ವೈರತ್ವ ಮರೆತ ಸಿದ್ದರಾಮಯ್ಯ–ಜಿಟಿಡಿ; ಮೈತ್ರಿ ಅಭ್ಯರ್ಥಿ ಪರ ಜಂಟಿ ಪ್ರಚಾರ

ಮಂಗಳವಾರ, ಏಪ್ರಿಲ್ 23, 2019
29 °C

ವೈರತ್ವ ಮರೆತ ಸಿದ್ದರಾಮಯ್ಯ–ಜಿಟಿಡಿ; ಮೈತ್ರಿ ಅಭ್ಯರ್ಥಿ ಪರ ಜಂಟಿ ಪ್ರಚಾರ

Published:
Updated:
Prajavani

ಮೈಸೂರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಭಿನ್ನಾಭಿಪ್ರಾಯ ಬದಿಗಿರಿಸಿ ಮೈಸೂರು–ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪರ ಜಂಟಿ ಪ್ರಚಾರ ಕೈಗೊಂಡರು.

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಡಕೊಳ, ಜಯಪುರ, ಇಲವಾಲ ಮತ್ತು ಸಿದ್ದಲಿಂಗಪುರದಲ್ಲಿ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ಇಬ್ಬರೂ ಅಕ್ಕಪಕ್ಕ ಕುಳಿತು ಸಮಾಲೋಚನೆ ನಡೆಸಿದರು.

‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದಾಗಿದ್ದೇವೆ. ಕಾರ್ಯಕರ್ತರು ಕೂಡ ಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಉಭಯ ನಾಯಕರು ಬೆಂಬಲಿಗರಿಗೆ ಕರೆಕೊಟ್ಟರು.

ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ಚುನಾವಣೆ ಬಳಿಕವೂ ಇವರಿಬ್ಬರ ವೈರತ್ವ ಮುಂದುವರಿದಿತ್ತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಈ ನಾಯಕರು ಎಲ್ಲೂ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ.

ಆದರೆ, ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಜತೆಯಾಗಿ ಅಖಾಡಕ್ಕೆ ಧುಮುಕಿದ್ದಾರೆ. ಕಳೆದ ವರ್ಷ ಪರಸ್ಪರ ಪೈಪೋಟಿ ನಡೆಸಿದ್ದ ಕ್ಷೇತ್ರದಲ್ಲೇ ಜತೆಯಾಗಿ ಮತಯಾಚಿಸಿದರು.

‘2006ರವರೆಗೆ ನಾನು ಮತ್ತು ಜಿ.ಟಿ.ದೇವೇಗೌಡ ಜತೆಯಾಗಿಯೇ ಇದ್ದೆವು. ಆ ಬಳಿಕ ಬೇರೆ ಬೇರೆಯಾದೆವು. ನನ್ನ ಜತೆಗೇ ಇದ್ದ ಅವ ಕಳೆದ ಬಾರಿ ನನ್ನನ್ನೇ ಸೋಲಿಸಿಲ್ವಾ? ಈಗ ಅವೆಲ್ಲವನ್ನೂ ಮರೆತು ಒಟ್ಟಾಗಿದ್ದೇವೆ. ದೇಶದ ಹಿತಾಸಕ್ತಿಯನ್ನು ಮುಂದಿಟ್ಟು ಪರಸ್ಪರ ಕೈಜೋಡಿಸಿದ್ದೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

‘ನಾವು ಸೋತರೆ ಸರ್ಕಾರ ಇರುತ್ತಾ?’

‘ಮೈತ್ರಿ ಸರ್ಕಾರ ಐದು ವರ್ಷ ಇರಬೇಕು. ಲೋಕಸಭೆ ಚುನಾವಣೆಯಲ್ಲಿ ನಾವು 20 ಸ್ಥಾನಗಳನ್ನು ಗೆಲ್ಲಬೇಕು. ಇಲ್ಲದಿದ್ದರೆ ಸರ್ಕಾರ ಇರುತ್ತಾ. ಇದನ್ನೆಲ್ಲಾ ತಿಳಿದುಕೊಳ್ಳಬೇಕು’ ಎಂದು ಜಯಪುರದಲ್ಲಿ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದರು.

‘ನಾನು ಈಗ ಮಂತ್ರಿಯಾಗಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ.ದೇವೇಗೌಡ ಮತ್ತು ಸಾ.ರಾ.ಮಹೇಶ್‌, ತಮ್ಮಣ್ಣ, ಪುಟ್ಟರಾಜು ಸಚಿವರಾಗಿ ಇದ್ದಾರೆ. ಕಾಂಗ್ರೆಸ್‌ನವರು 22 ಮಂದಿ ಮಂತ್ರಿಗಳಿದ್ದಾರೆ. ಅದು ಬೇರೆ ವಿಚಾರ. ಬಿಜೆಪಿಯವರು ಅಧಿಕಾರಕ್ಕೆ ಬರದ ಹಾಗೆ ನೋಡಿಕೊಳ್ಳಬೇಕಲ್ಲವೇ. ಅದಕ್ಕಲ್ಲವೇ ನಾವು ಒಂದಾಗಿರೋದು’ ಎಂದು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್‌ ಕಾರ್ಯಕರ್ತರಿಗೆ ಸೂಚ್ಯವಾಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !