ಭಾನುವಾರ, ಆಗಸ್ಟ್ 1, 2021
23 °C
ಕೋವಿಡ್‌–19: ಪ್ರಸ್ತುತವೂ ಕಾಡುತ್ತಿರುವ ಮಾನವ ಸಂಪನ್ಮೂಲದ ಕೊರತೆ–ಡಾ.ಪಿ.ರವಿ

ಮೈಸೂರು | ಕೊರೊನಾ ನಿರ್ವಹಣೆ: ಸಿಬ್ಬಂದಿ ನಿಯೋಜನೆಯೇ ಸವಾಲು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಜಿಲ್ಲೆಯನ್ನು ಕೋವಿಡ್ ಮತ್ತೊಮ್ಮೆ ಬಾಧಿಸಲಾರಂಭಿಸಿದೆ. ಮೂರು ತಿಂಗಳ ಹಿಂದಿನ ಚಿತ್ರಣ ಕೊಂಚವೂ ಬದಲಾಗ ದಿರುವುದು ಹಾಲಿ ಕರ್ತವ್ಯನಿರತ ವೈದ್ಯಕೀಯ ಸಿಬ್ಬಂದಿ ತಂಡವನ್ನೇ ಹೈರಾಣಾಗಿಸುತ್ತಿದೆ...’

ಕೋವಿಡ್–19 ಪೀಡಿತರು, ಸಂಪರ್ಕಿತರು, ಶಂಕಿತರ ಆರೋಗ್ಯದ ನಿಗಾ ವಹಿಸಲು, ಇವರ ಚಿಕಿತ್ಸಾ ಸೇವೆಗೆ ಅಗತ್ಯವಿರುವ ವೈದ್ಯಕೀಯ ಸಿಬ್ಬಂದಿ ನಿಯೋಜಿಸುವ ಹೊಣೆಗಾರಿಕೆ ಹೊತ್ತಿ ರುವ ನೋಡೆಲ್ ಅಧಿಕಾರಿ (ಮಾನವ ಸಂಪನ್ಮೂಲ) ಡಾ.ಪಿ.ರವಿ ಮಾತಿದು.

‘ಶಂಕಿತರ ಗಂಟಲು ದ್ರವದ ಮಾದರಿ ತೆಗೆಯುವುದರಿಂದ ಹಿಡಿದು, ಪ್ರಯೋಗಾಲಯದ ವರದಿ ಬಂದೊಡನೆ, ಕೋವಿಡ್ ದೃಢ ಪಟ್ಟ ವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲು ಅಗತ್ಯವಿರುವ ಮಾನವ ಸಂಪನ್ಮೂಲವನ್ನು ನಿಯೋಜಿಸುವ ಹೊಣೆಗಾರಿಕೆಯನ್ನು ಮೂರು ತಿಂಗಳ ಹಿಂದೆ ನಡೆದ ಸಭೆಯೊಂದರಲ್ಲಿ ಜಿಲ್ಲಾಧಿಕಾರಿ ವಹಿಸಿದ್ದರು. ಅಂದಿ ನಿಂದಲೂ ಇಂದಿನವರೆಗೂ ಬಿಡುವಿ ಲ್ಲದ ಕೆಲಸ ನಡೆದಿದೆ’ ಎಂದು ರವಿ ‘ಪ್ರಜಾವಾಣಿ’ ಜೊತೆ ತಮ್ಮ ಕೊರೊನಾ ವಾರಿಯರ್ ಅನುಭವ ಬಿಚ್ಚಿಟ್ಟರು.

ಗೋಗರೆದರೂ ಬರಲಿಲ್ಲ: ‘ಹೊಸ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಘೋಷಿಸಿದಾಗ ಅಲ್ಲಿದ್ದಿದ್ದು ನೂತನ ಕಟ್ಟಡ, ವಿದ್ಯುತ್ ಸಂಪರ್ಕವಷ್ಟೇ. ಒಬ್ಬ ಸಿಬ್ಬಂದಿಯೂ ಇರಲಿಲ್ಲ. ಖಾಸಗಿ ವೈದ್ಯರ ಬಳಿ ಗೋಗರೆದರೂ ಯಾರೊಬ್ಬರೂ ಬರಲಿಲ್ಲ. ಒಂದೆಡೆ ಪ್ರಕರಣಗಳು ಹೆಚ್ಚುತ್ತಿದ್ದವು. ಇನ್ನೊಂದೆಡೆ ಸಿಬ್ಬಂದಿ ಕೊರತೆ. ಅಂದಿನ ಸಂಕಷ್ಟದ ಸ್ಥಿತಿ ಹೇಳಿಕೊಳ್ಳಲಾಗಲ್ಲ’ ಎಂದರು.

‘ಆರೋಗ್ಯ ಇಲಾಖೆ ಸಿಬ್ಬಂದಿಯ ಮನವೊಲಿಕೆಯಲ್ಲಿ ಯಶಸ್ವಿಯಾದೆ. ನಮ್ಮದೂ ಸಹ ಈ ಹೊತ್ತಿನಲ್ಲಿ ದೇಶ ಸೇವೆ. ನಾವೂ ಯಾವೊಬ್ಬ ಸೈನಿಕನಿಗೆ ಕಡಿಮೆಯಿಲ್ಲ. ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ ವಿರುದ್ಧ ನಮ್ಮ ಹೋರಾಟದ ಅವಶ್ಯವಿದೆ ಎಂಬುದನ್ನು ಅವರೆಲ್ಲರಿಗೂ ಮನದಟ್ಟು ಮಾಡಿ ಕೊಟ್ಟು ಮಾನವ ಸಂಪನ್ಮೂಲ ನಿಯೋಜಿಸಿದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

‘ಕೋವಿಡ್ ಆಸ್ಪತ್ರೆ, ಐಸೋಲೇಷನ್ ವಾರ್ಡ್‌, ಪ್ರಯೋಗಾಲಯ, ಕ್ವಾರಂಟೈನ್ ಕೇಂದ್ರ, ಜಿಲ್ಲೆಯ ಗಡಿ ಭಾಗದ ಚೆಕ್‌ಪೋಸ್ಟ್‌ಗಳು, ಪ್ರಮುಖ ಬಸ್‌ ನಿಲ್ದಾಣ, ಶ್ರಮಿಕ್ ರೈಲು ಸಂಚಾರ, ವಿಮಾನ ನಿಲ್ದಾಣ ಸೇರಿದಂತೆ ವಿವಿಧೆಡೆ ವೈದ್ಯರು, ಶುಶ್ರೂಷಕ ಸಿಬ್ಬಂದಿಯನ್ನು ನಿಯೋಜಿಸುವ ಹೊಣೆಗಾರಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ನಮ್ಮಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಇಂದಿಗೂ ಕೊರೊನಾ ವಾರಿಯರ್ಸ್‌ಗಳಾಗಲು ಖಾಸಗಿ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಮುಂದಾಗದಿರುವುದು ಸರ್ಕಾರಿ ಸಿಬ್ಬಂದಿಯನ್ನೇ ಹೈರಾಣು ಮಾಡುತ್ತಿದೆ’ ಎಂದು ರವಿ ತಿಳಿಸಿದರು.

‘ವಾರವೇ ಗೊತ್ತಿಲ್ಲ’

‘ಪ್ರಯೋಗಾಲಯದ ಉಸ್ತುವಾರಿಯೂ ನನ್ನದೆ. ತಪಾಸಣೆಗೊಳಪಟ್ಟವರ ವರದಿ ಬರುವ ತನಕವೂ, ಬಂದ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳು ಯಾವುವು ಎಂಬುದನ್ನು ನಿರ್ಧರಿಸಬೇಕು. ಒಮ್ಮೊಮ್ಮೆ ಈ ಕೆಲಸ ಮುಗಿದಿದ್ದು ನಸುಕಿನ 3 ಗಂಟೆಯಾದ ದಿನವೂ ಇದೆ. ಕೆಲಸದ ಒತ್ತಡದಲ್ಲಿ ಇದು ಯಾವ ವಾರ ಎಂಬುದೇ ನೆನಪಿರುತ್ತಿರಲಿಲ್ಲ’ ಎಂದು ರವಿ ತಮ್ಮ ಅನುಭವ ಹಂಚಿಕೊಂಡರು.

‘ಹಲವು ದಿನ ಮನೆಗೆ ಹೋಗಿಲ್ಲ. ಕೋವಿಡ್ ಆಸ್ಪತ್ರೆಗೆ ಬರುವ ತಿಂಡಿ, ಊಟ ಮಾಡಿಯೇ ದಿನ ಕಳೆದಿರುವೆ. ಈ ಅವಧಿಯಲ್ಲಿನ ಸೇವೆ ತೃಪ್ತಿ ನೀಡಿದೆ. ಕ್ವಾರಂಟೈನ್‌ ಹೋಟೆಲ್‌ಗಳ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಕೋವಿಡ್ ಪೀಡಿತರು, ಶಂಕಿತರ ವಿವರ ಗೋಪ್ಯವಾಗಿಟ್ಟಿದ್ದೇ ನಮ್ಮ ಯಶಸ್ಸಿಗೆ ಕಾರಣ’ ಎಂದು ಹೇಳಿದರು.

‘ಗರ್ಭಿಣಿ ಆರೈಕೆ ಮಾಡಿದಂತೆ’

‘ಕೋವಿಡ್ ಆಸ್ಪತ್ರೆ ಸೇರಿದಂತೆ ವಾರಿಯರ್ಸ್‌ಗಳಾಗಿ ವಿವಿಧೆಡೆ ಪೀಡಿತರೊಟ್ಟಿಗೆ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯನ್ನು ಗರ್ಭಿಣಿಯರ ಆರೈಕೆ ಮಾಡಿದಂತೆ ಇಂದಿಗೂ ಮಾಡುತ್ತಿರುವೆವು’ ಎನ್ನುತ್ತಾರೆ ರವಿ.

‘ತಮ್ಮ ಸೇವೆಯ ಅವಧಿಯಲ್ಲಿ ಯಾರೊಬ್ಬರೂ ಸೋಂಕು ತಗುಲಿಸಿಕೊಳ್ಳದಂತೆ ಹೊರ ಬರುವುದನ್ನೇ ಎದುರು ನೋಡುತ್ತಿರುತ್ತೇವೆ. ಪ್ರತಿಯೊಬ್ಬರೂ ಏಳು ದಿನದ ಕ್ವಾರಂಟೈನ್ ಮುಗಿಸಿ ಮತ್ತೆ ಸೇವೆಗೆ ಸಜ್ಜಾಗುವ ತನಕವೂ ಕಣ್ಣಲ್ಲಿ ಕಣ್ಣಿಟ್ಟು ಅವರನ್ನು ನೋಡಿಕೊಳ್ಳುವ ಹೆಚ್ಚುವರಿ ಹೊಣೆಗಾರಿಕೆಯೂ ನನ್ನದಾಗಿದೆ’ ಎಂದು ತಿಳಿಸಿದರು.

ಅಂಕಿ–ಅಂಶ

* 5,500- ವೈದ್ಯಕೀಯ ಸಿಬ್ಬಂದಿ ಕೊರೊನಾ ವಾರಿಯರ್ಸ್‌ಗಳಾಗಿ ಸೇವೆ 

* 15- ಜಿಲ್ಲೆಯಲ್ಲಿ ಫೀವರ್ ಕ್ಲಿನಿಕ್ ಕಾರ್ಯಾಚರಣೆ

* ಗಂಟಲು ದ್ರವದ ಮಾದರಿ ಸಂಗ್ರಹಣೆಗೆ 8 ತಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು