ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಡಿ ಮಣಿಸುವ ಯತ್ನಕ್ಕೆ ಹಿನ್ನಡೆ

ಮೈಮುಲ್‌ ಚುನಾವಣೆ ಮಾರ್ಚ್‌ 16ಕ್ಕೆ: ನಿರ್ದೇಶಕರ ಸಂಖ್ಯೆ ಹೆಚ್ಚಳ
Last Updated 2 ಮಾರ್ಚ್ 2021, 5:09 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್‌) ಚುನಾವಣೆಗೆ ನ್ಯಾಯಾಲಯ ಹಸಿರು ನಿಶಾನೆ ತೋರಿದೆ. ಮಾರ್ಚ್‌ 16ರಂದು ನಿಗದಿಯಾಗಿ ಚುನಾವಣಾ ವೇಳಾಪಟ್ಟಿಯೂ ಪ್ರಕಟಗೊಂಡಿದೆ.

ಫೆ.28ಕ್ಕೆ ಮೈಮುಲ್‌ ಚುನಾವಣೆ ನಡೆಯಬೇಕಿತ್ತು. ತಾಲ್ಲೂಕುವಾರು ನಿರ್ದೇಶಕರ ಆಯ್ಕೆಗೆ ಅವಕಾಶ ಕೊಡಬೇಕು ಎಂದು, ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿದಾರರ ತಕರಾರನ್ನು ಪುರಸ್ಕರಿಸದ ನ್ಯಾಯಾಲಯ, ನಿಗದಿಯಂತೆ ವಿಭಾಗವಾರು ಚುನಾವಣೆ ನಡೆಸಲು ಫೆ.26ರ ಶುಕ್ರವಾರ ಆದೇಶ ಹೊರಡಿಸಿತ್ತು.

ನ್ಯಾಯಾಲಯದ ಆದೇಶ ಹೊರಬಿದ್ದ ಬೆನ್ನಿಗೆ ಸಹಕಾರಿ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ನಾಮಪತ್ರ ಸಲ್ಲಿಕೆ ಶುರುವಾಗಿದೆ. ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ಜೆಡಿಎಸ್‌ ಶಾಸಕ, ಸಹಕಾರಿ ಕ್ಷೇತ್ರದ ಧುರೀಣ ಜಿ.ಟಿ.ದೇವೇಗೌಡ, ಅವರ ಪುತ್ರ ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಬೆಂಬಲ ಗಿಟ್ಟಿಸಲು ಮುಗಿಬಿದ್ದಿದ್ದಾರೆ.

ಜಿಟಿಡಿ ಹಿಡಿತ ಪ್ರಬಲ: ಮೈಸೂರು ಜಿಲ್ಲಾ ಸಹಕಾರಿ ರಂಗದಲ್ಲಿ ಶಾಸಕ ಜಿ.ಟಿ.ದೇವೇಗೌಡ ಪ್ರಬಲ ಹಿಡಿತ ಹೊಂದಿದ್ದಾರೆ. ಸಹಕಾರ ಕ್ಷೇತ್ರದಲ್ಲಿನ ಅವರ ಪ್ರಾಬಲ್ಯ ಮುರಿದರೆ, ಅವರ ರಾಜಕೀಯ ಶಕ್ತಿಯನ್ನೂ ಕುಂದಿಸಬಹುದು ಎಂಬ ಲೆಕ್ಕದೊಂದಿಗೆ, ಕಾಂಗ್ರೆಸ್‌ನ ಕೆಲವು ಮಾಜಿ ಹಾಗೂ ಹಾಲಿ ಶಾಸಕರು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಜೊತೆಗೆ ಮೈತ್ರಿಗೆ ಮುಂದಾಗಿದ್ದರು. ಜಿಟಿಡಿ ಹಣಿಯಲಿಕ್ಕಾಗಿ, ಸಿದ್ದರಾಮಯ್ಯ ಆಪ್ತೇಷ್ಟರು ಬೆಂಗಳೂರಿನಲ್ಲಿ ಸಾ.ರಾ.ಮಹೇಶ್ ಜೊತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು. ಆದರೆ ಇದೀಗ ಮೈಸೂರು ಮಹಾನಗರ ಪಾಲಿಕೆಯಲ್ಲಿನ ‘ಮೈತ್ರಿ’ಯು ಒಳ ಒಪ್ಪಂದಕ್ಕೆ ತೀವ್ರ ಹಿನ್ನಡೆ ಉಂಟು ಮಾಡಿದೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಆಪ್ತರಾಗಿರುವ ಶಾಸಕ ಸಾ.ರಾ.ಮಹೇಶ್‌ ಸಹ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವುದರಿಂದ, ಕಾಂಗ್ರೆಸ್‌ ಶಾಸಕರು, ಮಾಜಿ ಶಾಸಕರೆಲ್ಲ ಈ ಹಿಂದೆ ಜಿ.ಟಿ.ದೇವೇಗೌಡರನ್ನು ಮಣಿಸಲು ರಚಿಸಿಕೊಂಡಿದ್ದ ಒಳ ಮೈತ್ರಿಯಿಂದ ಅನಿವಾರ್ಯವಾಗಿ ಹೊರಬರಬೇಕಿದೆ. ಇದು ಜಿಟಿಡಿ ಪಾಲಿಗೆ ವರದಾನವಾಗಲಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಜಿಲ್ಲಾ ಕಾಂಗ್ರೆಸ್‌ನ ಪ್ರಮುಖರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಆರು ಸ್ಥಾನ ಹೆಚ್ಚಳ

ಮೈಮುಲ್‌ನ ಈ ಹಿಂದಿನ ಆಡಳಿತ ಮಂಡಳಿಯಲ್ಲಿ ಒಂಬತ್ತು ಚುನಾಯಿತ ನಿರ್ದೇಶಕರಿದ್ದರು. ಈ ಬಾರಿ ಆರು ನಿರ್ದೇಶಕರ ಸ್ಥಾನ ಹೆಚ್ಚಳಗೊಂಡಿದ್ದು, ಒಟ್ಟು 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಹುಣಸೂರು ವಲಯಕ್ಕೆ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್‌.ನಗರ, ಎಚ್‌.ಡಿ.ಕೋಟೆ ಸೇರಿವೆ. ಆರು ಪುರುಷರು ಹಾಗೂ ಇಬ್ಬರು ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಮೈಸೂರು ವಲಯದಿಂದ ಮೈಸೂರು, ನಂಜನಗೂಡು, ತಿ.ನರಸೀಪುರದಿಂದ ಐವರು ಪುರುಷರು ಹಾಗೂ ಇಬ್ಬರು ಮಹಿಳಾ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಆರಂಭ

ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್‌) 15 ನಿರ್ದೇಶಕ ಸ್ಥಾನಗಳಿಗೆ ಮಾರ್ಚ್‌ 16ರಂದು ಚುನಾವಣೆ ನಡೆಯಲಿದೆ.

ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮಾರ್ಚ್‌ 8ರವರೆಗೆ ಉಮೇದುವಾರಿಕೆ ಸಲ್ಲಿಸಲು ಅವಕಾಶವಿದೆ. 9ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 10ರಂದು ವಾಪಸ್‌ ಪಡೆಯಬಹುದು. ಸ್ಪರ್ಧಿಗಳಿಗೆ ಅಂದೇ ಚಿಹ್ನೆ ನೀಡಲಾಗುವುದು.

ಮಾರ್ಚ್‌ 16ರಂದು ಬೆಳಿಗ್ಗೆ 9ರಿಂದ ಸಂಜೆ 4 ಗಂಟೆಯವರೆಗೂ ಮತದಾನ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಬಳಿಕ ಫಲಿತಾಂಶ ಘೋಷಿಸಲಾಗುವುದು ಎಂದು ಮೈಮುಲ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT