ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣದವರ ಸಮಾನತೆ ಎಲ್ಲೆಡೆ ಪಸರಿಸಲಿ: ರಾಜ್‌ಮೋಹನ್ ಗಾಂಧಿ

ಸುಚೇತನ ಸ್ವರೂಪ ಕೃತಿಗಳ ಬಿಡುಗಡೆ ಸಮಾರಂಭ
Last Updated 21 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ‘ಉತ್ತರ ಭಾರತಕ್ಕೆ ಹೋಲಿಸಿದಾಗ, ದಕ್ಷಿಣ ಭಾರತದಲ್ಲೇ ಸಮಾನತೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇದು ಭಾರತಕ್ಕೇ ವ್ಯಾಪಿಸಬೇಕಿದೆ’ ಎಂದು ಮಹಾತ್ಮ ಗಾಂಧೀಜಿ ಮೊಮ್ಮಗ ರಾಜಮೋಹನ್ ಗಾಂಧಿ ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಶನಿವಾರ ಸುಚೇತನ ಸ್ವರೂಪ ಅವರ ನಾಲ್ಕು ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಉತ್ತರ ಭಾರತದವರಿಗೆ ದಕ್ಷಿಣ ಭಾರತದ ಬಗ್ಗೆ ಗೊತ್ತಿಲ್ಲ. ದಕ್ಷಿಣದವರಿಗೆ ತಮ್ಮ ನೆರೆಹೊರೆಯವರ ಬಗ್ಗೆಯೇ ತಿಳಿದಿಲ್ಲ’ ಎಂದು ಹೇಳಿದರು.

‘ಭಾರತ ಇದೀಗ ತಪ್ಪು ಹಾದಿಯ ಪಯಣದಲ್ಲಿದೆ. ಸಮಾನತೆ ಬದಿಗೊತ್ತಿ ಸರ್ವಾಧಿಕಾರವೇ ಉತ್ತಮ ಎನ್ನುವ ಮನಸ್ಥಿತಿ ನಿರ್ಮಾಣಗೊಳ್ಳುತ್ತಿರುವ ಹೊತ್ತಲ್ಲಿ ಹೆಚ್ಚೆಚ್ಚು ಭಾಷೆ ತಿಳಿಯಬೇಕಿದೆ. ದಕ್ಷಿಣದ ಸಮಾನತೆ ಕಾಪಾಡಿಕೊಳ್ಳಲು ಈ ಭಾಗದ ಎಲ್ಲ ರಾಜ್ಯಗಳು ಒಗ್ಗೂಡಬೇಕಿದೆ’ ಎಂದು ತಿಳಿಸಿದರು.

‘ಎಲ್ಲಿ ನೋಡಿದರೂ ದೇಶದಲ್ಲೀಗ ಕಡ್ಡಾಯ, ಬಲವಂತದ ಹೇರಿಕೆಯೇ ನಡೆದಿದೆ. ಪ್ರಾಬಲ್ಯಕ್ಕೆ ಮನ್ನಣೆ ಹೆಚ್ಚಿದೆ. ಸಮಾನತೆ ಕಣ್ಮರೆಯಾಗುತ್ತಿದೆ. ಮತ್ತೊಬ್ಬರನ್ನು ಗೌರವಿಸುವ ಸಂಸ್ಕಾರವೂ ಕ್ಷೀಣಿಸುತ್ತಿದೆ’ ಎಂದು ರಾಜಮೋಹನ್‌ ಗಾಂಧಿ ಬೇಸರ ವ್ಯಕ್ತಪಡಿಸಿದರು.

‘ಜಗತ್ತಿನ ಜ್ಞಾನ, ಸಂಸ್ಕೃತಿ ಅರಿತುಕೊಳ್ಳಬೇಕಾದ ಅವಶ್ಯಕತೆ ಇಂದು ಹೆಚ್ಚಿದೆ. ಇದಕ್ಕಾಗಿ ವಿವಿಧ ದೇಶಗಳ ಸಾಹಿತ್ಯ ಓದಬೇಕು. ಇದು ಆ ದೇಶಗಳ ಸಂಸ್ಕೃತಿಯನ್ನು ತಿಳಿಸಲಿದೆ. ಭಾಷೆಗಳು ಹೆಚ್ಚೆಚ್ಚು ಅರ್ಥವಾದಂತೆ ಜಗತ್ತಿನ ಜ್ಞಾನವೂ ತಿಳಿಯಲಿದೆ’ ಎಂದು ಹೇಳಿದರು.

ಭಾಷಾ ತಜ್ಞ ಡಾ.ಪಿ.ಪಿ.ಗಿರಿಧರ ಮಾತನಾಡಿ, ‘ಕೆಲ ಭಾಷಾತಜ್ಞರು ಅನುವಾದ ಮಾಡುವುದು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಯಾವ ಭಾಷೆಯಿಂದ ಯಾವ ಭಾಷೆಗೆ ಬೇಕಾದರೂ ಅನುವಾದ ಮಾಡಬಹುದು. ಅನುವಾದಕರು ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಅನುವಾದ ಮಾಡಬೇಕು. ಕೆಲವೊಂದು ಭಾಷೆಯ ನುಡಿಗಟ್ಟುಗಳು, ಗಾದೆಗಳನ್ನು ಅನುವಾದ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಉಚ್ಚಾರಣೆಯ ಆಧಾರದ ಮೇಲೆ ರೂಪಿತವಾಗಿರುತ್ತದೆ. ಆದರೆ ಮಿಕ್ಕೆಲ್ಲವನ್ನೂ ಅನುವಾದ ಮಾಡಬಹುದು’ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ..ಜಿ.ಹೇಮಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕ ಪ್ರೊ.ಸಿ.ನಾಗಣ್ಣ ಕೃತಿಗಳ ಕುರಿತು ಮಾತನಾಡಿದರು. ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಎನ್.ಎಸ್.ರಾಘವನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನೀಲಗಿರಿ ತಳವಾರ, ಲೇಖಕ, ಪತ್ರಕರ್ತ ಡಾ.ಸುಚೇತನ ಸ್ವರೂಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT