ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಪುಗಾರಿಕೆ ಬಿಡಿ, ಸಂಘಟಿತರಾಗಿ: ವಿಶ್ವಕರ್ಮ ಸಮಾಜದವರಿಗೆ ಸಿದ್ದರಾಮಯ್ಯ ಸಲಹೆ

Last Updated 7 ಆಗಸ್ಟ್ 2022, 8:40 IST
ಅಕ್ಷರ ಗಾತ್ರ

ಮೈಸೂರು: ‘ವಿಶ್ವಕರ್ಮ ಸಮಾಜದವರು ಗುಂಪುಗಾರಿಕೆಗೆ ಅವಕಾಶ ಕೊಡದೇ ಸಂಘಟಿತರಾಗಬೇಕು. ಸಂವಿಧಾನ ನೀಡಿರುವ ಅವಕಾಶಗಳನ್ನು ಬಳಸಿಕೊಂಡು ಮುಖ್ಯ ವಾಹಿನಿಗೆ ಬರಬೇಕು’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ನಡೆದ ವಿಶ್ವಕರ್ಮ ಸೇವಾ ಟ್ರಸ್ಟ್ ಉದ್ಘಾಟನೆ ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

‘ವಿಶ್ವಕರ್ಮ ಸಮಾಜ ಕಾಯಕ ಸಮಾಜಗಳಲ್ಲಿ ಒಂದಾಗಿದೆ. ಕಾಯಕ ಮಾಡುವವರೆಲ್ಲರೂ ಬಡವರೇ ಹೊರತು ಶ್ರೀಮಂತರಲ್ಲ. ನಾವೆಲ್ಲರೂ ಶೂದ್ರರು. ಉತ್ಪಾದಿಸುವವರು ನಾವು; ಅನುಭವಿಸುವವರು ಮೇಲ್ವರ್ಗದವರು. ವಿಶ್ವಕರ್ಮರು ಮೂರ್ತಿ ಕೆತ್ತುತ್ತಾರೆ. ಪ್ರತಿಷ್ಠಾಪಿಸಿದ ನಂತರ ಪೂಜಿಸುವವರು ಗರ್ಭಗುಡಿಯ ಒಳಗಿರುತ್ತಾರೆ;ಕೆತ್ತಿದವರು ಹೊರಗಿರಬೇಕು. ಇದು ನಮ್ಮ ವ್ಯವಸ್ಥೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಂವಿಧಾನದಿಂದ:

‘ಅಂಬೇಡ್ಕರ್‌ ಸಂವಿಧಾನ ನೀಡಿದ್ದರಿಂದಾಗಿ, ಈಗ ಶೂದ್ರರಿಗೂ ವಿದ್ಯೆಯ, ಆಸ್ತಿ ಗಳಿಸುವ ಅವಕಾಶ ಸಿಕ್ಕಿದೆ. ಹಿಂದೆ ಇದ್ಯಾವೂದೂ ಇರಲಿಲ್ಲ. ನಾವೇ ಉತ್ಪಾದಿಸಿದರೂ ಅನುಭವಿಸುವ ಪರಿಸ್ಥಿತಿ ಇರಲಿಲ್ಲ. ಇದನ್ನು ಹೋಗಲಾಡಿಸುವುದಕ್ಕಾಗಿಯೇ ಬಸವಾದಿ ಶರಣರು ಸಮ ಸಮಾಜದ ನಿರ್ಮಾಣಕ್ಕೆ ಹಂಬಲಿಸಿದರು. ಅನುಭವ ಮಂಟಪದಲ್ಲಿ ಎಲ್ಲ ಸಮಾಜದವರಿಗೂ ಅವಕಾಶ ಕೊಟ್ಟರು. ಎಲ್ಲರೂ ನಮ್ಮವರು ಎನ್ನಬೇಕು ಎಂಬ ಸಂದೇಶ ನೀಡಿದರು. ಆದರೆ, ಅವರ ಆಶಯಗಳನ್ನು ಅನುಷ್ಠಾನಕ್ಕೆ ತಂದಿಲ್ಲ’ ಎಂದರು.

‘ಇಂದಿಗೂ ನಮ್ಮಲ್ಲಿ ಜಾತಿ, ಅಸಮಾನತೆ ಹೋಗಿಲ್ಲ. ನಾವೆಲ್ಲರೂ ಒಂದಾಗಿಲ್ಲ. ಎಲ್ಲರಿಗೂ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಶಕ್ತಿ ಬಂದರೆ ಸಮಾನತೆ ಬರುತ್ತದೆ’ ಎಂದು ಪ್ರತಿಪಾದಿಸಿದರು.

ಅಧಿಕಾರಕ್ಕೆ ಬಂದರೆ ಹೆಚ್ಚಿನ ಅನುಕೂಲ:

‘ಸಮಾಜಕ್ಕೆ ಅನುಕೂಲವಾಗಲೆಂದು ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿ, ಹೆಚ್ಚಿನ ಅನುದಾನ ನೀಡಿದ್ದೆ. ಆದರೆ, ನಂತರ ಬಂದ ಸರ್ಕಾರಗಳು ಅನುದಾನ ಕಡಿಮೆ ಮಾಡಿವೆ. ನೀವೆಲ್ಲರೂ ಆಶೀರ್ವದಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುತ್ತೇವೆ. ಬೇರೆಯವರ ಬಣ್ಣದ ಮಾತುಗಳಿಗೆ ಮಾರು ಹೋಗಬೇಡಿ. ನಿಮ್ಮೊಂದಿಗೆ ಇರುವವರ ಜೊತೆಗಿರಿ’ ಎಂದು ಕೋರಿದರು.

‘ಎಲ್ಲರೂ ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು. ಗುಲಾಮಗಿರಿಯ ಮನಸ್ಥಿತಿ ಬಿಡಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸ್ವಾಭಿಮಾನದಿಂದ ಬದುಕುವುದಕ್ಕೆ ಶಿಕ್ಷಣ ಅತ್ಯಗತ್ಯ ಎನ್ನುವುದನ್ನು ಮರೆಯಬಾರದು. ಗುಂಪುಗಳನ್ನು ಮಾಡಿ ಸಮಾಜ ಒಡೆಯುವವರ ಬಗ್ಗೆ ಎಚ್ಚರದಿಂದಿರಬೇಕು’ ಎಂದು ಕಿವಿಮಾತು ಹೇಳಿದರು.

ವಿಶ್ವಕರ್ಮ ಸೇವಾ ಟ್ರಸ್ಟ್‌ನ ನಾಮಫಲಕವನ್ನು ಖ್ಯಾತ ಚಲನಚಿತ್ರ ನಟಿ ಭವ್ಯಾ ಅನಾವರಣಗೊಳಿಸಿದರು.

ತುಮಕೂರಿನ ನಿಟ್ಟರಹಳ್ಳಿಯ ನೀಲಕಂಠಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಲ್.ನಾಗೇಂದ್ರ, ಅನಿಲ್ ಚಿಕ್ಕಮಾದು, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮುಖಂಡರಾದ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಎಚ್‌.ವಿ.ರಾಜೀವ್, ಹರೀಶ್‌ ಗೌಡ, ನಗರಪಾಲಿಕೆ ಸದಸ್ಯರಾದ ರಮೇಶ್‌, ಕೆ.ವಿ.ಶ್ರೀಧರ್, ಛಾಯಾದೇವಿ, ಎ.ನಂದಕುಮಾರ್, ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಾಚಾರ್ ಆನಂದೂರು, ಗೌರವಾಧ್ಯಕ್ಷೆ ಶಾಂತಮ್ಮ ಕೆ.ಎನ್., ಉಪಾಧ್ಯಕ್ಷರಾದ ರಾಮಚಂದ್ರ ಎಸ್., ಮೀನಾಕ್ಷಮ್ಮ ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಸರಸ್ವತಿ, ಮೀನಾಕ್ಷಮ್ಮ ಹಾಗೂ ಶಾಂತಮ್ಮ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕೆಂಡಗಣ್ಣ ವಿಶ್ವಕರ್ಮ ಕೆ. ನಿರೂಪಿಸಿದರು. ಎಸ್.ನಾಗೇಂದ್ರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT