ಶುಕ್ರವಾರ, ನವೆಂಬರ್ 27, 2020
19 °C
ತಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಜಯರಾಮೇಗೌಡ ಸೂಚನೆ

ಗ್ರಾಮೀಣಕ್ಕೆ ಪೂರ್ಣ ಪ್ರಮಾಣ ಬಸ್‌ ಓಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ನಗರ: ತಾಲ್ಲೂಕಿನಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣದಲ್ಲಿದ್ದು, ಗ್ರಾಮೀಣ ಪ್ರದೇಶಗಳಿಗೆ ಪೂರ್ಣ ಪ್ರಮಾಣದ ಬಸ್ ಸೌಕರ್ಯ ಒದಗಿಸುವಂತೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯರಾಮೇಗೌಡ ಅವರು ಕೆಎಸ್ಆರ್‌ಟಿಸಿ ಅಧಿಕಾರಿಗೆ ಸೂಚಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಖಗವಸು ಧರಿಸದೇ ಹಲವರು ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ, ವೃದ್ಧರೂ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ ಅವರು, ಮುಖಗವಸು ಧರಿಸಿದವರಿಗೆ ಮಾತ್ರ ಬಸ್ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.

‘ಪ್ರಸಕ್ತ ಸಾಲಿನಲ್ಲಿ ಸರ್ಕಾರ ಕುರಿ- ದನಗಳಿಗೆ ವಿಮಾ ಸೌಲಭ್ಯ ರದ್ದುಗೊಳಿಸಿದೆ. ಇದರಿಂದ ಹಲವು ರೈತರಿಗೆ ತೊಂದರೆಯಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ’ ಎಂದು ಪಶು ವೈದ್ಯಾಧಿಕಾರಿಯನ್ನು ಅಧ್ಯಕ್ಷ ಜಯರಾಮೇಗೌಡ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿ, ‘ಅನುದಾನ ಕೊರತೆಯಿಂದ ವಿಮಾ ಸೌಲಭ್ಯ ಸರ್ಕಾರ ಸ್ಥಗಿತಗೊಳಿಸಿದೆ. ಕೆಲ ಖಾಸಗಿ ಕಂಪನಿಗಳ ವಿಮೆ ಜಾರಿಯಲ್ಲಿವೆ. ಆದರೂ ಅವು ರೈತರಿಗೆ ದುಬಾರಿಯಾಗುತ್ತದೆ’ ಎಂದು ಹೇಳಿದರು.

‘ಕಾರ್ಮಿಕ ಇಲಾಖೆ ಅಧಿಕಾರಿ ಯಾವುದೇ ಮಾಹಿತಿ ನೀಡದೇ ಸಭೆಗೆ ಗೈರು ಹಾಜರಾಗಿದ್ದು, ಅವರಿಗೆ ನೋಟಿಸ್ ಜಾರಿ ಮಾಡುವಂತೆ’ ಇಒ ರಮೇಶ್ ಅವರಿಗೆ ಸೂಚನೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ಆಂಜನೇಯ ಬ್ಲಾಕ್‌ನ ವಸತಿ ನಿಲಯದಲ್ಲಿ ನಿರ್ಮಿಸಲಾದ ಧ್ವಜ ಕಂಬ 6 ಎಂ.ಎಂ ಗಾತ್ರದಿದ್ದು, ಅದರ ಗಾತ್ರ 12 ಎಂ.ಎಂ ನಷ್ಟಿರಬೇಕು, ಆದರೆ ಅಲ್ಲಿ ಧ್ವಜಾರೋಹಣಕ್ಕಾಗಿ ಬಾವುಟ ಕಟ್ಟಲು ಧ್ವಜದ ಕಂಬ ಹತ್ತಿ ಇಳಿಯಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಏನಾದರೂ ತೊಂದರೆಯಾದರೆ ಯಾರು ಹೊಣೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಅವರನ್ನು ಪ್ರಶ್ನಿಸಿದರು.

ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ರಮೇಶ್, ‘ರೈತರಿಂದ ನರೇಗಾ ಯೋಜನೆಯಡಿ ಕೆಲಸ ಮಾಡಿಸಿದ ಸಾಮಾಜಿಕ ಅರಣ್ಯ ಇಲಾಖೆ ರೈತರಿಗೆ ಈವರೆಗೂ ಬಿಲ್ ಪಾವತಿಸಿಲ್ಲ. ಅಲ್ಲದೇ ಕೇವಲ 42 ಜನರಿಂದ ಕೆಲಸ ಮಾಡಿಸಲಾಗಿದೆ. ಇದು ಸಾಲದು, ಇನ್ನೂ ಹೆಚ್ಚಿನ ಮಟ್ಟದ ಕೆಲಸ ಮಾಡುವ ಅಗತ್ಯವಿದೆ’ ಎಂದು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.  ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ಕುಮಾರ್ ಸೇರಿದಂತೆ ಅಧಿಕಾರಿಗಳು ಇದ್ದರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.