ಗುರುವಾರ , ಸೆಪ್ಟೆಂಬರ್ 23, 2021
28 °C
ನಂಜನಗೂಡಿನ ಎ.ಟಿ. ಅಂಡ್ ಎಸ್ ಕಾರ್ಖಾನೆ ವಿರುದ್ಧ ಕಾರ್ಮಿಕರ ಆಕ್ರೋಶ

ನಂಜನಗೂಡು: 150ನೇ ದಿನ ಪೂರೈಸಿದ ಕೆಲಸದಿಂದ ವಜಾ ಖಂಡಿಸಿ ತಮಟೆ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಜನಗೂಡು: ನಗರ ಕೈಗಾರಿಕಾ ಪ್ರದೇಶದಲ್ಲಿರುವ ಎ.ಟಿ. ಅಂಡ್ ಎಸ್ ಕಾರ್ಖಾನೆ ವಿರುದ್ದ ಕಾರ್ಮಿಕರು ನಡೆಸುತ್ತಿರುವ ಹೋರಾಟಕ್ಕೆ 150 ದಿನ ತುಂಬಿದ್ದು, ಗುರುವಾರ ತಮಟೆ ಚಳವಳಿ ನಡೆಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಮಿಕರು, ಕಾರ್ಖಾನೆ ವಿರುದ್ಧ ಘೋಷಣೆ ಕೂಗಿದರು.

ತಮಟೆ ಚಳವಳಿಗೆ ಚಾಲನೆ ನೀಡಿದ ಸ್ವರಾಜ್ ಇಂಡಿಯಾ ಸಂಘಟನೆ ಮುಖಂಡ ಉಗ್ರ ನರಸಿಂಹೇಗೌಡ ಮಾತನಾಡಿ, ‘ಸಮಸ್ಯೆ ಬಗೆಹರಿಸು ವಂತೆ ಮನವಿ ಮಾಡಿದ್ದ 77 ಕಾರ್ಮಿಕರನ್ನು ಕಾರ್ಖಾನೆ ಆಡಳಿತ ಮಂಡಳಿಯು ವಜಾಗೊಳಿಸಿದೆ. ಸಮಸ್ಯೆ ಯನ್ನು ನ್ಯಾಯಾಲಯದಲ್ಲಿ ಬಗೆಹರಿಸಿ ಕೊಳ್ಳುವಂತೆ ಕಂಪನಿ ಹೇಳುತ್ತಿದೆ. ಕನಿಷ್ಠ ಸಂಬಳ ಪಡೆದು ಜೀವನ ನಡೆಸುತ್ತಿರುವ ಬಡಕಾರ್ಮಿಕರು ಕೋರ್ಟ್‌ ಮೊರೆ ಹೋಗಲು ಸಾಧ್ಯವೇ? ಸರ್ಕಾರಗಳಿಗೆ ಕನಿಷ್ಠ ಸಂವೇದನಾಶೀಲತೆ, ಕಾರ್ಮಿಕರ ಬಗ್ಗೆ ಕಾಳಜಿ ಇದ್ದಿದ್ದರೆ ಈ ಸಮಸ್ಯೆಯನ್ನು ಬಗೆಹರಿಸಬಹುದಿತ್ತು’ ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಮಾತನಾಡಿ, ‘ಆಸ್ಟ್ರಿಯಾ ಮೂಲದ ಈ ಕಾರ್ಖಾನೆ ನಮ್ಮ ನೆಲದ ಕಾನೂನನ್ನು ಉಲ್ಲಂಘಿಸಿ, ಕಾರ್ಮಿಕ ಕಾನೂನುಗಳು ಹಾಗೂ ಮಾನವ ಹಕ್ಕುಗಳನ್ನು ಪಾಲಿಸದೇ ಕಾರ್ಮಿಕರಿಗೆ ಅನ್ಯಾಯ ಮಾಡಿದೆ’ ಎಂದು ದೂರಿದರು.

ಕಾರ್ಮಿಕರು ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿ ಅಪ್ರೆಂಟಿಸ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಟೆಕ್ನಿಕಲ್ ಟ್ರೈನಿ ಹುದ್ದೆಯನ್ನು ಕೊಡುತ್ತಿದೆ. ಯಾವುದೇ ಸೌಲಭ್ಯ ಕೊಡದೆ, ಕನಿಷ್ಠ ಕೂಲಿಗೆ ದುಡಿಸಿಕೊಂಡು ಅನ್ಯಾಯ ಮಾಡುತ್ತಿದೆ. ತರಬೇತಿ ಅವಧಿ ಮುಗಿದ ನಂತರವು ಹತ್ತು ವರ್ಷಗಳ ಕಾಲ ಟ್ರೈನಿಯಾಗಿ ದುಡಿಸಿಕೊಳ್ಳಲಾಗುತ್ತದೆ. ಅನ್ಯಾಯವನ್ನು ಸಹಿಸದ ಕಾರ್ಮಿಕರು ಕಾಯಂಗೊಳಿಸಲು ನ್ಯಾಯಾಲಯದ ಮೊರೆ ಹೋಗಿದ್ದರು. ಇದರಿಂದ ಕೋಪಗೊಂಡ ಕಾರ್ಖಾನೆಯ ಆಡಳಿತ ಮಂಡಳಿಯು ಕಿರುಕುಳ ನೀಡಿತ್ತು. ಈ ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಕೆಲಸದಿಂದ ವಜಾ ಮಾಡಲಾಗಿದೆ’ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ರೈತ ಸಂಘದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಹೆಜ್ಜಿಗೆ ಪ್ರಕಾಶ್, ದಸಂಸ ಮುಖಂಡ ಚೋರನಹಳ್ಳಿ ಶಿವಣ್ಣ, ಬೊಕ್ಕಹಳ್ಳಿ ನಂಜುಂಡಸ್ವಾಮಿ ಹಾಗೂ ಬೊಕ್ಕಹಳ್ಳಿ ಮಹದೇವಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು