ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸಿಗೆ ಸಂಖ್ಯೆ ಹೆಚ್ಚಿಸಲು ಸೂಚನೆ

ಕೋವಿಡ್‌ ಸಭೆ: ಪರೀಕ್ಷೆ ಪ್ರಕ್ರಿಯೆ ತ್ವರಿತಗೊಳಿಸಿ– ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌
Last Updated 13 ಅಕ್ಟೋಬರ್ 2020, 4:50 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್-19 ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಂಖ್ಯೆಯನ್ನು ಹೆಚ್ಚಿಸಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೋಮವಾರ ಇಲ್ಲಿ ಸೂಚನೆ ನೀಡಿದರು.

ಮೈಸೂರು ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲೆಯ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ 600ರಿಂದ 800 ಹಾಸಿಗೆ ಸಾಮರ್ಥ್ಯ ಹೆಚ್ಚಿಸಬಹುದು. ಹಾಗೆಯೇ, ಜಿಲ್ಲೆಯಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ಯಾವುದೇ ಕಾರಣಕ್ಕೆ ಹಾಸಿಗೆ ಕೊರತೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ತಾಕೀತು ಮಾಡಿದರು.

ಕೋವಿಡ್‌ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳೊಂದಿಗೆ ಅಗತ್ಯ ವೈದ್ಯಕೀಯ ಸಲಕರಣೆ ಅಳವಡಿಸಿ ಚಿಕಿತ್ಸೆ ಪ್ರಮಾಣ ಹೆಚ್ಚಿಸಬೇಕು. ಸೋಂಕು ದೃಢಪಟ್ಟ ವ್ಯಕ್ತಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರಾಗುವಂತೆ ಮಾಡಲು ಪ್ರಯತ್ನಿಸಬೇಕು ಎಂದರು.

ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲೆಯಲ್ಲಿ ಈಗಾಗಲೇ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಅದರಂತೆ ಪರೀಕ್ಷೆ ವರದಿಯನ್ನು ತ್ವರಿತವಾಗಿ ನೀಡಲು ಪ್ರಯೋಗಾಲಯಗಳ ಸಂಖ್ಯೆಯನ್ನೂ ಹೆಚ್ಚಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್‌, ಸಿಬ್ಬಂದಿ ಕೊರತೆ ಉಂಟಾಗಬಾರದು. ಅಗತ್ಯ ಸಿಬ್ಬಂದಿ ಒದಗಿಸಲು ಇಲಾಖೆ ಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾವಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಪ್ರತಿ ದಿನದ ವರದಿಯನ್ನು ನೀಡಬೇಕು. ಆಸ್ಪತ್ರೆಗಳಲ್ಲಿ ಯಾವುದೇ ಸಂದರ್ಭದಲ್ಲಿ ಔಷಧಿಗೆ ಅಭಾವ ಉಂಟಾಗದಂತೆ ಎಚ್ಚರ ವಹಿಸಬೇಕು. ಹೋಂ ಐಸೊಲೇಷನ್‍ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳ ಮೇಲೆ ನಿಗಾ ಇಡಬೇಕು. ಅಗತ್ಯವಿದ್ದರೆ ಕೂಡಲೇ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಬೇಕು. ಈ ಸಂಬಂಧ ನೋಡೆಲ್ ಅಧಿಕಾರಿಗಳು ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.

ಯಾರಿಗೆ ಸೋಂಕು ಹರಡಿದರೂ ಅವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು 48 ಗಂಟೆಯೊಳಗೆ ಪತ್ತೆ ಹಚ್ಚುವ ಕೆಲಸ ಮಾಡಬೇಕು. ಪರೀಕ್ಷೆ ನಡೆಸಬೇಕು. ಆಗ ಸಾವಿನ ಪ್ರಮಾಣ ತಗ್ಗಿಸಲು ಪ್ರಯತ್ನಿಸಬಹುದು ಎಂದುಸಲಹೆ ನೀಡಿದರು.

ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಜಾವೇದ್ ಅಕ್ತರ್, ರಾಜ್ಯ ಕೋವಿಡ್ ವಾರ್‌ ರೂಮ್‌ ಉಸ್ತುವಾರಿ ಮನೀಶ್ ಮೌದ್ಗಿಲ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಜಿಲ್ಲಾ ಪಂಚಾಯಿತಿ ಸಿಇಒ ಡಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥ್ ಸ್ವಾಮಿ ಮೊದಲಾದವರು ಇದ್ದರು.

ಶೇ 50 ಹಾಸಿಗೆ ನೀಡಲು ಒಪ್ಪಿಗೆ

ಜಿಲ್ಲಾಡಳಿತ ಶಿಫಾರಸು ಮಾಡುವ ವ್ಯಕ್ತಿಗಳಿಗೆ ಕೋವಿಡ್‌ ಚಿಕಿತ್ಸೆಗಾಗಿ ಶೇ 50 ರಷ್ಟು ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆಗಳ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಕೋವಿಡ್‌ ನಿಯಂತ್ರಣ ವಿಚಾರವಾಗಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.

ಕೋವಿಡ್‌ ಬಾಧಿತರಿಗೆ ಏಕಗವಾಕ್ಷಿ ಪದ್ಧತಿ ಮೂಲಕ ಹಾಸಿಗೆ ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗುವುದು ಎಂದು ವಿವರಿಸಿದರು. ಸದ್ಯ ಒಟ್ಟು 3,610 ಹಾಸಿಗೆಗಳು ಇವೆ. ಇವುಗಳಲ್ಲಿಜಿಲ್ಲಾಡಳಿತಕ್ಕೆ1,130 ಹಾಸಿಗೆಗಳು ಸಿಗಲಿವೆ. ಅಲ್ಲದೇ, ಪ್ರತಿ ದಿನ 3 ಸಾವಿರ ಪರೀಕ್ಷೆ ಮಾಡಲು ಸೂಚಿಸಲಾಗಿದೆ.

ಮೈಸೂರಲ್ಲಿ ಡೆತ್‌ ಆಡಿಟ್‌

ದಸರೆಯನ್ನು ಬಹಳಷ್ಟು ಸರಳವಾಗಿ ಆಚರಿಸಬೇಕು. ದಸರೆಯಿಂದ ಯಾವುದೇ ಕಾರಣಕ್ಕೆ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಬಾರದು. ಹೀಗಾಗಿ, ಮಾರ್ಗಸೂಚಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಡಾ.ಸುಧಾಕರ್‌ ಹೇಳಿದರು.

ದೇಶದಲ್ಲಿ ಶೇ 80ರಿಂದ 90ರಷ್ಟು ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದಾರೆ. ಆದರೆ, ಮೈಸೂರಿನಲ್ಲಿ ಮಾತ್ರ ವಾರದಿಂದ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಹೀಗಾಗಿ, ಡೆತ್‌ ಆಡಿಟ್‌ ಮಾಡುತ್ತಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT