ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಸ್ಟ್‌ ಆಸ್ತಿ ಮಾರಾಟ ಯತ್ನ

ರಾಮಚಂದ್ರಾಪುರ ಮಠದ ವಿರುದ್ಧ ವಕೀಲರ ಆರೋಪ
Last Updated 5 ಅಕ್ಟೋಬರ್ 2021, 12:26 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಬೋಗಾದಿ ರೈಲ್ವೆ ಬಡಾವಣೆ ಸಮೀಪದ ಶ್ರೀಸಾಯಿ ಸರಸ್ವತಿ ವಿದ್ಯಾಕೇಂದ್ರದ ಗುರುಕುಲ ಯೋಗಾಶ್ರಮ ಟ್ರಸ್ಟ್‌ನ ಆಸ್ತಿಯನ್ನು, ರಾಮಚಂದ್ರಾಪುರ ಮಠ ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದೆ’ ಎಂದು ವಕೀಲ ಅ.ಮ.ಭಾಸ್ಕರ್ ಮಂಗಳವಾರ ಇಲ್ಲಿ ಆರೋಪಿಸಿದರು.

‘₹ 17 ಕೋಟಿ ಮೌಲ್ಯದ 7908 ಚದರ ಮೀಟರ್‌ ಜಾಗವನ್ನು, ಕೇವಲ ₹ 6.5 ಕೋಟಿಗೆ ಮಾರಾಟ ಮಾಡಲು ಟ್ರಸ್ಟ್‌ನ ಹಾಲಿ ಧರ್ಮದರ್ಶಿಯಾಗಿರುವ ರಾಘವೇಶ್ವರ ಭಾರತಿ ಸ್ವಾಮೀಜಿ, ಬಿ.ಕೆ.ರಾಜು ಎಂಬುವರಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ದೂರಿದರು.

1990ರಲ್ಲಿ ಕೃಷ್ಣಭಟ್, ನಾರಾಯಣಭಟ್ ಎಂಬುವರು ಗುರುಕುಲ ಯೋಗಾಶ್ರಮ ಟ್ರಸ್ಟ್ ಎಂಬ ನ್ಯಾಸವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಚಿಸಿದ್ದರು. ಕೃಷ್ಣಭಟ್ ಶೈಕ್ಷಣಿಕ ಹಾಗೂ ಚಾರಿಟೆಬಲ್ ಉದ್ದೇಶಕ್ಕೆ ಸರ್ಕಾರ ನೀಡಿದ ಬೋಗಾದಿಯ ಸರ್ವೆ ನಂಬರ್ 10/1 ಬಿ ನಲ್ಲಿನ 2.10 ಎಕರೆ ಜಮೀನಿನ ಮಾಲೀಕತ್ವ ಹೊಂದಿದ್ದರು. ದುರ್ಬಳಕೆಯಾದಲ್ಲಿ ಜಮೀನನ್ನು ವಾಪಸ್‌ ಪಡೆಯುವ ಷರತ್ತನ್ನು ಸರ್ಕಾರ ನಮೂದಿಸಿತ್ತು.

ಇಲ್ಲಿ ಆರಂಭವಾದ ಶ್ರೀಸಾಯಿ ಸರಸ್ವತಿ ವಿದ್ಯಾಕೇಂದ್ರ ಬೋಗಾದಿ ಸುತ್ತಮುತ್ತಲಿನ ಅಪಾರ ಬಡ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿತ್ತು. ಗೋಶಾಲೆಯೂ ಇಲ್ಲಿತ್ತು.

ಟ್ರಸ್ಟ್‌ನ ಮುಖ್ಯ ಧರ್ಮದರ್ಶಿಯಾಗಿದ್ದ ಕೆ.ನಾರಾಯಣ ಭಟ್ ಕಾಲವಾದ ನಂತರ, ರಾಘವೇಶ್ವರ ಭಾರತಿ ಸ್ವಾಮೀಜಿ ಮುಖ್ಯ ಧರ್ಮದರ್ಶಿಗಳಾದರು. ಸರ್ಕಾರಿ ಆದೇಶವನ್ನು ಮುಚ್ಚಿಟ್ಟು, ನಿರ್ದಿಷ್ಟ ಉದ್ದೇಶಕ್ಕಾಗಿ ಕೊಟ್ಟಿರುವ ಜಮೀನನ್ನು ಇದೀಗ ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಭಾಸ್ಕರ್‌ ದೂರಿದರು.

ಶ್ರೀ ಚಾಮುಂಡೇಶ್ವರಿ ಗೆಳೆಯರ ಪ್ರಗತಿಪರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಮಾತನಾಡಿ, ‘ಸರ್ಕಾರದ ಆದೇಶ ಉಲ್ಲಂಘಿಸಿರುವ ಸ್ವಾಮೀಜಿಯನ್ನು ಧರ್ಮದರ್ಶಿ ಸ್ಥಾನದಿಂದ ವಜಾಗೊಳಿಸಬೇಕು. ಈ ನಿವೇಶನವನ್ನು ನಮ್ಮ ಪ್ರತಿಷ್ಠಾನಕ್ಕೆ ನೀಡಬೇಕು’ ಎಂದು ಮನವಿ ಮಾಡಿಕೊಂಡರು.

ಹೋರಾಟಗಾರ ಸೋಮು, ವಕೀಲ ಸಚಿನ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT