ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ತೆಪ್ಪದೊಂದಿಗೆ ಮುಳುಗಿತು ಇಬ್ಬರ ಬದುಕು, ಕನಸು

ಈ ಸಾವು ನ್ಯಾಯವೇ?, ಈ ದಡವಾಗಿದ್ದರೆ ಬದುಕುತ್ತಿದ್ದರೇನೋ?– ಪ್ರಶ್ನೆಗಳ ಸುರಿಮಳೆ
Last Updated 10 ನವೆಂಬರ್ 2020, 4:38 IST
ಅಕ್ಷರ ಗಾತ್ರ

ತಲಕಾಡು: ‘ತೆಪ್ಪ ಕೆಲವೇ ಅಡಿಗಳಷ್ಟು ಮುಂದಕ್ಕೆ ಬಂದಿದ್ದರೆ, ಕ್ಯಾಮೆರಾದಲ್ಲಿ ಒಂದೇ ಒಂದು ಕ್ಲಿಕ್‌ ಆಗಿದ್ದರೆ, ಇವರು ಹಸೆಮಣೆ ಏರುತ್ತಿದ್ದರು. ಆದರೆ, ಅಸಂಖ್ಯ ಕನಸುಗಳನ್ನು ಹೊತ್ತ ಈ ನವಜೋಡಿಯನ್ನು ವಿಧಿ ಬದುಕಲು ಬಿಡಲಿಲ್ಲ. ಈ ಸಾವು ನ್ಯಾಯವೇ? ಆ ದಡವಾಗಿದ್ದರೆ ಬದುಕುತ್ತಿದ್ದರೇನೋ...?’ ಹೀಗೆ ಅನೇಕ ಮಾತುಗಳು ಇಲ್ಲಿನ ಮುಡುಕುತೊರೆಯ ಕಾವೇರಿ ನದಿ ತೀರದಲ್ಲಿ ಸೇರಿದ್ದ ಜನಸ್ತೋಮದಿಂದ ಸೋಮವಾರ ಕೇಳಿ ಬಂತು.

ವಿವಾಹ ಪೂರ್ವ (ಪ್ರಿ–ವೆಡ್ಡಿಂಗ್) ಫೋಟೊಶೂಟ್‌ನಲ್ಲಿ ಭಾಗಿಯಾಗಿದ್ದ ವೇಳೆ ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪ ಮುಳುಗಿ, ಮೃತಪಟ್ಟಮೈಸೂರಿನ ಕ್ಯಾತಮಾರನಹಳ್ಳಿಯ ನಿವಾಸಿಗಳಾದ ಹಸೆಮಣೆ ಏರಬೇಕಿದ್ದ ಶಶಿಕಲಾ (20) ಮತ್ತು ಚಂದ್ರು (30) ಅವರ ಮೃತದೇಹಗಳನ್ನು ನುರಿತ ಈಜುಗಾರರು ನದಿಯಿಂದ ಹೊರಕ್ಕೆ ತಂದಾಗ ಸೇರಿದ್ದ ಜನಸ್ತೋಮ ಮಮ್ಮಲ ಮರುಗಿತು.

‘ಭ್ರಮಾರಂಭ, ಮಲ್ಲಿಕಾರ್ಜುನ ದೇಗುಲ ಇರುವ ದಂಡೆಯಾಗಿದ್ದರೆ ಸೋಮವಾಗಿದ್ದರಿಂದ ಹೆಚ್ಚಿನ ಜನರಿದ್ದರು. ಇಲ್ಲಿ ಯಾರಾದರೂ ಸರಿ, ಈಜಿ ಮುಳುಗುತ್ತಿದ್ದ ಜೋಡಿಯನ್ನು ಬದುಕಿಸುತ್ತಿದ್ದರು. ಆದರೆ, ಇದು ಹೆಮ್ಮಿಗೆ ಭಾಗದ ಎದುರಿನ ದಂಡೆಯಾಗಿದ್ದರಿಂದ ಜನರು ವಿರಳಾತಿವಿರಳ ಸಂಖ್ಯೆಯಲ್ಲಿದ್ದರು. ಹೀಗಾಗಿ, ದಂಡೆಗೆ ಕೇವಲ ಕೆಲವೇ ಅಡಿಗಳಷ್ಟು ದೂರವಿದ್ದರೂ ಬದುಕುಳಿಯಲು ಸಾಧ್ಯವಾಗಲಿಲ್ಲ’ ಎಂದು ಬಹುತೇಕ ಜನರು ಮಾತನಾಡಿಕೊಳ್ಳುತ್ತಿದ್ದರು.

ಕಣ್ಣಾಲಿಗಳು ಒದ್ದೆಯಾದವು

ನವಜೋಡಿಗಳು ತೆಗೆಸಿಕೊಂಡಿದ್ದ ಫೋಟೊಗಳನ್ನು ಕ್ಯಾಮೆರಾದಲ್ಲಿ ಹಾಗೂ ಮೊಬೈಲ್‌ನಲ್ಲಿ ನೋಡುತ್ತಿದ್ದರೆ ಸೇರಿದ್ದ ಜನರ ಕಣ್ಣಾಲಿಗಳು ತೇವಗೊಳ್ಳುತ್ತಿದ್ದವು. ಮೈಸೂರು ನಗರದ ಅನೇಕ ಭಾಗಗಳಲ್ಲಿ ಇವರು ಫೋಟೊ ತೆಗೆಸಿಕೊಂಡಿದ್ದರು. ನ. 22 ಆಗಿದ್ದರೆ ಇವರ ವಿವಾಹ ಮಹೋತ್ಸವ ನೆರವೇರುತ್ತಿತ್ತು ಎಂದು ಹಲವು ಮಂದಿ ಶೋಕಿಸಿದರು.

ಕುಟುಂಬಕ್ಕೆ ಆಧಾರವಾಗಿದ್ದ ಚಂದ್ರು

ಕಾಂಕ್ರೀಟ್‌ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಚಂದ್ರು ಕುಟುಂಬಕ್ಕೆ ಆಧಾರವಾಗಿದ್ದ ಎಂದು ಕ್ಯಾತಮಾರನಹಳ್ಳಿಯ ಮುಖಂಡರು ಹೇಳುತ್ತಾರೆ. ಶಶಿಕಲಾ ಅವರ ಕುಟುಂಬದವರೂ ಬಡವರೇ ಆಗಿದ್ದಾರೆ ಎಂದು ಸ್ಥಳೀಯ ಮುಖಂಡರು ಹೇಳುತ್ತಾರೆ. ಇಬ್ಬರೂ ಮೃತಪಟ್ಟಿರುವುದು ಮದುವೆ ಮನೆಯಲ್ಲಿ ಸೂತಕವನ್ನು ತಂದಿದೆ. ಎರಡೂ ಕುಟುಂಬದವರ ರೋಧನ ಮುಗಿಲುಮುಟ್ಟುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT