ಶನಿವಾರ, ಏಪ್ರಿಲ್ 1, 2023
23 °C
ಸಿದ್ದರಾಮಯ್ಯ ನೇತೃತ್ವದಲ್ಲಿ ನಾಲ್ಕು ಜಿಲ್ಲೆಗಳ ಪ್ರಮುಖರ ಸಭೆ

ದಕ್ಷಿಣ ಪದವೀಧರ ಕ್ಷೇತ್ರ ಗೆಲ್ಲಲು ತಂತ್ರ: ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ಗೆಲುವು ಪಡೆಯಲೇಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್‌, ಇನ್ನೂ ಒಂದು ವರ್ಷ ಇರುವಾಗಲೇ ಸಿದ್ಧತೆ ಆರಂಭಿಸಿದೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಮೈಸೂರು, ಮಂಡ್ಯ, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಕಾಂಗ್ರೆಸ್‌ ಅಧ್ಯಕ್ಷರು, ಹಾಲಿ ಮತ್ತು ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳ ಸಭೆ ನಡೆಯಿತು.

‘ಜೆಡಿಎಸ್‌ ಮತ್ತು ಬಿಜೆಪಿಗೆ ಪೈಪೋಟಿ ನೀಡಿ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಅನುಸರಿಸಬೇಕಾದ ತಂತ್ರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು. ಅಭ್ಯರ್ಥಿ ಸ್ಥಾನಕ್ಕೆ ಹಲವು ಆಕಾಂಕ್ಷಿಗಳಿದ್ದು, ಮೂವರ ಹೆಸರನ್ನು ಅಂತಿಮಗೊಳಿಸಿ ಕೆ‍ಪಿಸಿಸಿ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಲು ತೀರ್ಮಾನಿಸಲಾಯಿತು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ತಿಳಿಸಿದರು.

‘ಮಾಜಿ ಸಂಸದರಾಗಿರುವ ಮಂಡ್ಯದ ಜಿ.ಮಾದೇಗೌಡ ಅವರ ಪುತ್ರ ಮಧು ಮಾದೇಗೌಡ, ಮುಖಂಡ ಬನ್ನೂರು ಕೃಷ್ಣಪ್ಪ ಅವರ ಪುತ್ರ ರವಿ ಕೃಷ್ಣಪ್ಪ ಮತ್ತು ಕೆಪಿಸಿಸಿ ವೈದ್ಯ ಘಟಕದ ಕಾರ್ಯದರ್ಶಿ ಡಾ.ಭರತ್ ಅವರ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಿದ್ದು, ಈ ಮೂವರ ಪೈಕಿ ಒಬ್ಬರ ಹೆಸರನ್ನು ಇನ್ನೊಂದು ತಿಂಗಳ ಒಳಗೆ ಘೋಷಣೆ ಮಾಡುವಂತೆ ಕೋರಲಾಗುತ್ತದೆ’ ಎಂದು ಹೇಳಿದರು.

ಚುನಾವಣೆಗೆ ಸಾಕಷ್ಟು ಸಮಯ ಇದ್ದಾಗಲೇ ಅಭ್ಯರ್ಥಿಯನ್ನು ಪ್ರಕಟಿಸಿದರೆ ಅವರಿಗೆ ಪ್ರಚಾರ ನಡೆಸಲು ಅನುಕೂಲವಾಗುತ್ತದೆ.  ಕಳೆದ ಸಲ ಈ ಚುನಾವಣೆಯನ್ನು ಕಡೆಗಣಿಸಿದ್ದರಿಂದ ಸೋಲು ಎದುರಾಗಿತ್ತು. ಈ ಬಾರಿ ಗಂಭೀರವಾಗಿ ತೆಗೆದುಕೊಂಡು ಗೆಲ್ಲಲೇಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್.ನರೇಂದ್ರ, ಸಿ.ಅನಿಲ್‌ಕುಮಾರ್, ಎಚ್.ಪಿ.ಮಂಜು ನಾಥ್, ಮುಖಂಡರಾದ ಡಾ.ಎಚ್.ಸಿ.ಮಹದೇವಪ್ಪ, ಬಿ.ರಮಾನಾಥ ರೈ, ಚೆಲುವರಾಯಸ್ವಾಮಿ, ಪಿ.ಮರಿಸ್ವಾಮಿ, ಎಚ್‌.ಎ.ವೆಂಕಟೇಶ್, ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್ ಸಭೆಯಲ್ಲಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು