ಗುರುವಾರ , ಜನವರಿ 21, 2021
16 °C
ಬಿಜೆಪಿ–ಕಾಂಗ್ರೆಸ್‌ ಜಿಲ್ಲಾ ಘಟಕಗಳಲ್ಲಿ ಬಿರುಸಿನ ಚಟುವಟಿಕೆ: ಜೆಡಿಎಸ್‌ನಲ್ಲಿ ಕಂಡುಬರುತ್ತಿಲ್ಲ ಕಲರವ

ಪಕ್ಷಗಳ ಚಿತ್ತ ಗ್ರಾಮ ಗದ್ದುಗೆಯತ್ತ..!

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಿಕ್ಕಾಗಿ ಆಯೋಗ ಒಂದೆಡೆ ಸಕಲ ಸಿದ್ಧತೆ ನಡೆಸಿದೆ. ‘ಗ್ರಾಮ ಗದ್ದುಗೆ’ಯ ಪಾರಮ್ಯಕ್ಕಾಗಿ ಮತ್ತೊಂದೆಡೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮದೇ ಕಸರತ್ತಿನಲ್ಲಿ ತೊಡಗಿವೆ.

ಗ್ರಾಮ ಪಂಚಾಯಿತಿ ಚುನಾವಣೆ ಪಕ್ಷದ ಚಿಹ್ನೆಯಡಿ ನಡೆಯದಿದ್ದರೂ; ರಾಜಕೀಯ ಪಕ್ಷಗಳ ಪಾಲಿಗೆ ಮಹತ್ವದ್ದಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ (2023) ಸ್ಪರ್ಧಿಸಲಿರುವ ಹಾಲಿ, ಮಾಜಿ ಶಾಸಕರು ಸೇರಿದಂತೆ ಮೊದಲ ಬಾರಿಗೆ ಅಖಾಡಕ್ಕಿಳಿಯುವವರ ಪಾಲಿಗೂ ಇದು ಮಹತ್ವದ ಚುನಾವಣೆಯಾಗಿದೆ.

ಪ್ರತಿ ಗ್ರಾಮದಲ್ಲೂ ತನ್ನ ಬೆಂಬಲಿಗ, ಪಕ್ಷದ ಕಾರ್ಯಕರ್ತರನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿಕೊಂಡರೇ, ವಿಧಾನಸಭಾ ಚುನಾವಣೆಯನ್ನು ಸುಲಲಿತವಾಗಿ ನಿಭಾಯಿಸಬಹುದು ಎಂಬುದು ರಾಜಕಾರಣದಲ್ಲಿ ಪಳಗಿರುವ ಅನೇಕರ ಲೆಕ್ಕಾಚಾರ.

ತಮ್ಮ ಈ ಲೆಕ್ಕಾಚಾರದ ಸಾಕಾರಕ್ಕಾಗಿಯೇ ವಿವಿಧ ಪಕ್ಷಗಳ ಮುಖಂಡರು, ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಸಕ್ರಿಯರಾಗಿದ್ದಾರೆ. ಪ್ರವಾಸವನ್ನೂ ನಡೆಸಿದ್ದಾರೆ. ಅಖಾಡಕ್ಕಿಳಿಯುವಂತೆ ಬೆಂಬಲಿಗರನ್ನು ಹುರಿದುಂಬಿಸಿದ್ದಾರೆ. ಇದರಿಂದಾಗಿ ಚುನಾವಣೆ ಘೋಷಣೆಗೂ ಮುನ್ನವೇ ಮೈಸೂರು ‘ಗ್ರಾಮಾಂತರಂಗ’ದ ಚಿತ್ರಣ ರಂಗೇರಿದೆ.

‘ಕಮಲ’ ಅರಳಿಸಲು ಹರಸಾಹಸ

ಹಳೆ ಮೈಸೂರು ಪ್ರಾಂತ್ಯದಲ್ಲಿ ‘ತಾವರೆ’ಯ ಬೇರುಗಳನ್ನು ಆಳಕ್ಕಿಳಿಸಲು ಕಮಲ ಪಡೆ ಅಹೋರಾತ್ರಿ ಶ್ರಮಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಚುನಾವಣೆಯ ಸಾರಥ್ಯ ವಹಿಸಿದ್ದು, ತನ್ನ ಮಾಜಿ ಗುರುವಿನ (ಸಿದ್ದರಾಮಯ್ಯ) ತವರಲ್ಲಿ ಕಮಲ ಅರಳಿಸಿ, ವರಿಷ್ಠರ ವಿಶ್ವಾಸಕ್ಕೆ ಪಾತ್ರರಾಗಲು ಈಗಾಗಲೇ ಅಖಾಡಕ್ಕಿಳಿದಿದ್ದಾರೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ ಪ್ರವಾಸವನ್ನು ನಡೆಸಿದ್ದಾರೆ. ಪಕ್ಷದ ಕಾರ್ಯಕರ್ತರಿಗೆ ಬೆಂಬಲ ಸೂಚಿಸಿ, ಚುನಾವಣಾ ಸ್ಪರ್ಧೆಗೆ ಹುರಿದುಂಬಿಸಿದ್ದಾರೆ.

ಹಿಂದಿನ ಚುನಾವಣೆಯಲ್ಲೇ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ವರುಣಾ ಮಂಡಲದ ಕಾರ್ಯಕಾರಿಣಿಯಲ್ಲಿ ಭಾಗಿಯಾಗಿ ಪಕ್ಷದ ಕಾರ್ಯಕರ್ತರನ್ನು, ಬೆಂಬಲಿಗರನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಿಸಿಕೊಳ್ಳುವಂತೆ ಸ್ಥಳೀಯರಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ವಿಜಯೇಂದ್ರ ತಂಡ ಕಾರ್ಯೋನ್ಮುಖವಾಗಿದೆ.

‘49 ಮಹಾಶಕ್ತಿ ಕೇಂದ್ರಗಳ ಸಭೆ ನಡೆದಿವೆ. ವರುಣಾ, ನಂಜನಗೂಡು ಬಿಟ್ಟು ಉಳಿದ ಮಂಡಲಗಳ ಸಭೆ ಈಗಾಗಲೇ ನಡೆದಿದೆ. ಗ್ರಾಮ ಪಂಚಾಯಿತಿ ಚುನಾವಣೆ ಚಟುವಟಿಕೆ ಎರಡು ತಿಂಗಳಿನಿಂದಲೂ ನಿರಂತರವಾಗಿದೆ. ಚುನಾವಣೆ ಗೆಲ್ಲಲಿಕ್ಕಾಗಿಯೇ ಪಂಚಸೂತ್ರ ಪಾಲಿಸುತ್ತೇವೆ’ ಎಂದು ಬಿಜೆಪಿ ಜಿಲ್ಲಾ ಘಟಕದ (ಗ್ರಾಮಾಂತರ) ಅಧ್ಯಕ್ಷೆ ಮಂಗಳಾ ಸೋಮಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣ

ವರುಣಾ, ಎಚ್‌.ಡಿ.ಕೋಟೆ, ಹುಣಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿರುವ ಕಾಂಗ್ರೆಸ್‌ಗೆ ಗ್ರಾಮ ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಈಚೆಗಿನ ಬಹುತೇಕ ಚುನಾವಣೆಗಳಲ್ಲಿ ಸೋಲಿನ ಮುಖಭಂಗ ಅನುಭವಿಸುತ್ತಿರುವ ಕಾಂಗ್ರೆಸ್‌ಗೆ, ತನ್ನ ತವರು ಜಿಲ್ಲೆಯಲ್ಲೇ ಗೆಲುವಿನ ಟಾನಿಕ್‌ ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಬಲಪ್ರದರ್ಶಿಸುವ ಅನಿವಾರ್ಯತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗಿದೆ.

ಹಳೆ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಇದೂವರೆಗೂ ಬೇರೂರಿಲ್ಲ. ಕಾಂಗ್ರೆಸ್‌–ಜೆಡಿಎಸ್‌ ನಡುವೆಯೇ ಹಣಾಹಣಿ ನಡೆದಿತ್ತು. ಬದಲಾದ ಕಾಲಘಟ್ಟದಲ್ಲೂ ಮೇಲುಗೈ ಸಾಧಿಸಲು ಕಾಂಗ್ರೆಸ್‌ ಈ ಬಾರಿ ಚುನಾವಣೆ ಘೋಷಣೆಗೂ ಮುನ್ನವೇ ಅಖಾಡಕ್ಕಿಳಿದಿದೆ. ಈಗಾಗಲೇ ಸ್ಥಳೀಯ ಮುಖಂಡರು ಒಂದು ಸುತ್ತಿನ ಪ್ರವಾಸವನ್ನು ಮುಗಿಸಿದ್ದಾರೆ.

‘ಕೋವಿಡ್‌ನ ಸಂಕಷ್ಟದ ಕಾಲದಲ್ಲೂ ಜನರೊಟ್ಟಿಗೆ ಕಾಂಗ್ರೆಸ್‌ ಗುರುತಿಸಿಕೊಂಡಿದೆ. ಜಿಲ್ಲೆಯ ಕಾಂಗ್ರೆಸ್‌ನ ಕೊರೊನಾ ವಾರಿಯರ್ಸ್‌ಗಳಿಗೆ ₹ 8.67 ಕೋಟಿ ಮೊತ್ತದ ವಿಮಾ ಪಾಲಿಸಿಯನ್ನು ಕೆಪಿಸಿಸಿ ವಿತರಿಸಿದೆ. ಬೂತ್ ಏಜೆಂಟ್, ಪ್ರೆಸಿಡೆಂಟ್‌ ಮೂಲಕ ಗೆಲ್ಲುವ ಅಭ್ಯರ್ಥಿಗಳ ಶೋಧ ನಡೆದಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ಯುವಕರನ್ನು ಅಖಾಡಕ್ಕಿಳಿಸಲು ಚಿಂತನೆ ನಡೆದಿದೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ (ಗ್ರಾಮಾಂತರ) ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹೇಳಿದರು.

‘ದಳಪತಿ’ ಕೋಟೆಯಲ್ಲಿ ಬಿರುಕು; ಅಸ್ತಿತ್ವದ ಪ್ರಶ್ನೆ

2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಗ್ರಾಮಾಂತರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಐದರಲ್ಲಿ ಜಯಭೇರಿ ಬಾರಿಸಿದ್ದ ಜೆಡಿಎಸ್‌ ಇದೀಗ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಿದೆ.

ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಚ್‌.ವಿಶ್ವನಾಥ್ ತೆನೆ ಹೊತ್ತ ಮಹಿಳೆಯನ್ನು ಕೆಳಗಿರಿಸಿ ಕಮಲ ಮುಡಿದಿದ್ದಾರೆ. ಇದರ ಪರಿಣಾಮ ಜೆಡಿಎಸ್‌ ಒಂದು ಕ್ಷೇತ್ರ ಕಳೆದುಕೊಂಡಿದೆ.

ಜಿ.ಟಿ.ದೇವೇಗೌಡ ಜೆಡಿಎಸ್‌ ಜೊತೆ ಆಂತರಿಕ ಸಖ್ಯ ತೊರೆದು ವರ್ಷ ಉರುಳಿದವು. ಬಿಜೆಪಿ–ಕಾಂಗ್ರೆಸ್‌ ಜೊತೆಗಿನ ಒಡನಾಟ ಹೆಚ್ಚಿದೆ. ಇದು ಚಾಮುಂಡೇಶ್ವರಿ, ಹುಣಸೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಜೆಡಿಎಸ್‌ಗೆ ಒಳಪೆಟ್ಟು ನೀಡಲಿದೆ. ಅಶ್ವಿನ್‌ಕುಮಾರ್‌, ಕೆ.ಮಹದೇವ್‌ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ. ಜಿಲ್ಲಾ ಜೆಡಿಎಸ್‌ನ ಚುಕ್ಕಾಣಿ ಇದೀಗ ಸಾ.ರಾ.ಮಹೇಶ್‌ ಹೆಗಲಿಗಿದೆ.

‘ಪಕ್ಷದ ಸಂಘಟನೆ ತಳಹಂತದಲ್ಲಿ ಭದ್ರವಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಶಾಸಕರೇ ಗ್ರಾಮ ಪಂಚಾಯಿತಿ ಚುನಾವಣೆಯ ಉಸ್ತುವಾರಿ ಹೊರಲಿದ್ದಾರೆ. ಉಳಿದೆಡೆ ಪರಾಜಿತರು ಮುಂಚೂಣಿಯಲ್ಲಿದ್ದಾರೆ. ವರುಣಾ, ನಂಜನಗೂಡಿನಲ್ಲಷ್ಟೇ ಕೆಲವೊಂದು ಕಾರಣದಿಂದ ಪಕ್ಷದ ಸಂಘಟನೆ ಕೊಂಚ ಹಿನ್ನಡೆ ಅನುಭವಿಸಿದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ (ಗ್ರಾಮಾಂತರ) ಅಧ್ಯಕ್ಷ ಎನ್.ನರಸಿಂಹಸ್ವಾಮಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು