ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು ಪುತ್ರಿಯ ಸೀರೆ ಎಳೆಸಿದ್ದು ಯಾರು: ವಿಶ್ವನಾಥ್‌ಗೆ ಸಾ.ರಾ.ಮಹೇಶ್‌ ತಿರುಗೇಟು

ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌, ಸಂಸದ ಪ್ರತಾಪಸಿಂಹಗೆ ಶಾಸಕ ಸಾ.ರಾ.ಮಹೇಶ್‌ ತಿರುಗೇಟು
Last Updated 5 ಡಿಸೆಂಬರ್ 2020, 3:18 IST
ಅಕ್ಷರ ಗಾತ್ರ

ಮೈಸೂರು: ‘ಡಿ.ದೇವರಾಜ ಅರಸು ರಾಜಕೀಯ ಗುರು ಅಂತೀರಾ. ಆದರೆ ಕೆ.ಆರ್.ನಗರದಲ್ಲಿ ಅವರ ಪುತ್ರಿಯ ಸೀರೆಯನ್ನೇ ಎಳೆಸಿದ್ದು ಯಾರು?’ ಎಂದು ಶಾಸಕ ಸಾ.ರಾ.ಮಹೇಶ್‌, ಶುಕ್ರವಾರ ಇಲ್ಲಿ ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್‌ ಕಾಲೆಳೆದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಜೆಡಿಎಸ್‌ ಶಾಸಕಾಂಗ ಪ‍ಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಹೊಂದಿರುವ ಸಖ್ಯದ ಕುರಿತಂತೆ, ಶೇಕ್ಸ್‌ಪಿಯರ್‌ನ ನಾಟಕವೊಂದರ ಪ್ರಸಂಗವನ್ನು (ತಂದೆಯನ್ನೇ ಕೊಂದ ಮಗನನ್ನು ತಾಯಿ ಮದುವೆಯಾಗಿ ಮೆರವಣಿಗೆ ಹೊರಟಂತಿದೆ) ಉದಾಹರಿಸಿದ್ದ ವಿಶ್ವನಾಥ್ ಹೇಳಿಕೆಯನ್ನು ಶಾಸಕ ಸಾ.ರಾ. ಖಂಡಿಸಿದರು.

‘ಎಸ್‌.ಎಂ.ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದುಕೊಂಡು, ಅವರ ವಿರುದ್ಧವೇ ಪುಸ್ತಕ ಬರೆದವರು ಯಾರು? ಸಿದ್ದರಾಮಯ್ಯ ಸಹಕಾರದಿಂದಲೇ ಸಂಸದರಾಗಿ ಅವರ ವಿರುದ್ಧವೇ ಸೋನಿಯಾ ಗಾಂಧಿಗೆ ಪತ್ರ ಬರೆದವರು ಯಾರು? ಇದನ್ನೆಲ್ಲಾ ಗಮನಿಸಿದರೆ, ಶೇಕ್ಸ್‌ಪಿಯರ್‌ನ ನಾಟಕದ ಪ್ರಸಂಗ ಯಾರಿಗೆ ಅನ್ವಯ ಆಗಲಿದೆ ಎಂಬುದು ಜಗಜ್ಜಾಹೀರಾಗಲಿದೆ’ ಎಂದು ಸಾ.ರಾ.ಮಹೇಶ್‌, ವಿಶ್ವನಾಥ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಶಾಸಕ ಜಿ.ಟಿ.ದೇವೇಗೌಡ ಜೆಡಿಎಸ್‌ ನಾಯಕರು. ನಮ್ಮಲ್ಲೇ ಇದ್ದಾರೆ. ಇಲ್ಲಿಯೇ ಮುಂದುವರೆಯುತ್ತಾರೆ. ಜಿಲ್ಲೆಯ ಕೆಲ‌ ಮುಖಂಡರು ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ. ಮೈಮುಲ್‌ನಲ್ಲಿನ ಅಕ್ರಮ ನೇಮಕಾತಿ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕಾನೂನು ಹೋರಾಟವನ್ನು ನಾನು ಮುಂದುವರೆಸುತ್ತೇನೆ’ ಎಂದು ಸಾ.ರಾ.ಮಹೇಶ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಯಾವ ಜಿಲ್ಲಾಧಿಕಾರಿ ಬಗ್ಗೆ ಇಲ್ಲದ ಕಾಳಜಿಯನ್ನು ಸಂಸದ ಪ್ರತಾಪಸಿಂಹ, ರೋಹಿಣಿ ಸಿಂಧೂರಿ ಬಗ್ಗೆ ವಹಿಸಿರೋದು ಏಕೆ? ಸಂಸದರಿಗೆ ಜನಪ್ರತಿನಿಧಿಗಳ ಸಂಪರ್ಕಕ್ಕಿಂತ ಬೇರೆಯವರ ಸಂಪರ್ಕವೇ ಜಾಸ್ತಿ‌’ ಎಂದ ಸಾ.ರಾ.ಮಹೇಶ್‌, ‘ಜಿಲ್ಲಾಧಿಕಾರಿಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ’ ಎಂದು ಸಂಸದ ಪ್ರತಾಪ್‌ಸಿಂಹ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT