ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ವ’ ಪ್ರದರ್ಶನಕ್ಕೆ 2ನೇ ದಿನವೂ ಉತ್ತಮ ಪ್ರತಿಕ್ರಿಯೆ

ಬೆಳಿಗ್ಗೆ 10 ಗಂಟೆಯಿಂದ ಸಂಜೆ 7.45ರವರೆಗೂ ನಡೆದ ನಾಟಕ
Last Updated 14 ಮಾರ್ಚ್ 2021, 5:46 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣದ ಬಹು ನಿರೀಕ್ಷಿತ ನಾಟಕ ‘ಪರ್ವ’ ಪ್ರದರ್ಶನಕ್ಕೆ 2ನೇ ದಿನವಾದ ಶನಿವಾರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶೇ 90ರಷ್ಟು ಆಸನಗಳು ಭರ್ತಿಯಾಗಿದ್ದು, ರಾತ್ರಿಯವರೆಗೂ ದಣಿಯದೇ ಪ್ರೇಕ್ಷಕರು ನಾಟಕ ವೀಕ್ಷಿಸಿದರು. ಬೆಂಗಳೂರಿನಿಂದಲೇ ಹೆಚ್ಚಿನ ಮಂದಿ ನಾಟಕ ನೋಡಿದ್ದು ವಿಶೇಷ ಎನಿಸಿತ್ತು.

ನಾಟಕ ವೀಕ್ಷಿಸುತ್ತಾ ಚಹಾ ವಿರಾಮದ ವೇಳೆ ‍ಪ್ರತಿಕ್ರಿಯಿಸಿದ ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸಿ.ಬಸವಲಿಂಗಯ್ಯ, ‘ಪರ್ವ ನಾಟಕವನ್ನು ಪ್ರಸ್ತುತ ಭಾರತದ ಎಲ್ಲರೂ ನೋಡಬೇಕು. ಈ ತರಹದ ಮಹಾಭಾರತವೂ ಇದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಇದು ಅಲೌಕಿಕವಾದದ್ದಲ್ಲ, ಲೌಕಿಕ ಮಹಾಭಾರತ. ಜಿಲ್ಲೆ ಜಿಲ್ಲೆಗಳಲ್ಲೂ ಈ ನಾಟಕ ಪ್ರದರ್ಶನ ಕಾಣಬೇಕು’ ಎಂದು ತಿಳಿಸಿದರು.

ಮಂಡ್ಯದ ಡಯಟ್‌ ಉಪನ್ಯಾಸಕ ಭಾನುಕುಮಾರ್ ಪ್ರತಿಕ್ರಿಯಿಸಿ, ‘ನಾಟಕ ಅದ್ಭುತವಾಗಿ ಮೂಡಿ ಬಂದಿದೆ. ಆದರೆ, ದೀರ್ಘ ಸಮಯ ತೆಗೆದುಕೊಂಡಿತು. ಕೂರುವುದಕ್ಕೆ ಕಷ್ಟ ಎನಿಸಿತು. ಭೋಜನದ ನಂತರದ ಕೆಲವು ಭಾಗಗಳನ್ನು ಸ್ವಲ್ಪ ಕಡಿಮೆ ಮಾಡಬಹುದು’ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ನಿರ್ದೇಶಕ ಪ್ರಕಾಶ್ ಬೆಳವಾಡಿ, ‘ನಾಟಕದ ಸಮಯ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಪ್ರಯತ್ನ ನಡೆದಿದೆ. ತಪ್ಪುಗಳನ್ನು ತಿದ್ದುಕೊಂಡು ಮುಂದೆ ಸಾಗುತ್ತೇವೆ’ ಎಂದು ಹೇಳಿದರು.

ಕಲಾವಿದರಾದ ತುಳಸಿ ರಾಮಚಂದ್ರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‌ ನಾಟಕ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT