ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಗಳಿಕೆ ವ್ಯಾಮೋಹ ಸಲ್ಲದು: ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅಭಿಮತ

Last Updated 29 ಜೂನ್ 2022, 14:32 IST
ಅಕ್ಷರ ಗಾತ್ರ

ಮೈಸೂರು: ‘ವಿದ್ಯಾರ್ಥಿಗಳುಹಣ ಗಳಿಸುವ ವ್ಯಾಮೋಹಕ್ಕೆ ಒಳಗಾಗದೆ ದೈಹಿಕ ಶ್ರಮ ಮತ್ತು ಬೌದ್ಧಿಕ ಜ್ಞಾನದೊಂದಿಗೆ ಬದುಕು ರೂಪಿಸಿಕೊಳ್ಳಬೇಕು’ ಎಂದು ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಸಲಹೆ ನೀಡಿದರು.

ನಗರದ ಎಸ್‌ಬಿಆರ್‌ಆರ್‌ ಮಹಾಜನ ಪ್ರಥಮ ದರ್ಜೆ ಕಾಲೇಜು, ಬೆಂಗಳೂರಿನ ಕರ್ನಾಟಕ ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆ ಹಾಗೂ ಕೋಲಾರ ಜಿಲ್ಲೆಯ ಸಿರಿಗನ್ನಡ ವೇದಿಕೆಯ ಸಹಯೋಗದಲ್ಲಿ ‘ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶ ಪ್ರಚಾರ ಕಾರ್ಯಕ್ರಮ’ದ ಅಂಗವಾಗಿ ಬುಧವಾರ ನಡೆದ ರಾಜ್ಯ ಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸ್ತುತ ಶಿಕ್ಷಣದಲ್ಲಿ ಬಹಳ ಏರಿಳಿತಗಳಿವೆ. ನಾಳೆ ಹೇಗೆ, ಏನು? ಎಂಬುದು ವಿದ್ಯಾರ್ಥಿಗಳನ್ನು ಚಿಂತೆಗೆ ದೂಡುತ್ತಿದೆ. ನಮ್ಮ ಬದುಕಿಗೆ ನಾವೇ ಅರ್ಥ ಕಂಡುಕೊಳ್ಳಬೇಕಾದ ಸಂದರ್ಭವಿದು’ ಎಂದರು.

‘ಸಮಾಜದಲ್ಲಿ ಶುದ್ಧ ಬೌದ್ಧಿಕ ವಾತಾವರಣ ನಿರ್ಮಾಣ ಮಾಡಬೇಕು. ಇದಕ್ಕೆ ಪೂರಕವಾಗಿ ವಿವಿಧ ವಿಷಯಗಳಲ್ಲಿ ಸಮಾಜದ ಏಳಿಗೆಗೆ ಪ್ರಬುದ್ಧ ಸಂವಾದ ಕಾರ್ಯಕ್ರಮಗಳು ನಡೆಯಬೇಕು. ಇದು ಸಂಘರ್ಷಕ್ಕೆ ದಾರಿ ಮಾಡದೆ, ಅಶಾಂತಿಗೆ ನೆಲೆಯಾಗದೆ, ಅಭಿವೃದ್ಧಿಯತ್ತ ಮಾನವೀಯ ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಕೊಂಡೊಯ್ಯಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಸ್ತ್ರೀ ಸ್ವಾತಂತ್ರ್ಯಕ್ಕೆ ಸಮಾಜದಲ್ಲಿ ಗೌರವ ದೊರೆಯಬೇಕು’ ಎಂದರು.

ವಿಮರ್ಶಕ ಪ್ರೊ.ಎನ್. ಬೋರಲಿಂಗಯ್ಯ ಮಾತನಾಡಿ, ‘ಪುರುಷ ಪ್ರಧಾನ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸುವ್ಯವಸ್ಥೆ ಸ್ಥಾಪಿಸುವಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ’ ಎಂದು ನುಡಿದರು.

‘ರಾಜ್ಯ ಸರ್ಕಾರವು ಪಠ್ಯಕ್ರಮ ಪರಿಷ್ಕರಣೆ ವೇಳೆ ರಾಷ್ಟ್ರಕವಿ ಕುವೆಂಪು, ಬಸವಣ್ಣ ಮೊದಲಾದವರಿಗೆ ಧಕ್ಕೆ ಬರುವಂತೆ ಮಾಡಿದ್ದು ಸರಿಯಲ್ಲ’ ಎಂದು ತಿಳಿಸಿದರು.

ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆಯ ಸಂಸ್ಥಾಪಕ ಕೆ. ಮುನಿಕೃಷ್ಣಪ್ಪ ಮಾತನಾಡಿದರು.

ಮಹಾಜನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕಾರ್ಯನಿರ್ವಾಹಣಾಧಿಕಾರಿ ಡಾ.ಎಸ್.ಆರ್. ರಮೇಶ್, ಕೋಲಾರ ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಎಚ್. ರಾಮಚಂದ್ರಪ್ಪ, ಮೈಸೂರು ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಎ.ಹೇಮಗಂಗಾ, ಪ್ರೊ.ಸರಸ್ವತಿ, ಪ್ರೊ.ಬಸವರಾಜು, ಚಂದ್ರೇಗೌಡ, ವೆಂಕಟರಾಮಣ್ಣ ಬಿ., ಬಿದಲೋಟಿ ರಂಗನಾಥ, ಡಾ.ವಿನೋದಮ್ಮ, ಪ್ರೊ.ನಾಗಭೂಷಣ, ರವಿಅಯ್ಯರ್ ಎಲ್. ಮತ್ತು ಮಣಿಕಂಠ ಟಿ. ಉಪಸ್ಥಿತರಿದ್ದರು.

ಅನನ್ಯಾ, ಭುವನ ಮತ್ತು ತಂಡದವರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ರಜಿಕ್, ರಶೀದ್ ನಿರೂಪಿಸಿದರು. ರಾಜ್ಯ ಅನಿಕೇತನ ಸಾಂಸ್ಕೃತಿಕ ವೇದಿಕೆಯ ಗೌರವ ಕಾರ್ಯದರ್ಶಿ ನಾ. ಗುರುಮೂರ್ತಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT