ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಉದ್ಘಾಟನೆಗೆ 200 ಜನ ಏಕೆ?: ಎಸ್‌.ಎಲ್‌.ಭೈರಪ್ಪ

ಸಾಹಿತಿ ಡಾ.ಎಸ್.ಎಲ್‌.ಭೈರಪ್ಪಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ
Last Updated 10 ಅಕ್ಟೋಬರ್ 2020, 19:29 IST
ಅಕ್ಷರ ಗಾತ್ರ

ಮೈಸೂರು:ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ, ದಸರಾ ಉದ್ಘಾಟನಾ ಸಮಾರಂಭಕ್ಕೆ 200 ಜನರಿಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಅಭಿಪ್ರಾಯಪಟ್ಟರು.

‘ಜನರು ಅವರವರ ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಅರಮನೆಯವರು ಅವರ ಪಾಡಿಗೆ ಜಂಬೂ ಸವಾರಿ ನಡೆಸಲಿ. ಆನೆಯ ಮೇಲೆ ಅಂಬಾರಿ ಇಟ್ಟು ಮೆರವಣಿಗೆ ನಡೆಸುವ ಕೆಲಸವನ್ನು ಮಾವುತರು ಮಾಡುತ್ತಾರೆ. ಜನರನ್ನು ಸೇರಿಸುವುದು ಏಕೆ?’ ಎಂದರು.

ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್‌, ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದಿಂದ ಕೊಡಮಾಡುವ ‘ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ’ ಸ್ವೀಕಾರ ಸಮಾರಂಭದ ಬಳಿಕ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ದಸರೆಯನ್ನು ಅದ್ದೂರಿಯಾಗಿ ಮಾಡದಿದ್ದರೆ ತಮಗೆ ಬ್ಯುಸಿನೆಸ್‌ ಇರುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಬ್ಯುಸಿನೆಸ್‌ ಇಲ್ಲ ಎನ್ನುವುದು ಸರಿ. ಆದರೆ ಹೆಚ್ಚು ಜನರನ್ನು ಸೇರಿಸಿದಾಗ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡಿದರೆ ಅದಕ್ಕೆ ಯಾರು ಜವಾಬ್ದಾರರು’ ಎಂದು ಪ್ರಶ್ನಿಸಿದರು.

ಕಾರಂತರುಸಿದ್ಧಾಂತಕ್ಕೆ ಕಟ್ಟುಬಿದ್ದವರಲ್ಲ: ಶಿವರಾಮ ಕಾರಂತ ಅವರು ಯಾವುದೇ ಸಿದ್ಧಾಂತಕ್ಕೆ ಕಟ್ಟುಬಿದ್ದವರಲ್ಲ. ಅವರದ್ದು ಮುಕ್ತವಾದ ಮನಸ್ಸು ಮತ್ತು ಬರವಣಿಗೆ ಆಗಿತ್ತು. ಒಬ್ಬ ಲೇಖ ಕನಿಗೆ ಅದು ಬಹಳ ಮುಖ್ಯ ಎಂದು ಸಾಹಿತಿ ಭೈರಪ್ಪ ಹೇಳಿದರು.

ಪ್ರಶಸ್ತಿಸ್ವೀಕರಿಸಿ ಮಾತನಾಡಿದ ಅವರು, ‘ಕಾರಂತರು ವಾಸ್ತವತಾ ವಾದ ವನ್ನು ಕಾದಂಬರಿ ಲೋಕಕ್ಕೆ ತಂದ ವರು. ನವೋದಯ ಕಾಲದಲ್ಲಿ ಅಷ್ಟರಮಟ್ಟಿಗೆ ವಾಸ್ತವತೆ ಇರಲಿಲ್ಲ. ಆದರ್ಶ ಜಾಸ್ತಿ ಇರುತ್ತಿತ್ತು. ಪ್ರಗತಿಶೀಲರ ಕಾಲದಲ್ಲಿ ಸಿದ್ಧಾಂತ (ಐಡಿಯಾಲಜಿ) ಶುರುವಾಯಿತು’ ಎಂದು ಹೇಳಿದರು.

ಎಡಪಂಥ, ಬಲಪಂಥ ಎಂಬ ಸಿದ್ಧಾಂತವನ್ನು ಸಿದ್ಧಾಂತವಾದಿಗಳು ಹುಟ್ಟುಹಾಕಿದ್ದಾರೆ. ವಾಸ್ತವ ವಿಚಾರಗಳನ್ನು ಹೇಳುವ, ಮುಕ್ತವಾಗಿ ಬರೆಯುವವರನ್ನು ಸಿದ್ಧಾಂತವಾದಿಗಳು ‘ಬಲಪಂಥೀಯ’ರೆಂದು ಕರೆಯುವರು. ಕಾರಂತರು ಸಹ ಈ ಆಪಾದನೆಯಿಂದ ಮುಕ್ತವಾಗಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರಂತರು ಬರೆಯುವುದಕ್ಕಿಂತ ಮೊದಲು ಕನ್ನಡ ಕಾದಂಬರಿಗಳು ಯಾವ ರೀತಿ ಇದ್ದವು, ಕಾರಂತರು ಬಂದ ಮೇಲೆ ಯಾವ ರೀತಿಯ ಬದಲಾ ವಣೆಗಳು ಆದವು ಎಂಬುದು ಬಹಳ ಮುಖ್ಯವಾದದ್ದು ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, 'ನಾಡು ಕಂಡು ದೊಡ್ಡ ಸಾಹಿತಿ ಭೈರಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತಸದ ವಿಷಯ. ಜ್ಞಾನಪೀಠ ಪ್ರಶಸ್ತಿ ಪಡೆದ ಕಾರಂತರಂಥವರ ಸಾಲಿನಲ್ಲಿ ನಿಲ್ಲಬಲ್ಲ ಭೈರಪ್ಪ ಅವರಿಗೂ ಜ್ಞಾನಪೀಠ ಪ್ರಶಸ್ತಿ ಸಿಗಲಿ’ ಎಂದು ಆಶಯ ವ್ಯಕ್ತಪಡಿಸಿದರು.

ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್, ಸಂಸದ ಪ್ರತಾಪ ಸಿಂಹ, ಶಾಸಕ ಎಲ್‌.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಸಾಹಿತಿ ಪ್ರಧಾನ ಗುರುದತ್ತ, ಕೋಟ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್, ಕೋಟತಟ್ಟು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಎಸ್.ಎಲ್ ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT