ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದುಗೆಗಾಗಿ ತೆರೆಮರೆಯಲ್ಲಿ ಕಸರತ್ತು

ಹುಣಸೂರು ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟ
Last Updated 13 ಅಕ್ಟೋಬರ್ 2020, 4:45 IST
ಅಕ್ಷರ ಗಾತ್ರ

ಹುಣಸೂರು: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗದ್ದುಗೆ ಏರುವವರಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ನಗರಸಭೆ ಸದಸ್ಯರಾಗಿ ಆಯ್ಕೆಗೊಂಡು 8 ತಿಂಗಳು ಕಳೆದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ಪಟ್ಟಿ ಪ್ರಕಟವಾಗದೆ ಬೇಸತ್ತಿದ್ದ ಸದಸ್ಯರಲ್ಲ ಈಗ ಅಧಿಕಾರಕ್ಕಾಗಿ ರಾಜಕೀಯ ಚದುರಂಗದಾಟ ಶುರುವಾಗಿದ್ದು ಗದ್ದುಗೆ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರ ನಡೆದಿದೆ.

ಬಲಾಬಲ: 31 ಸದಸ್ಯರ ಬಲ ಹೊಂದಿರುವ ನಗರಸಭೆಗೆ ಕಾಂಗ್ರೆಸ್ 14 ಸ್ಥಾನ ಪಡೆದು ದೊಡ್ಡ ಪಕ್ಷವಾಗಿದ್ದು, ಜೆಡಿಎಸ್ (7) ಮತ್ತು ಬಿಜೆಪಿ (3) ಎಸ್.ಡಿ.ಪಿ.ಐ (2) ಮತ್ತು ಪಕ್ಷೇತರರು 5 ಸದಸ್ಯರು ಇದ್ದಾರೆ. ಪಕ್ಷೇತರರ ನಡೆಯೇ ಪ್ರಮುಖವಾಗಿದ್ದರಿಂದ ರಾಜಕೀಯ ಲೆಕ್ಕಾಚಾರದಲ್ಲಿ ಅಳೆದು ಸುರಿಯುವ ಕೆಲಸ ತೆರೆಮರೆಯಲ್ಲಿ ಆರಂಭವಾಗಿದೆ.

ಅಧ್ಯಕ್ಷರ ಸ್ಥಾನವೇರಲು 18 ಸದಸ್ಯರ ಸರಳ ಬಹುಮತ ಅಗತ್ಯವಿದ್ದು, ಕಾಂಗ್ರೆಸ್ 14 ಸದಸ್ಯರೊಂದಿಗೆ ಶಾಸಕರ ಮತ ಸೇರಿ 15 ಸದಸ್ಯರ ಬಲಹೊಂದಿದೆ. ಬಿಜೆಪಿ 3 ಸದಸ್ಯರೊಂದಿಗೆ ಸಂಸದ ಮತ್ತು ವಿಧಾನ ಪರಿಷತ್ ಸದಸ್ಯರ ಮತ ಸೇರಿ 5 ಸದಸ್ಯ ಬಲ ಹೊಂದಿದ್ದು, ಜೆಡಿಎಸ್ 7 ಸ್ಥಾನ ಮತ್ತು ಪಕ್ಷೇತರರು 5 ಸದಸ್ಯರಿದ್ದು ಈ ಪೈಕಿ ಯಾರು ಯಾರ ಪಾಲಾಗುವರು ಕಾದು ನೋಡಬೇಕಾಗಿದೆ.

ಕಸರತ್ತು: ಜೆಡಿಎಸ್ ಮುಖಂಡ ದೇವರಹಳ್ಳಿ ಸೋಮಶೇಖರ್ ಮಾತನಾಡಿ, ಅಧಿಕಾರದ ಗದ್ದುಗೆ ಏರಲು ಬಿಜೆಪಿ ಮತ್ತು ಪಕ್ಷೇತರರೊಂದಿಗೆ ಮಾತುಕತೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ಅಧ್ಯಕ್ಷರ ಪಟ್ಟಕ್ಕೆ ಲಗ್ಗೆ ಹಾಕುತ್ತೇವೆ. ಉಪಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧೆಗೆ ಇಳಿಯುವುದು ಖಚಿತ ಎನ್ನುವರು.

ಪೈಪೋಟಿ: ಕಾಂಗ್ರೆಸ್ ಪಾಳೆಯದಲ್ಲಿ 8 ಮಹಿಳಾ ಸದಸ್ಯರಿದ್ದು, ಈ ಪೈಕಿ 15ನೇ ವಾರ್ಡ್ ಸದಸ್ಯೆ ಸೌರಭಾ ಸಿದ್ದರಾಜು ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರೊಂದಿಗೆ 3ನೇ ವಾರ್ಡ್ ಸದಸ್ಯೆ ಎಸ್.ಅನುಷಾ, 9ನೇ ವಾರ್ಡ್ ಸದಸ್ಯೆ ಶಮಿನಾ ಪರ್ವಿನ್, 24ರ ಗೀತಾ ನಿಂಗರಾಜ್, 29 ನೇ ವಾರ್ಡ್ ಸದಸ್ಯೆ ಪ್ರಿಯಾಂಕ ಥಾಮಸ್ ರೇಸಿನಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ದೇವ ನಾಯಕ, ಜೆಡಿಎಸ್‌ನ ದೇವರಾಜು, ಪಕ್ಷೇತರ ಸದಸ್ಯೆ ಆಶಾ ಆಕಾಂಕ್ಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT