿವೇಕಾನಂದರು. ಅವರು ಯುವಕರನ್ನು ಬರೀ ಎಬ್ಬಿಸಲಿಲ್ಲ, ಚಿಂತಿಸುವಂತೆ ಮಾಡಿದ್ದರು. ವೇದ–ಉಪನಿಷತ್‌ಗಳ ಮಹತ್ವವನ್ನು ಎತ್ತಿಹಿಡಿಯುತ್ತಲೇ ಅದರಲ್ಲಿನ ವೈರುಧ್ಯದ ಬಗೆಗೂ ಬೆಳಕು ಚೆಲ್ಲುವಂತೆ ಮಾಡಿದ್ದರು’ ಎಂದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಪಿ.ಸದಾಶಿವ ಮಾತನಾಡಿ, ‘ಭಾರತದ ಮಣ್ಣಿನಲ್ಲಿ ಆಧ್ಯಾತ್ಮಿಕ ಶಕ್ತಿ ಉತ್ತುಂಗದಲ್ಲಿದೆ. ಯುವಕರು ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಬಡವರು, ನಿರ್ಗತಿಕರು, ಅಸಹಾಯಕರಿಗೆ ಕೈಲಾದ ಸಹಾಯ ಮಾಡಬೇಕು. ಹಳ್ಳಿಗಳಲ್ಲಿ ಮೂಲಸೌಕರ್ಯ ಒದಗಿಸಲು ಶ್ರಮಿಸಬೇಕು’ ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಓಂಪ್ರಕಾಶ್‌, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್‌.ಜಯಕುಮಾರಿ, ಡಿಎಸಿವೈಪಿ ಸದಸ್ಯ ಎನ್‌.ಸಂತೋಷ್‌, ರಾಷ್ಟ್ರೀಯ ಸೇವಾ ಯೋಜನೆ ಘಟಕ–1ರ ಡಾ.ಎ.ಜಿ.ಧರ್ಮೇಶ್‌, ಘಟಕ–2ರ ಡಾ.ಜಿ.ದೊಡರಸಯ್ಯ ಇದ್ದರು.

‘712 ಜಿಲ್ಲೆಗಳಲ್ಲಿ ಯುವ ದಿನ ಆಚರಣೆ’
ದೇಶದಲ್ಲಿ 712 ಜಿಲ್ಲೆಗಳಲ್ಲಿ ನೆಹರು ಯುವ ಕೇಂದ್ರಗಳಿದ್ದು, ಎಲ್ಲೆಡೆ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತಿದೆ. ಯುವ ಜನರನ್ನು ಒಟ್ಟಿಗೆ ಕೊಂಡೊಯ್ಯಬೇಕು ಎಂಬ ವಿಚಾರ ವಿವೇಕಾನಂದರಲ್ಲಿತ್ತು. ಯುವಜನರು ಬದುಕನ್ನು ಅರ್ಥಪೂರ್ಣವಾಗಿ ನಿಭಾಯಿಸುವುದನ್ನು ಕಲಿಯಬೇಕು. ಜಗತ್ತಿನ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಸ್‌.ಸಿದ್ದರಾಮಪ್ಪ ಸಲಹೆ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು