ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ವೇರ್‌ ರಫ್ತು ಹೆಚ್ಚಳಕ್ಕೆ ಕ್ರಮ

28 ‘ಉತ್ಕೃಷ್ಟ ಕೇಂದ್ರಗಳ’ ಸ್ಥಾಪನೆ: ಓಂಕಾರ್‌ ರಾಯ್
Last Updated 19 ಡಿಸೆಂಬರ್ 2019, 9:23 IST
ಅಕ್ಷರ ಗಾತ್ರ

ಮೈಸೂರು: ಸಾಫ್ಟ್‌ವೇರ್‌ ರಫ್ತು ಪ್ರಮಾಣ ಹೆಚ್ಚಿಸಲು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್‌ ಆಫ್‌ ಇಂಡಿಯಾ (ಎಸ್‌ಟಿಪಿಐ) ಹಲವು ವಿನೂತನ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಎಸ್‌ಟಿಪಿಐ ಮಹಾನಿರ್ದೇಶಕ ಡಾ.ಓಂಕಾರ್‌ ರಾಯ್ ತಿಳಿಸಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಮೈಸೂರು ವಿಭಾಗದ ವತಿಯಿಂದ ಬುಧವಾರ ಅಯೋಜಿಸಿದ್ದ ‘ಸೈಬರ್‌ ಸುರಕ್ಷತೆ ಮತ್ತು ಇಂಟರ್‌ನೆಟ್‌ ಆಫ್‌ ಥಿಂಗ್ಸ್ (ಐಒಟಿ)’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ (ಐಟಿ) ವಿಸ್ತರಣೆ ಮತ್ತು ಸೈಬರ್‌ ಸುರಕ್ಷತೆಯ ಬಗ್ಗೆ ಇನ್ನಷ್ಟು ಅಧ್ಯಯನಕ್ಕೆ ಎಸ್‌ಟಿಪಿಐ ದೇಶದಾದ್ಯಂತ 28 ಉತ್ಕೃಷ್ಟ ಕೇಂದ್ರಗಳನ್ನು (ಸೆಂಟರ್‌ ಆಫ್‌ ಎಕ್ಸಲೆನ್ಸ್) ತೆರೆಯಲು ಮುಂದಾಗಿದೆ. ಇದರಲ್ಲಿ ಐದು ಕೇಂದ್ರಗಳು ಈಗಾಗಲೇ ಆರಂಭವಾಗಿವೆ. ಈ ಕೇಂದ್ರಗಳ ನೆರವಿನಿಂದ ಸಾಫ್ಟ್‌ವೇರ್‌ ರಫ್ತು ಪ್ರಮಾಣ ಹೆಚ್ಚಿಸಲಾಗುವುದು ಎಂದು ಹೇಳಿದರು.

‘ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಸ್ತರಣೆಗೆ ವಿಪುಲ ಅವಕಾಶಗಳಿವೆ. ಸಣ್ಣ ನಗರಗಳಸಂಪನ್ಮೂಲಗಳನ್ನು ಬಳಸಿಕೊಳ್ಳುವುದು ನಮ್ಮ ಉದ್ದೇಶ. ಐಟಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧೆಡೆ 2000 ಸ್ಟಾರ್ಟ್‌ಅಪ್‌ಗಳನ್ನು ಆರಂಭಿಸುವ ಚಿಂತನೆ ಇದೆ’ ಎಂದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ‘ಸೈಬರ್‌ ಸುರಕ್ಷತೆ’ಯೂ ಒಂದು. ಸೈಬರ್ ಸುರಕ್ಷತೆ ವಿಷಯದಲ್ಲಿ ನಾವು ಹಿಂದೆ ಬೀಳದಂತೆ ಎಚ್ಚರವಹಿಸಬೇಕಿದೆ. ಸೈಬರ್‌ ಸುರಕ್ಷತೆ ಖಾತರಿಪಡಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ವಿವಿಧ ರಾಜ್ಯ ಸರ್ಕಾರಗಳ ಜತೆ ಕೈಜೋಡಿಸಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಸುಮಾರು 40 ಲಕ್ಷ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಈ ಕ್ಷೇತ್ರದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಮೈಸೂರು ವಿಭಾಗದ ಅಧ್ಯಕ್ಷ ಭಾಸ್ಕರ್‌ ಕಳಲೆ ಮಾತನಾಡಿ, ದೇಶದ ಒಟ್ಟು ಆರ್ಥಿಕತೆಯಲ್ಲಿ ಡಿಜಿಟಲ್ ಆರ್ಥಿಕತೆಯ ಪಾಲು ಶೇ 14 ರಿಂದ 15ರಷ್ಟು ಇದೆ. 2024ರ ವೇಳೆಗೆ ಇದರ ಪಾಲು ಶೇ 20 ರಿಂದ 22 ರಷ್ಟು ಹೆಚ್ಚುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಐಟಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಸ್‌ಟಿಪಿಐ ವತಿಯಿಂದ ಸಾಫ್ಟ್‌ವೇರ್‌ ಇಂಡಸ್ಟ್ರಿಯಲ್‌ ಪಾರ್ಕ್‌ ನಿರ್ಮಾಣ ಮಾಡಬೇಕು ಎಂದು ಮನವಿ ಮಾಡಿದರು.

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಮೈಸೂರು ನಗರವನ್ನು ‘ಸೈಬರ್‌ ಸುರಕ್ಷತೆ ಹಬ್‌’ ಆಗಿ ಬೆಳೆಸುವ ನಿಟ್ಟಿನಲ್ಲಿ ಸಿದ್ಧಪಡಿಸಿದ ‘ಶ್ವೇತಪತ್ರ’ವನ್ನು ಅವರು ಬಿಡುಗಡೆಗೊಳಿಸಿದರು.ಸಿಐಐ ಮೈಸೂರು ಐ.ಟಿ ವಿಭಾಗದ ಸಂಯೋಜಕ ಕೆ.ಎಸ್‌.ಶಂಕರ್‌ ಪ್ರಸಾದ್, ಥಿಯೊರೆಮ್‌ ಇಂಕ್ ಸಂಸ್ಥೆಯ ರಾಘವ ಲಿಂಗೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT