ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಅಂಬಾರಿಯ ತಾಲೀಮು ಆರಂಭ

ಅಭಿಮನ್ಯು ನೇತೃತ್ವದ ಗಜಪಡೆಯಿಂದ ಜಂಬೂಸವಾರಿಗೆ ಸಿದ್ಧತೆ
Last Updated 18 ಅಕ್ಟೋಬರ್ 2020, 13:27 IST
ಅಕ್ಷರ ಗಾತ್ರ

ಮೈಸೂರು: ಜಂಬೂ ಸವಾರಿಗೆ ದಿನಗಣನೆ ಆರಂಭವಾಗಿದೆ. ದಸರಾ ಉದ್ಘಾಟನೆಗೊಂಡ ಮರು ದಿನವೇ ಅಭಿಮನ್ಯು ನೇತೃತ್ವದ ಗಜಪಡೆಯ ತಾಲೀಮು ಸಹ ಬಿರುಸುಗೊಂಡಿದೆ.

ಅರಮನೆ ಆವರಣದಲ್ಲೇ ಇದೂವರೆಗೂ ಮರಳು ಮೂಟೆಯ ಭಾರ ಹೊತ್ತು ತಾಲೀಮು ನಡೆಸುತ್ತಿದ್ದ ಗಜ ಪಡೆ, ಭಾನುವಾರದಿಂದ ಚಿನ್ನದ ಅಂಬಾರಿಯನ್ನೇ ಹೋಲುವ ಮರದ ಅಂಬಾರಿ ಹೊತ್ತು ಹೆಜ್ಜೆ ಹಾಕಲು ಆರಂಭಿಸಿದೆ.

ವಿಜಯದಶಮಿಯಂದು ನಡೆಯಲಿರುವ ಜಂಬೂ ಸವಾರಿಯಲ್ಲಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತು, ರಾಜ ಗಾಂಭೀರ್ಯದೊಂದಿಗೆ ಸಾಗುವ ಗಜಪಡೆಯನ್ನು ಮುನ್ನಡೆಸುವ ಅಭಿಮನ್ಯು ಆನೆಯ ಮೇಲೆ ಭಾನುವಾರ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು.

280 ಕೆ.ಜಿ. ತೂಕದ ಮರದ ಅಂಬಾರಿಯೊಳಗೆ 320ರಿಂದ 330 ಕೆ.ಜಿ. ತೂಕದ ಮರಳು ಮೂಟೆಗಳನ್ನಿಟ್ಟು, ಮುಕ್ಕಾಲು ತಾಸಿನ ಅವಧಿ ಅರಮನೆ ಆವರಣದೊಳಗೆ ಭಾನುವಾರ ತಾಲೀಮು ನಡೆಸಲಾಯಿತು. ಕುಮ್ಕಿ ಆನೆಗಳಾದ ವಿಜಯ, ಕಾವೇರಿ ಸಾಥ್‌ ನೀಡಿದವು ಎಂದು ಆನೆಗಳ ವೈದ್ಯಕೀಯ ಉಸ್ತುವಾರಿ ನೋಡಿಕೊಳ್ಳುವ ಪಶು ವೈದ್ಯ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಜಂಬೂ ಸವಾರಿಗೆ ಬೆರಳೆಣಿಕೆ ದಿನ ಬಾಕಿ ಉಳಿದಿದೆ. ಸೋಮವಾರದಿಂದ ಅಭಿಮನ್ಯುವಿನ ಮೇಲೆ ಹಾಕುವ ಮರಳು ಮೂಟೆಯ ಭಾರ ಹೆಚ್ಚಿಸಲಾಗುವುದು. ಈ ಬಾರಿ ಅರಮನೆ ಆವರಣದಲ್ಲೇ ಜಂಬೂ ಸವಾರಿ ನಡೆಯುವುದರಿಂದ ಹೆಚ್ಚಿನ ತಾಲೀಮು ನಡೆಸುತ್ತಿಲ್ಲ. ಅಗತ್ಯಕ್ಕನುಗುಣವಾದ ತಾಲೀಮು ನಡೆದಿದೆ. ಗಜಪಡೆಯ ಎಲ್ಲ ಆನೆಗಳು ಆರೋಗ್ಯದಿಂದಿವೆ’ ಎಂದು ಅವರು ಹೇಳಿದರು.

‘ಇದೇ ಮೊದಲ ಬಾರಿಗೆ ಅಭಿಮನ್ಯು ಚಿನ್ನದ ಅಂಬಾರಿ ಹೊರಲಿದೆ. ಈ ಹಿಂದಿನ ಹಲವು ದಸರಾಗಳಲ್ಲಿ ಭಾಗಿಯಾಗಿದ್ದ ಅನುಭವವಿದೆ. ಮರದ ಅಂಬಾರಿಯನ್ನು ಹೊತ್ತು ತಾಲೀಮು ನಡೆಸಿತ್ತು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಕ್ರೇನ್ ಬಳಸಿ ಅಭಿಮನ್ಯುವಿಗೆ ಮರದ ಅಂಬಾರಿ ಕಟ್ಟುವಾಗ ಹಾಗೂ ಅರಮನೆ ಆವರಣದಲ್ಲಿ ಗಜಪಡೆ ತಾಲೀಮು ನಡೆಸುವಾಗ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಹೀರಾಲಾಲ್ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅಲೆಕ್ಸಾಂಡರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT