ಬುಧವಾರ, ಅಕ್ಟೋಬರ್ 5, 2022
28 °C
ದುರಸ್ತಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳು

ಮೈಸೂರು: ಪ್ರತಿಷ್ಠಿತ ಬಡಾವಣೆಗಳೂ ಗುಂಡಿಮಯ!

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಯಾವುದೇ ನಗರದಲ್ಲಿ ಉತ್ತಮ ರಸ್ತೆಯು ಕನಿಷ್ಠ ಮೂಲಸೌಲಭ್ಯಗಳಲ್ಲಿ ಒಂದು. ಆದರೆ, ದಸರೆಗೆ ಸಜ್ಜಾಗುತ್ತಿರುವ ಸಾಂಸ್ಕೃತಿಕ ನಗರಿಯ ಪ್ರತಿಷ್ಠಿತ ಬಡಾವಣೆಗಳಲ್ಲೂ ರಸ್ತೆಗಳು ಸೊರಗಿವೆ. ಅಲ್ಲಲ್ಲಿ ಗುಂಡಿಗಳಲ್ಲಿಯೇ ಮುಳುಗಿ‌ ಹೋಗಿವೆಯೇನೋ ಎಂಬ ಭಾವನೆ ಬರುವಂತೆ ದುಃಸ್ಥಿತಿ ಇದೆ.

ಕುವೆಂಪುನಗರ, ಸಿದ್ದಾರ್ಥನಗರ, ರಾಮಕೃಷ್ಣ ನಗರ, ನಜರ್‌ಬಾದ್, ಸುಣ್ಣದಕೇರಿ, ಅಗ್ರಹಾರ, ಅರವಿಂದ ನಗರ, ವಿನಾಯಕ ನಗರ, ಗೋಕುಲಂ, ಮೇಟಗಳ್ಳಿ, ಬನ್ನಿಮಂಟಪ,‌ ಉದಯಗಿರಿ, ಯಾದವಗಿರಿ, ಬೃಂದಾವನ ಬಡಾವಣೆ, ವಿದ್ಯಾರಣ್ಯಪುರಂ, ಚಾಮುಂಡಿಪುರಂ, ಗೋಕುಲಂ,‌ ವಿಜಯನಗರ, ಜಯನಗರ, ಜೆ.ಪಿ.ನಗರ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಜನರು‌ ಸುಗಮ ಸಂಚಾರಕ್ಕಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಬಸ್‌ ನಿಲ್ದಾಣದ ಸುತ್ತಮುತ್ತಲಿನ ರಸ್ತೆಗಳೂ ಹಾಳಾಗಿವೆ. ರೈಲು ನಿಲ್ದಾಣದ ಎದುರಿನ ರಸ್ತೆಗಳಲ್ಲೂ ಗುಂಡಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿವೆ. ಅಪಘಾತ–ಅನಾಹುತಗಳಿಗೂ ಆಹ್ವಾನ ನೀಡುತ್ತಿವೆ!

ಮೇಯರ್‌, ಉಪಮೇಯರ್‌ ವಾರ್ಡ್‌ನಲ್ಲೂ!: ಮೇಯರ್ ಶಿವಕುಮಾರ್‌ ಪ್ರತಿನಿಧಿಸುವ ಕುವೆಂಪುನಗರ ಮತ್ತು ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್ ಪ್ರತಿನಿಧಿಸುವ ವಾರ್ಡ್‌ನ ಪ್ರದೇಶಗಳಾದ ಕುವೆಂಪುನಗರ ಮತ್ತು ಸಿದ್ದಾರ್ಥ ನಗರದಲ್ಲೂ (ಭಾಗಶಃ) ರಸ್ತೆಗಳು ಗುಂಡಿಮಯವಾಗಿವೆ. ಸುಗಮ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಿದ್ದಾರ್ಥ ನಗರದ ಬಹುತೇಕ ರಸ್ತೆಗಳು ಬಹಳ ದುಃಸ್ಥಿತಿಯಲ್ಲಿವೆ. ಆದರೆ, ದುರಸ್ತಿಗೆ ಈವರೆಗೂ ಕ್ರಮವಾಗಿಲ್ಲ.

‘ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಿಗೆ ಅನುದಾನ ಮಂಜೂರಾಗಿದ್ದು, ಕಾಮಗಾರಿ ಆರಂಭವಾಗಿದೆ’ ಎನ್ನುತ್ತಾರೆ ಮೇಯರ್‌ ಶಿವಕುಮಾರ್‌. ಆದರೆ, ವಾಸ್ತವವಾಗಿ ದುರಸ್ತಿ ಕಾಮಗಾರಿ ಚುರುಕು ಪಡೆದುಕೊಂಡೇ ಇಲ್ಲ. ಶಾಸ್ತ್ರಕ್ಕೆ ಎನ್ನುವಂತೆ ಒಂದೆರಡು ಕಡೆಗಳಲ್ಲಿ ಕೆಲಸವಾಗಿರುವುದು ಬಿಟ್ಟರೆ ಉಳಿದೆಡೆ ಯಾವುದೇ ಕಾಮಗಾರಿ ನಡೆದಿಲ್ಲ. ಗುಂಡಿಗಳಿಗೆ ‘ಮುಕ್ತಿ’ ದೊರೆತಿಲ್ಲ. ರಸ್ತೆಗಳು ದುಃಸ್ಥಿತಿಯಲ್ಲಿರುವುದು ಆ ಭಾಗದಲ್ಲಿ ಒಮ್ಮೆ ಸಂಚರಿಸಿದಾಗ ಕಂಡುಬಂತು.

ವಿದ್ಯಾರಣ್ಯಪುರಂನಲ್ಲಿ ಗುಂಡಿಗಳಿಗಿಲ್ಲ ಮುಕ್ತಿ: ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿರುವ ‌ವಿದ್ಯಾರಣ್ಯಪುರಂ, ಚಾಮುಂಡಿಪುರಂ, ರಾಮಾನುಜ ರಸ್ತೆಗಳು ಬಹಳ ಹಾಳಾಗಿವೆ. ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳು ದುಃಸ್ಥಿತಿಯಲ್ಲಿವೆ! ಅದರ ಸಮೀಪದಲ್ಲೇ ‘ಮೋದಿ ಯುಗ ಉತ್ಸವ’ ನಡೆಸಲಾಗುತ್ತಿದೆ. ವಿದ್ಯಾರಣ್ಯಪುರಂ ಕಡೆಯಿಂದ ಎಲೆತೋಟದ ಕಡೆಗೆ ಹೋಗುವ ರಸ್ತೆಯಂತೂ ಗುಂಡಿಮಯವಾಗಿದೆ. ಈ ರಸ್ತೆಯಲ್ಲಿ ನಿತ್ಯವೂ ನೂರಾರು ಮಂದಿ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ಸಂಬಂಧಿಸಿದವರು ದುರಸ್ತಿಗೆ ಕ್ರಮ ಕೈಗೊಂಡಿಲ್ಲದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಂಜನಗೂಡು ರಸ್ತೆಯೂ ಹಾಳು...

ಮೈಸೂರು- ನಂಜನಗೂಡು ಹೆದ್ದಾರಿಯೂ ಅಲ್ಲಲ್ಲಿ ಹಾಳಾಗಿದೆ.

ಈ ರಸ್ತೆಯಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಟೋಲ್ ಕೂಡ ಪಡೆಯಲಾಗುತ್ತದೆ. ಆದರೆ, ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬಳಕೆದಾರರಿಗೆ ಅನುಕೂಲ ಕಲ್ಪಿಸುವ ಕೆಲಸವಾಗಿಲ್ಲ. ಇದು ಆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಷಯವಾಗಿ ರಘು ಎನ್ನುವವರು ಸಚಿವರು, ಹೆದ್ದಾರಿ ಪ್ರಾಧಿಕಾರ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಸೆಳೆದಿದ್ದಾರೆ. ಸರಣಿ ಟ್ವೀಟ್‌ಗಳ ಮೂಲಕ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತಂದಿದ್ದಾರೆ. ಆದರೆ, ಅದರಿಂದ ಯಾವುದೇ ಸ್ಪಂದನೆ ದೊರೆತಿಲ್ಲ!

ಇದರಿಂದ ಬೇಸರಗೊಂಡ ಅವರು,‌ 1,033 ಸಹಾಯವಾಣಿಗೂ‌ ಕರೆ ಮಾಡಿ ದೂರಿತ್ತಿದ್ದಾರೆ. ಈ ರೀತಿ ಹಾಳಾಗಿರುವ ರಸ್ತೆಯಲ್ಲಿ ಸಂಚರಿಸುವುದಕ್ಕೂ ಯಾಕೆ ಟೋಲ್ (ಸುಂಕ) ಕಟ್ಟಬೇಕು ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಸಿಬ್ಬಂದಿಯು, ‘ಟೋಲ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಸುಂಕ ಕಟ್ಟಿಯೇ ರಸ್ತೆಯನ್ನು ಬಳಸಬೇಕಾಗುತ್ತದೆ. ರಸ್ತೆ ಇಲ್ಲದಿದ್ದರೂ ಕೂಡ ಸುಂಕ ತೆರಲೇಬೇಕು’ ಎಂದು ತಿಳಿಸಿದ್ದಾರೆ! ಇದು ಖಂಡನೀಯವಲ್ಲವೇ? ಎಂದು ದೂರುದಾರ ರಘ ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಬಳಕೆದಾರರಿಂದ ಸುಂಕ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯನ್ನೂ ಕೂಡಲೇ ದುರಸ್ತಿಪಡಿಸಬೇಕು’ ಎಂದು ಒತ್ತಾಯಿಸಿದರು.

*

ದುರಸ್ತಿಗೆ ಕ್ರಮವಾಗಲಿ
ಸಿದ್ದಾರ್ಥ ನಗರದ ಮುಖ್ಯ ರಸ್ತೆಯಾದ ವಿನಯ ಮಾರ್ಗದ ರಸ್ತೆಯು ಬಹಳ ಹಾಳಾಗಿದೆ. ಸಂಚಾರಕ್ಕೆ ಯೋಗ್ಯವಾಗಿಲ್ಲ. ಸಂಬಂಧಿಸಿದವರು ಇತ್ತ ಗಮನಹರಿಸಿ ದುರಸ್ತಿಗೆ ಕ್ರಮ ಕೈಗೊಳ್ಳಬೇಕು.
–ಎಸ್.ರವಿಕುಮಾರ್, ನಿವಾಸಿ

*

ಡಾಂಬರೀಕರಣವಾಗಿಲ್ಲ
ರಾಮಕೃಷ್ಣ ನಗರದ ಚರ್ಚ್ ಹಿಂಭಾಗದ ‘ಇ’ ಆಂಡ್ ‘ಎಫ್’ ಬ್ಲಾಕ್ ನ 1, 2 ಮತ್ತು 3ನೇ ಕ್ರಾಸ್‌ನಲ್ಲಿ ಒಳಚರಂಡಿ ಕಾಮಗಾರಿ ಮುಗಿದು ಮೂರು ತಿಂಗಳಾದರೂ ಡಾಂಬರೀಕರಣವಾಗಿಲ್ಲ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ.
–ಮಧುಕೇಶ್ ಹಿರೇಮಠ, ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು