ಶುಕ್ರವಾರ, ಜನವರಿ 24, 2020
17 °C
ಜೆಎಸ್ಎಸ್ ಮಠದ ಆವರಣದಲ್ಲಿ ಗಂಧದ ಮರ ಕಡಿದಿದ್ದ ಆರೋಪಿಗಳು

ಮೈಸೂರು: ಮೂವರು ಗಂಧಚೋರರನ್ನು ಬಂಧಿಸಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಜೆಎಸ್ಎಸ್ ಮಠದ ಆವರಣದಲ್ಲಿ ಜುಲೈ 10 ಮತ್ತು 13ರಂದು 6 ಗಂಧದ ಮರಗಳನ್ನು ಕತ್ತರಿಸಿ ಕದ್ದೋಯ್ದಿದ್ದ ಮೂವರು ಆರೋಪಿಗಳನ್ನು ನಗರ ಅಪರಾಧ ಪತ್ತೆ ವಿಭಾಗ (ಸಿಸಿಬಿ)ದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ ಸಂಪತ್‌ಕುಮಾರ್ (32), ಬೊಂಬು ಬಜಾರ್‌ನ ಪರಶುರಾಂ (38), ಶಾಂತಿನಗರದ ಸೈಯೀದ್ ರಹೀಂ (22) ಬಂಧಿತರು.‌ ಇವರಿಂದ ₹ 4 ಲಕ್ಷ ಮೌಲ್ಯದ 40 ಕೆ.ಜಿಯಷ್ಟು ತೂಕದ ಗಂಧದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವರು ಗೌರಿಶಂಕರನಗರದ ಬಸ್‌ನಿಲ್ದಾಣದ ಮುಂಭಾಗ ಎರಡು ಪ್ಲಾಸ್ಟಿಕ್‌ ಚೀಲಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಹಿಡಿದುಕೊಂಡು ನಿಂತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

‌ವಿಚಾರಣೆ ನಡೆಸಿದಾಗ ಇವರು ಸುತ್ತೂರು ಮಠದ ಆವರಣದಲ್ಲಿ ಗಂಧದ ಮರಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ಈಗಾಗಲೇ ಹುಣಸೂರು, ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಕಳವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.‌

ನಗರ ಅಪರಾಧ ವಿಭಾಗದ ಡಿಸಿಪಿ ಬಿ.ಟಿ.ಕವಿತಾ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಸಿ.ಕಿರಣ್‌ಕುಮಾರ್ ನೇತೃತ್ವದ ತಂಡವು ಕಳ್ಳರನ್ನು ಬಂಧಿಸಿದೆ. ಎಎಸ್‌ಐ ಚಂದ್ರೇಗೌಡ, ಅಲೆಗ್ಸಾಂಡರ್, ಸಿಬ್ಬಂದಿಯಾದ ರಾಮಸ್ವಾಮಿ, ಯಾಕುಬ್ ಷರೀಫ್, ಎಂ.ಆರ್.ಗಣೇಶ್, ಶಿವರಾಜು, ಲಕ್ಷ್ಮೀಕಾಂತ, ಚಿಕ್ಕಣ್ಣ, ಆನಂದ, ಗೌತಮ್, ಶಿವಕುಮಾರ್ ಕಾರ್ಯಾಚರಣೆ ತಂಡದಲ್ಲಿದ್ದರು.

ಗಮನ ಬೇರೆಡೆ ಸೆಳೆದು ಕಳ್ಳತನ

ಮೈಸೂರು: ಇಲ್ಲಿನ ಆಕಾಶವಾಣಿ ಸಮೀಪ ಬ್ಯಾಂಕಿನಿಂದ ಚಂದ್ರು ಎಂಬುವವರು ₹ 50 ಸಾವಿರ ಹಣ ತೆಗೆದುಕೊಂಡು ಬೈಕ್‌ನಲ್ಲಿ ಇಟ್ಟುಕೊಂಡು ನಿಂತಿದ್ದಾಗ ವ್ಯಕ್ತಿಯೊಬ್ದರು ಶರ್ಟ್‌ ಮೇಲೆ ಕಸ ಬಿದ್ದಿದೆ ಎಂದು ಹೇಳಿದ್ದಾರೆ. ಮತ್ತೊಬ್ಬ ಸ್ವಲ್ಪ ದೂರದಲ್ಲಿ ಹಣ ಬಿದ್ದಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಹಣ ತೆಗೆದುಕೊಳ್ಳಲು ಹೋದಾಗ ಕಳ್ಳರು ಬೈಕ್‌ನಲ್ಲಿ ಇಟ್ಟಿದ್ದ ಹಣ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ವಿ.ವಿ.ಪುರಂ ಠಾಣೆಯಲ್ಲಿ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು