ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಮೆರೆಯಿರಿ; ಸುಧಾಕರ್‌

ಸರ್ಕಾರಿ–ಖಾಸಗಿ ವೈದ್ಯರಿಗೆ ಮನವಿ ಮಾಡಿದ ಆರೋಗ್ಯ ಸಚಿವ
Last Updated 7 ಮಾರ್ಚ್ 2022, 15:32 IST
ಅಕ್ಷರ ಗಾತ್ರ

ಮೈಸೂರು:‌ ‘ರೋಗಿಗಳಿಗೆ ದುಬಾರಿ ಬೆಲೆಯ ಬ್ರ್ಯಾಂಡೆಡ್‌ ಕಂಪನಿಗಳ ಔಷಧಿ ಬರೆದುಕೊಡಬೇಡಿ. ರಾಸಾಯನಿಕ ಸಂಯೋಜನೆಯಷ್ಟನ್ನೇ ಬರೆಯಿರಿ. ಖರೀದಿಸುವ ಶಕ್ತಿಯಿಲ್ಲದ ಬಡವರು ಜನೌಷಧಿ ಕೇಂದ್ರಗಳಲ್ಲಿ ಈ ಔಷಧಿ ತೆಗೆದುಕೊಳ್ಳಲು ಅನುಕೂಲವಾಗಲಿದೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಸರ್ಕಾರಿ ಹಾಗೂ ಖಾಸಗಿ ವೈದ್ಯರಿಗೆ ಸೋಮವಾರ ಇಲ್ಲಿ ಮನವಿ ಮಾಡಿದರು.

ನಗರದ ಸದರ್ನ್‌ ಹೋಟೆಲ್‌ನಲ್ಲಿ ನಡೆದ ಜನೌಷಧಿ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚುವಲ್‌ ಸಂವಾದಕ್ಕೆ ಮೊದಲು ಫಲಾನುಭವಿಗಳು ಹಾಗೂ ಕೇಂದ್ರಗಳ ಮಾಲೀಕರನ್ನುದ್ದೇಶಿಸಿ ಮಾತನಾಡಿದ ಸಚಿವರು ‘ಮಾನವೀಯತೆ ಮೆರೆಯಿರಿ’ ಎಂದು ವೈದ್ಯ ಸಮೂಹಕ್ಕೆ ಕಿವಿಮಾತು ಹೇಳಿದರು.

‘ನಮ್ಮ ಸಮಾಜ ವೈದ್ಯರನ್ನು ದೈವೀ ಸ್ವರೂಪವಾಗಿ ಕಾಣುತ್ತಿದೆ. ಜನರು ನೀಡುವ ಗೌರವ ಉಳಿಸಿಕೊಳ್ಳಲಿಕ್ಕಾಗಿಯಾದರೂ ಔಷಧಿಯ ಬ್ರ್ಯಾಂಡ್‌ ಹೆಸರು ಬರೆಯದೆ; ರಾಸಾಯನಿಕ ಸಂಯೋಜನೆ ಬರೆದುಕೊಡಿ’ ಎಂದು ಪುನರುಚ್ಚರಿಸಿದರು.

‘ಬ್ರ್ಯಾಂಡೆಡ್‌ ಕಂಪನಿಗಳ ಔಷಧಿ ದರಕ್ಕಿಂತ ಜನೌಷಧಿ ಕೇಂದ್ರಗಳಲ್ಲಿ ದೊರೆಯುವ ಔಷಧಿಗಳ ಬೆಲೆ ಶೇ 40ರಿಂದ ಶೇ 80 ಕಡಿಮೆಯಿರಲಿದೆ. ಗುಣಮಟ್ಟದಲ್ಲಿ ರಾಜಿಯಿಲ್ಲ. ಪ್ರತಿ ಔಷಧಿಯೂ ಪರೀಕ್ಷೆಗೊಳಪಟ್ಟ ಬಳಿಕವೇ ಮಾರಾಟಕ್ಕೆ ಲಭ್ಯವಾಗೋದು. ನಿಗದಿತ ಮಾನದಂಡದಲ್ಲೇ ತಯಾರಾಗಿರುತ್ತೆ’ ಎಂದು ಹೇಳಿದರು.

‘ಈ ಹಿಂದಿನ 68 ವರ್ಷಗಳಲ್ಲಿ ಯಾರಿಗೂ ಔಷಧಿಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಲೋಚನೆ ಬಂದಿರಲಿಲ್ಲ ಎಂಬುದೇ ಸೋಜಿಗದ ಸಂಗತಿ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಸೂಕ್ಷ್ಮ ವಿಚಾರದ ಬಗ್ಗೆ ಚಿಂತಿಸಿ, ಬದ್ಧತೆಯಿಂದ ಜನೌಷಧಿ ಯೋಜನೆ ಬಲಗೊಳಿಸಿದರು’ ಎಂದರು.

‘ಪ್ರಸ್ತುತ ದೇಶದಲ್ಲಿ 8 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳಿವೆ. ರಾಜ್ಯದಲ್ಲಿ 952 ಕೇಂದ್ರಗಳಿದ್ದು, ಉಪ ಆರೋಗ್ಯ ಕೇಂದ್ರದಲ್ಲೂ ಜನೌಷಧಿ ಕೇಂದ್ರ ಆರಂಭಿಸುವ ಆಲೋಚನೆಯಿದೆ’ ಎಂದು ಸುಧಾಕರ್‌ ಹೇಳಿದರು.

ಶಾಸಕರಾದ ಎಸ್‌.ಎ.ರಾಮದಾಸ್‌, ಎಲ್‌.ನಾಗೇಂದ್ರ, ಪಾಲಿಕೆ ಮೇಯರ್‌ ಸುನಂದಾ ಫಾಲನೇತ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಅಪ್ಪಣ್ಣ ಉಪಸ್ಥಿತರಿದ್ದರು.

ಹಣದ ಕೊರತೆ ಕಾಡದಿರಲಿ; ಖೂಬಾ

‘ಆರೋಗ್ಯ ಕಾಪಾಡಿಕೊಳ್ಳಲು ಔಷಧಿ ಖರೀದಿಗಾಗಿ ಯಾರೊಬ್ಬರಿಗೂ ಹಣದ ಕೊರತೆ ಕಾಡಬಾರದು ಎಂಬ ಚಿಂತನೆಯಿಂದ ಕೇಂದ್ರ ಸರ್ಕಾರ ಆರು ವರ್ಷದಲ್ಲಿ ಜನೌಷಧಿ ಕೇಂದ್ರಗಳನ್ನು ಬಲವರ್ಧನೆಗೊಳಿಸಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ರಾಜ್ಯ ಖಾತೆ ಸಚಿವರಾದ ಭಗವಂತ ಖೂಬಾ ತಿಳಿಸಿದರು.

‘ಬಡವರ ಸುಲಿಗೆ ಆಗಬಾರದು. ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಹೊರೆ ತಗ್ಗಿಸಲಿಕ್ಕಾಗಿ ಮಾರ್ಚ್‌ 1ರಿಂದ 7ರವರೆಗೆ ದೇಶದಾದ್ಯಂತ ಜನೌಷಧಿ ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಪ್ರಚಾರ ನಡೆಸಲಾಗಿದೆ’ ಎಂದು ಹೇಳಿದರು.

‘ಜನೌಷಧಿ ಕೇಂದ್ರಗಳಲ್ಲಿ ಹಲವು ರೋಗಕ್ಕೆ 1451 ಔಷಧಿ ಸಿಗುತ್ತವೆ. 240 ಶಸ್ತ್ರಚಿಕಿತ್ಸೆ ಉಪಕರಣಗಳು ಲಭ್ಯವಿವೆ. ಬಡವರು, ಮಧ್ಯಮ ವರ್ಗದವರು ಇದರ ಪ್ರಯೋಜನ ಪಡೆದುಕೊಳ್ಳಲು ಮುಂದಾಗಬೇಕು’ ಎಂದು ಖೂಬಾ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT