ಶುಕ್ರವಾರ, ಮೇ 20, 2022
23 °C
ಚಾಲನೆ ನೀಡಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌

ಗೆಡ್ಡೆ–ಗೆಣಸು ಮೇಳ| ಬಗೆ ಬಗೆ ಆಕಾರ, ಗೆಡ್ಡೆಗಳ ಅಲಂಕಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕಾರ್ಯಕ್ರಮದ ವೇದಿಕೆ ತುಂಬ ವಿಧವಿಧ ಆಕಾರದ ಗೆಡ್ಡೆಗಳ ಅಲಂಕಾರ. ಸಭಾಂಗಣದಲ್ಲೂ ವಿವಿಧೆಡೆಯ ಗೆಡ್ಡೆ ಗೆಣಸುಗಳ ಅನಾವರಣ. ನೆಲ ಮೂಲದ ಉತ್ಪನ್ನಗಳೂ ಅಲ್ಲಿದ್ದವು. ಗೆಡ್ಡೆ, ಗೆಣಸು, ಹಲಸಿನ ತಿನಿಸುಗಳೂ ಪ್ರದರ್ಶನಗೊಂಡು ಮಾರಾಟವಾದವು...

ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗವು ರೋಟರಿ ಕ್ಲಬ್‌ ಪಶ್ಚಿಮ ವಲಯದ ಆಶ್ರಯದಲ್ಲಿ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಎರಡು ದಿನ ಹಮ್ಮಿಕೊಂಡಿರುವ ಗೆಡ್ಡೆ ಗೆಣಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಕಂಡ ಚಿತ್ರಣವಿದು.

ವಿವಿಧ ಬಗೆಯ ಗೆಡ್ಡೆ–ಗೆಣಸುಗಳ ಮೌಲ್ಯವರ್ಧಿತ ಉತ್ಪನ್ನಗಳು ಸುಮಾರು 20 ಮಳಿಗೆಗಳಲ್ಲಿ ಇವೆ. ಮಾವು ಶುಂಠಿ, ಶುಂಠಿ, ಅರಿಸಿಣ, ಕೂವೆ ಗೆಡ್ಡೆ, ಮರಗೆಣಸು, ಸಿಹಿ ಗೆಣಸು, ಸುವರ್ಣ ಗೆಡ್ಡೆ, ಕೆಸುವಿನ ಗೆಡ್ಡೆಗಳೂ ಮಳಿಗೆಯಲ್ಲಿವೆ. ವಿವಿಧ ಬಗೆಯ ತರಕಾರಿ ಬೀಜಗಳನ್ನೂ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

ಸಾಂಪ್ರದಾಯಿಕವಾಗಿ ತಯಾರಿಸಲಾದ ವಿವಿಧ ಬಗೆಯ ಖಾದ್ಯ ತೈಲಗಳು, ಬೆಲ್ಲ, ತರಕಾರಿಗಳು, ಹಲಸು, ಬಾಳೆಕಾಯಿಯ ಮೌಲ್ಯವರ್ಧಿತ ತಿನಿಸಿಗಳೂ ವಿಶೇಷ ಆಕರ್ಷಣೆಯಾಗಿವೆ.

ಗೆಡ್ಡೆ ಗೆಣಸು ನಿಸರ್ಗದ ಸಂಪತ್ತು: ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ನಾಗರೀಕತೆಗೂ ಮುನ್ನವೇ ಗೆಡ್ಡೆ ಗೆಣಸುಗಳೇ ಜನರ ಆಹಾರವಾಗಿತ್ತು. ಪರಿಸರದೊಂದಿಗೇ ಬೆಳೆದ ಗೆಡ್ಡೆಗಳು ನಿಸರ್ಗದ ಸಂಪತ್ತಾಗಿವೆ ಎಂದರು.

ಗೆಡ್ಡೆ ಗೆಣಸುಗಳಿಗೆ ನೀರು, ಆರೈಕೆ ಕಡಿಮೆ ಸಾಕಾಗುತ್ತದೆ. ಇವುಗಳು ಮಾಲಿನ್ಯ ನಿಯಂತ್ರಿಸುವ ಬೆಳೆಯೂ ಆಗಿದ್ದು, ಎಲ್ಲರೂ ಉಪಯೋಗಿಸಿಕೊಳ್ಳಬೇಕು. ಆರೋಗ್ಯ ವರ್ಧನೆಗೂ ಸಹಕಾರಿಯಾಗಿದ್ದು, ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಬೇಕಿದೆ. ಜತೆಗೆ ಇತರ ದೇಸಿ ತಳಿಗಳಿಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

‘ಮರೆತು ಹೋದ ಆಹಾರ’ ಕ್ಯಾಲೆಂಡರ್‌ ಬಿಡುಗಡೆ ಮಾಡಿದ ನವದೆಹಲಿಯ ಅಗ್ರಿಕಲ್ಚರ್‌ ವರ್ಲ್ಡ್‌ ಸಂಪಾದಕಿ ಡಾ.ಲಕ್ಷ್ಮಿ ಉನ್ನಿತಾನ್‌, ಆಹಾರ ಸಮಸ್ಯೆಗಳಿಗೆ ಗೆಡ್ಡೆಗಳಲ್ಲಿ ಉತ್ತರ ಇದೆ. ಅವುಗಳ ವೈವಿಧ್ಯ ಉಳಿಸಿ ಅವುಗಳ ಬಗ್ಗೆ ದಾಖಲೀಕರಣವೂ ಆಗಬೇಕು ಎಂದರು.

ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ಡಾ.ಎಂ.ಡಿ.ರಾಘವೇಂದ್ರ ಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು.

120 ಬಗೆಯ ಗೆಡ್ಡೆ ಗೆಣಸನ್ನು ಬೆಳೆಸುತ್ತಿರುವ ಕೇರಳದ ವಯನಾಡಿನ ಎನ್‌.ಎಂ.ಶಾಜಿ, ಧಾರವಾಡದ ಅಖಿಲ ಭಾರತ ಗೆಡ್ಡೆ ಗೆಣಸು ಸಮನ್ವಯ ಸಂಶೋದನಾ ಯೋಜನೆಯ ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಧಾನ ಸಂಶೋಧಕ ಇಮಾಮ್ ಸಾಹೇಬ ಜತ್ತ, ಧಾರವಾಡದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆಲೂಗೆಡ್ಡೆ ಮತ್ತು ಸಿಹಿಗೆಣಸು) ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಪ್ರಧಾನ ಸಂಶೋಧಕ ಡಾ.ಅರುಣ ಕುಮಾರ್‌ ಬಾವಿದೊಡ್ಡಿ ಭಾಗವಹಿಸಿದ್ದರು.

ಮೈಸೂರಿನ ಕೃಷಿ ಕಲಾದ ಸೀಮಾ ಪ್ರಸಾದ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೆಡ್ಡೆ ಗೆಣಸುಗಳಿಂದ ಆಹಾರ ತಯಾರಿಕೆ ಸ್ಪರ್ಧೆ ಫೆ.7ರಂದು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು