ಸೋಮವಾರ, ಮಾರ್ಚ್ 27, 2023
29 °C
ರೈತ, ದಲಿತ ಸಂಘರ್ಷ ಸಮಿತಿ, ಕಾರ್ಮಿಕ ಸಂಘಟನೆಗಳ ಒಗ್ಗಟ್ಟು ಪ್ರದರ್ಶನ

21ರಿಂದ ರಾಜ್ಯದಾದ್ಯಂತ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭೂಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಿರೋಧಿಸಿ ಸೆ.21ರಿಂದ ರಾಜ್ಯದಾದ್ಯಂತ ಪ್ರತಿಭಟನೆಗೆ ‘ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ’ ಕ್ರಿಯಾ ಸಮಿತಿ ನಿರ್ಧರಿಸಿದೆ.

ವಿಧಾನಮಂಡಲದ ಅಧಿವೇಶನ ಸೆ.21ರಿಂದ 30ರವರೆಗೆ ನಡೆಯಲಿದ್ದು, ಇದೇ ಅವಧಿಯಲ್ಲಿ ಸರ್ಕಾರದ ವಿರುದ್ಧ ತೀವ್ರ ಹೋರಾಟಕ್ಕೆ ತೀರ್ಮಾನಿಸಲಾಗಿದೆ. ನಗರದಲ್ಲಿ ಭಾನುವಾರ ಐಕ್ಯ ಹೋರಾಟ ಕ್ರಿಯಾ ಸಮಿತಿ ಸಭೆ ನಡೆಯಿತು. ಸಾಹಿತಿ ದೇವನೂರ ಮಹಾದೇವ ಒಳಗೊಂಡಂತೆ ಹಲವು ಮುಖಂಡರು ಪಾಲ್ಗೊಂಡರು.

ವಿಧಾನಮಂಡಲದ ಅಧಿವೇಶನ ನಡೆಯಲಿರುವ 10 ದಿನ ರಾಜ್ಯದಾದ್ಯಂತ ನಡೆಯಲಿರುವ ಹೋರಾಟದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ವ್ಯಕ್ತಿ, ಸಂಘಟನೆ ಎಂಬ ಭೇದಭಾವ ತೊರೆದು ‘ಐಕ್ಯ ಹೋರಾಟ’ ಎಂಬ ಹೆಸರಿನಡಿ ಪ್ರತಿಭಟನೆ ನಡೆಸಲು ವಿವಿಧ ಸಂಘಟನೆ ಗಳ ಮುಖಂಡರು ಒಪ್ಪಿಕೊಂಡರು.

ಸಭೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ರೈತ, ಕಾರ್ಮಿಕ ಸಂಘಟನೆಗಳು ಮತ್ತು ದಲಿತ ಸಂಘರ್ಷ ಸಮಿತಿ ಮುಖಂಡರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ಹೋರಾಟಕ್ಕೆ ಅಂತಿಮ ರೂಪ ನೀಡಲು ಸೆ.13ರಂದು ಬೆಂಗಳೂರಿನಲ್ಲಿ ಇನ್ನೊಂದು ಸಭೆ ನಡೆಸಲು ತೀರ್ಮಾನಿಸಲಾಯಿತು.

‘ಬೆಂಗಳೂರಿನಲ್ಲಿ ಸೆ.21ರಂದು ಬೃಹತ್‌ ಪ್ರತಿಭಟನೆ ನಡೆಯಲಿದೆ. ಅಹೋರಾತ್ರಿ ಧರಣಿ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳ ಜನರು ಪಾಲ್ಗೊಳ್ಳುವರು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲೂ ವಿವಿಧ ರೀತಿಯಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಅಧ್ಯಕ್ಷ ಬಡಗಲಪುರ ನಾಗೇಂದ್ರ ಅವರು ಸಭೆಯ ಬಳಿಕ ತಿಳಿಸಿದರು.

ಕೃಷಿ ವಿಜ್ಞಾನಿ ಡಾ.ಪ್ರಕಾಶ್‌ ಕಮ್ಮರಡಿ, ‘ಈ ಸುಗ್ರೀವಾಜ್ಞೆಗಳು ರೈತರು ಮತ್ತು ಕಾರ್ಮಿಕರಿಗೆ ಮಾತ್ರ ಮಾರಕವಾಗಿಲ್ಲ. ಜನಸಾಮಾನ್ಯರ ಮೇಲೂ ಕೆಟ್ಟ ಪರಿಣಾಮ ಬೀರಲಿದೆ. ಭೂಸುಧಾರಣೆಗೆ ಸಂಬಂಧಿಸಿದ ಎರಡು ಹಾಗೂ ಎಪಿಎಂಸಿಗೆ ಸಂಬಂಧಿಸಿದ ಒಂದು ಮತ್ತು ಇದಕ್ಕೆ ಪೂರಕವಾದ ಇತರ ಮೂರು ಸುಗ್ರೀವಾಜ್ಞೆಗಳು ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ. ಅವುಗಳನ್ನು ವಾಪಸ್‌ ಪಡೆಯಲು ಒಗ್ಗಟ್ಟಿನ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಹೇಳಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಎಐಯುಟಿಯುಸಿ ಜಿಲ್ಲಾ ಘಟಕದ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್‌ ಕೆರಗೋಡು, ಹಿಂದ್‌ ಮಜ್ದೂರ್ ಕಿಸಾನ್ ಸಂಘಟನೆಯ ಕಾಳಪ್ಪ, ಸಿಪಿಎಂ ಮುಖಂಡ ಯಶವಂತ್, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಯಶೋದಾ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.